CM DK Shivakumar Profile: ವಿದ್ಯಾರ್ಥಿ ನಾಯಕನಿಂದ ಸಿಎಂ ಗದ್ದುಗೆಯವರೆಗೆ: ಕನಕಪುರ ಬಂಡೆ ಡಿಕೆ ಶಿವಕುಮಾರ್ ರಾಜಕೀಯ ಪಯಣದ ಹಿನ್ನೋಟ
ಡಿಕೆ ಶಿವಕುಮಾರ್ ಪ್ರೊಫೈಲ್: ಜೆಡಿಎಸ್ ಘಟಾನುಘಟಿಗಳ ವಿರುದ್ಧವೇ ರಾಜಕೀಯ ಅಖಾಡಕ್ಕಿಳಿದು 'ಜೈಂಟ್ ಕಿಲ್ಲರ್' ಎನಿಸಿಕೊಂಡ ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಅವರ ರೋಮಾಂಚನಕಾರಿ ವ್ಯಕ್ತಿಚಿತ್ರ ಇಲ್ಲಿದೆ. ಟಿಕೆಟ್ ಕೈತಪ್ಪಿದಾಗ ಪಕ್ಷೇತರನಾಗಿ ಗೆದ್ದು, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಆಗಿ ದೆಹಲಿ ಮಟ್ಟದಲ್ಲಿ ಬೆಳೆದ ಕರ್ನಾಟಕದ ಮುಖ್ಯಮಂತ್ರಿಯಾಗಿ ಇತಿಹಾಸ ಬರೆದ ಅವರ ರಾಜಕೀಯ ಯಶೋಗಾಥೆಯ ಹಿನ್ನೋಟ ಇಲ್ಲಿದೆ.

ಕನಕಪುರದ ಬಂಡೆ, ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ (DK Shivakumar), ಇದೀಗ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಬರೆದಿದ್ದಾರೆ. ಕಾಲೇಜಿನಲ್ಲೇ ರಾಜಕೀಯ ರಂಗಕ್ಕೆ ಧುಮುಕಿದ ಇವರ 45 ವರ್ಷಗಳ ಸುದೀರ್ಘ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಉದ್ಯಮ ಹಾಗೂ ರಾಜಕಾರಣ ಎರಡರಲ್ಲೂ ಕಠಿಣ ಪರಿಶ್ರಮದಿಂದಲೇ ಸಾಮ್ರಾಜ್ಯ ಕಟ್ಟಿದ ಡಿಕೆಶಿ, ಇಂದು ರಾಜ್ಯದ ಮುಖ್ಯಮಂತ್ರಿ ಗದ್ದುಗೆಯನ್ನು ಅಲಂಕರಿಸುವ ಮೂಲಕ ಕಾಂಗ್ರೆಸ್‌ನ ಧೀಮಂತ ನಾಯಕನಾಗಿ ಹೊರಹೊಮ್ಮಿದ್ದಾರೆ. ಡಿ.ಕೆ ಶಿವಕುಮಾರ್ ಜೀವನ ಜೀವನದ ಸಣ್ಣ ಚಿತ್ರಣ ಇಲ್ಲಿದೆ.
ಕೌಟುಂಬಿಕ ಹಿನ್ನೆಲೆ
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಮೇ 15, 1962 ರಂದು ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಡಿ.ಕೆ. ಶಿವಕುಮಾರ್ ಅವರು ಸದ್ಯ ಸ್ನಾತಕೋತ್ತರ ಪದವೀಧರರಾಗಿದ್ದು, ರಾಜಕಾರಣ ಹಾಗೂ ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ಕೌಟುಂಬಿಕ ಹಿನ್ನೆಲೆಯನ್ನು ನೋಡುವುದಾದರೆ, ಇವರಿಗೆ ಡಿ.ಕೆ.ಸುರೇಶ್ ಎಂಬ ಓರ್ವ ಸಹೋದರ ಮತ್ತು ಒಬ್ಬರು ಸಹೋದರಿ ಇದ್ದಾರೆ. ಇನ್ನು ಶಿವಕುಮಾರ್ ಅವರಿಗೆ ಐಶ್ವರ್ಯ, ಆಭರಣಾ ಹಾಗೂ ಆಕಾಶ್ ಎಂಬ ಮೂವರು ಮಕ್ಕಳಿದ್ದಾರೆ.

ರಾಮನಗರದಿಂದ ಮುಖ್ಯಮಂತ್ರಿಯಾದವರಲ್ಲಿ ನಾಲ್ಕನೇಯವರು ಡಿಕೆಶಿ
ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ರಾಮನಗರ ಜಿಲ್ಲೆಗೆ ಒಂದು ವಿಶೇಷ ಹೆಮ್ಮೆಯಿದೆ. ಈ ಹಿಂದೆ ಇದೇ ಜಿಲ್ಲೆಯಿಂದ ನಾಲ್ವರು ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಕೆಂಗಲ್ ಹನುಮಂತಯ್ಯ ಮೊದಲ ಮುಖ್ಯಮಂತ್ರಿ, ದೇವೇಗೌಡ ದ್ವಿತೀಯ ಹಾಗೂ ಕುಮಾರ ಸ್ವಾಮಿ ಮೂರನೇಯವರಾಗಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಅವರು ಆ ಸಾಲಿಗೆ ಸೇರ್ಪಡೆಯಾಗುವ ಮೂಲಕ ಜಿಲ್ಲೆಯಿಂದ ಸಿಎಂ ಗದ್ದುಗೆಗೇರಿದ ನಾಲ್ಕನೇ ಮುಖ್ಯಮಂತ್ರಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲೇ ರಾಜಕೀಯ ಚಟುವಟಿಕೆ

ಡಿಕೆಶಿ ಅವರು ತಮ್ಮ 18ನೇ ವಯಸ್ಸಿನಲ್ಲಿಯೇ ಎನ್‌ಎಸ್‌ಯುಐ ಸೇರಿ 1981-83ರ ತನಕ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂದಿನಿಂದಲೇ ರಾಜಕೀಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ಡಿಕೆಶಿ, ಬೆಂಗಳೂರಿನ ಆರ್.ಸಿ.ಕಾಲೇಜಿನಲ್ಲಿ ಓದುವಾಗ ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ದೇವೇಗೌಡರ ವಿರುದ್ಧ ಮೊದಲ ಫೈಟ್
1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಎಚ್.ಡಿ.ದೇವೇಗೌಡರ ವಿರುದ್ಧ ಚುನಾವಣಾ ಕಣಕ್ಕಿಳಿದರು. ಪ್ರಬಲ ಪೈಪೋಟಿ ನೀಡಿದ ಡಿ.ಕೆ.ಶಿವಕುಮಾರ್, ದೇವೇಗೌಡರು ಪ್ರಯಾಸದ ಗೆಲುವು ಪಡೆಯುವಂತೆ ಮಾಡಿದರು. 1987ರಲ್ಲಿ ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ದ್ದ ಜೆಡಿಎಸ್ ಪ್ರಭಾವವನ್ನು ಕಡಿಮೆಗೊಳಿಸಿದರು.
ಬಂಗಾರಪ್ಪ ಸಂಪುಟದಿಂದ ಎಸ್.ಎಂ. ಕೃಷ್ಣ ಸರ್ಕಾರದವರೆಗಿನ ಪಯಣ

1991ರಲ್ಲಿ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಲ್ಲಿ ಡಿ.ಕೆ.ಶಿವಕುಮಾರ್ ಮಹತ್ವದ ಪಾತ್ರವಹಿಸಿದ್ದರು. ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಖಾತೆ ಹೊಣೆಯನ್ನು ಅವರಿಗೆ ನೀಡಲಾಯಿತು. 1994ರ ಚುನಾವಣೆಯಲ್ಲಿ ಕೆಲವು ನಾಯಕರ ಪಿತೂರಿ ಕಾರಣ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು. 1999ರ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಆಯ್ಕೆಯಾದರು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ ಸಚಿವರಾದರು. 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಕ್ಷೇತ್ರ ಇಲ್ಲವಾಯಿತು. ಆಗ ಕನಕಪುರ ಕ್ಷೇತ್ರಕ್ಕೆ ಬಂದರು. 2008, 2013 ಮತ್ತು 2018ರ ಚುನಾವಣೆಯಲ್ಲಿ ಕನಕಪುರದಿಂದ ಗೆಲುವು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ಡಿ.ಕೆ.ಶಿವಕುಮಾರ್‌ಗೆ ಸುಲಭವಾಗಿ ಸಚಿವ ಸ್ಥಾನ ಸಿಗಲಿಲ್ಲ. ಅಂತಿಮವಾಗಿ ಹೈಕಮಾಂಡ್ ಒಪ್ಪಿದ ಮೇಲೆ ಸಂಪುಟ ಸೇರಿ ಇಂಧನ ಖಾತೆ ವಹಿಸಿಕೊಂಡರು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದರು. 2023 ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷರೊಂದಿಗೆ ಜಲ ಸಂಪನ್ಮೂಲ ಇಲಾಖೆ ಸಚಿವರಾಗಿದ್ದರು.
ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
ಸುಮಾರು 35 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಡಿ.ಕೆ.ಶಿವಕುಮಾರ್ ಪಕ್ಷ ವಹಿಸಿದ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. 2020 ಮಾರ್ಚ್ 11ರಂದು ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಭೀತಿ ಎದುರಾದಾಗ ಶಾಸಕರನ್ನು ರಕ್ಷಣೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ನಡೆಯದಂತೆ ನೋಡಿಕೊಂಡರು. 2017ರಲ್ಲಿ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆ ನಡೆಯುವಾಗ ಪಕ್ಷದ ಸೂಚನೆಯಂತೆ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕುದುರೆ ವ್ಯಾಪಾರ ತಪ್ಪಿಸಿದರು. ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಡಿ.ಕೆ.ಶಿವಕುಮಾರ್ ಬಂಧನವಾಯಿತು. ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಅವರನ್ನು ನೋಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗಮಿಸಿದ್ದರು ಎಂಬುದು ವಿಶೇಷ.
ಎಂಟನೇ ಗೆಲುವು
ವಿಧಾನಸಭೆ ಚುನಾವಣೆಯಲ್ಲಿ ಶಿವಕುಮಾರ್ ಇದು ಸತತ ಎಂಟನೇ ಗೆಲುವು. 1985ರಲ್ಲಿ ಸಾತನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಚ್.ಡಿ.ದೇವೇಗೌಡರ ಎದುರು ಸೋಲು ಕಂಡಿದ್ದ ಡಿಕೆಶಿ 1989ರಿಂದ 2004ರವರೆಗೆ ಅದೇ ಕ್ಷೇತ್ರದಿಂದ ನಾಲ್ಕು ಬಾರಿ ಸತತವಾಗಿ ಆಯ್ಕೆ ಆಗಿದ್ದಾರೆ. 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಸಾತನೂರು ಕ್ಷೇತ್ರವು ಕನಕಪುರ ಕ್ಷೇತ್ರದಲ್ಲಿ ವಿಲೀನ ಆಗಿದ್ದು, ಕನಕಪುರಕ್ಕೆ ವಲಸೆ ಬಂದ ಶಿವಕುಮಾರ್ ಇಲ್ಲೂ ಗೆಲುವಿನ ಓಟ ಮುಂದುವರಿಸಿದ್ದಾರೆ. 2008ರಿಂದ ಈವರೆಗೆ ಕನಕಪುರದಲ್ಲಿ ಅವರನ್ನು ಮಣಿಸಲು ಯಾರಿಗೂ ಸಾಧ್ಯವಾಗಿಲ್ಲ.
ವಿರೋಧಿಗಳೇ ಇಲ್ಲ
ಇನ್ನು ಕನಕಪುರ ಕ್ಷೇತ್ರದಲ್ಲಿ ಡಿಕೆಶಿಗೆ ವಿರೋಧಿಗಳೇ ಇಲ್ಲವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಶಿವಕುಮಾರ್ ಅವರನ್ನು ತವರಿನಲ್ಲಿ ಕಟ್ಟಿಹಾಕಬೇಕು ಎನ್ನುವ ಬಿಜೆಪಿಯ ತಂತ್ರ ಫಲ ನೀಡಿಲ್ಲ. ಅರುಣ್ ಸಿಂಗ್, ಬಿ.ಎಲ್.ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಪಕ್ಷದ ರಾಷ್ಟ್ರೀಯ ರಾಜ್ಯ ಮಟ್ಟದ ನಾಯಕರು ಬಂದು ಪ್ರಚಾರ-ತಂತ್ರಗಾರಿಕೆ ನಡೆಸಿದರೂ ಗೆಲುವಿನ ಸಮೀಪಕ್ಕೆ ಹೋಗಲು ಆಗಿಲ್ಲ. ನಾಮಪತ್ರ ಸಲ್ಲಿಸಿ ಪ್ರಚಾರವನ್ನೇ ಮಾಡದೇ ಭಾರಿ ಅಂತರದಲ್ಲಿ ಗೆಲ್ಲುವ ಮೂಲಕ ಶಿವಕುಮಾರ್ ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಕಾಂಗ್ರೆಸ್ ಒಳಗೂ ಅವರ ಪ್ರತಿಷ್ಠೆ ಹೆಚ್ಚಾಗುವಂತೆ ಮಾಡಿದೆ. ಪಿಜಿಆರ್ ಸಿಂಧ್ಯಾ, ಡಿ.ಎಂ.ವಿಶ್ವನಾಥ್, ನಾರಾಯಣ ಗೌಡ ಸೇರಿದಂತೆ ಹಿಂದಿನ ಚುನಾವಣೆಗಳಲ್ಲಿ ತಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿಗಳನ್ನೆಲ್ಲ ಕಾಂಗ್ರೆಸ್‌ಗೆ ಸೆಳೆದು ಕ್ಷೇತ್ರದಲ್ಲಿ ವಿರೋಧ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತೆ ನೋಡಿಕೊಂಡಿದ್ದಾರೆ.
ಸಾವಿರ ಕೋಟಿ ಒಡೆಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಟುಂಬದ ಆಸ್ತಿ 1,413.78 ಕೋಟಿ ಆಸ್ತಿ ಚುನಾವಣೆಯ ಘೋಷಣೆ ಮಾಡಿಕೊಂಡಿದ್ದಾರೆ. ಸಾವಿರ ಕೋಟಿ ಸರದಾರನಾದರೂ ಅವರ ಬಳಿ ಇರುವುದು ಒಂದೇ ಕಾರಾಗಿದೆ. ರಾಜ್ಯ ಮಾತ್ರವಲ್ಲ ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ಡಿ.ಕೆ.ಶಿ ಬಳಿ ಇರುವುದು ಒಂದೇ ಕಾರು ಎಂಬುದು ಮತ್ತೊಂದು ವಿಶೇಷವಾಗಿದೆ. 2018ರ ವಿಧಾನಸಭಾ ಚುನಾವಣೆ ವೇಳೆ ಒಟ್ಟು 840.08 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಡಿಕೆ ಶಿವಕುಮಾರ್ ಅವರು ಘೋಷಿಸಿಕೊಂಡಿದ್ದರು. ಅದು 2023ರ ಚುನಾವಣೆಯಲ್ಲಿ 1,413.78 ಕೋಟಿಗೆ ಏರಿಕೆಯಾಗಿದೆ. ಡಿಕೆಶಿ ಕಳೆದ ಐದು ವರ್ಷಗಳಲ್ಲಿ ಶೇ 68.29 ರಷ್ಟು ಹೆಚ್ಚಳವಾಗಿದೆ.
ಇಷ್ಟೊಂದು ಕೇಸ್‌ಗಳು
ಆದಾಯ ತೆರಿಗೆಗೆ ಸಂಬಂಧಿಸಿದ ನಾಲ್ಕು ಪ್ರಕರಣ, ಜಾರಿ ನಿರ್ದೇಶನಾಲಯದ ಎರಡು ಪ್ರಕರಣ ಮತ್ತು ಒಂದು ಸಿಬಿಐ ಪ್ರಕರಣ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 19 ಪ್ರಕರಣಗಳು ದಾಖಲಾಗಿವೆ.
ಪಾದಯಾತ್ರೆ
ಡಿಕೆಶಿ ಅವರ ರಾಜ್ಯದಲ್ಲಿ ಭರತ್ ಜೋಡೋ ಹಾಗೂ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಚುನಾವಣಾ ಪೂರ್ವವೇ ಪಕ್ಷಕ್ಕೆ ವರ್ಚಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದರಲ್ಲೂ ಕುಡಿಯುವ ನೀರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೇಕೆದಾಟು ಯಾತ್ರೆಯು ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಪಡೆಯುವ ಹಿಂದೆ ಡಿಕೆಶಿ ಅವರ ಪಾತ್ರ ಹೆಚ್ಚಾಗಿದೆ. ತಮ್ಮ ಗಡಸುತನ, ನೇರ ಮಾತಿನಿಂದಲೇ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖರಾಗಿ ದುಡಿದಿದ್ದಾರೆ.
ಉದ್ಯಮಿ, ವಿದ್ಯಾಸಂಸ್ಥೆ
ರಾಜಕಾರಣಿಯ ಜೊತೆಗೆ, ಡಿ.ಕೆ.ಶಿವಕುಮಾರ್ ಉದ್ಯಮಿಯಾಗಿದ್ದಾರೆ. ಜೊತೆಗೆ, ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ.
ಡಿಕೆಶಿ ಗೆಲುವು, ಸೋಲಿನ ಹಾದಿ
| ವರ್ಷ | ಕ್ಷೇತ್ರ | ಫಲಿತಾಂಶ | ಗೆಲುವಿನ ಅಂತರ |
| 1985 | ಸಾತನೂರು | ಸೋಲು | 29,809 |
| 1989 | ಸಾತನೂರು | ಗೆಲುವು | 13,650 |
| 1994 | ಸಾತನೂರು | ಗೆಲುವು | 568 |
| 1999 | ಸಾತನೂರು | ಗೆಲುವು | 14,387 |
| 2004 | ಸಾತನೂರು | ಗೆಲುವು | 13,928 |
| 2008 | ಕನಕಪುರ | ಗೆಲುವು | 7,179 |
| 2013 | ಕನಕಪುರ | ಗೆಲುವು | 31,424 |
| 2018 | ಕನಕಪುರ | ಗೆಲುವು | 79,909 |
| 2023 | ಕನಕಪುರ | ಗೆಲುವು | 1,22,392 |
ತ್ರಿವಿಕ್ರಮ ಸಾಧಿಸುತ್ತಾರಾ ಡಿಕೆಶಿ?
ಜಿಲ್ಲೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿ ಹುದ್ದೆಗೇರಿದ್ದರೂ ಇದುವರೆಗೆ ಯಾರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಮತ್ತು ರಾಮಕೃಷ್ಣ ಹೆಗಡೆ ಕೇವಲ 1 ವರ್ಷ ಮಾತ್ರ ಮುಖ್ಯಮಂತ್ರಿಯಾಗಿದ್ದರು. ಹೆಚ್.ಡಿ. ದೇವೇಗೌಡ ಅವರು 17 ತಿಂಗಳ ಆಡಳಿತ ನಡೆಸಿದ್ದರು. ಅವರ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಮೊದಲ ಅವಧಿಯಲ್ಲಿ 20 ತಿಂಗಳು ಹಾಗೂ ಎರಡನೇ ಅವಧಿಯಲ್ಲಿ 14 ತಿಂಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು, 24 ತಿಂಗಳು ಅಧಿಕಾರ ನಡೆಸಲಿದ್ದಾರೆ. ಅದಾದ ಬಳಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯಮಂತ್ರಿ ಆಗುತ್ತಾರಾ ಎಂಬ ಕತೂಹಲ ಎಲ್ಲರಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Wed, 3 June 26




