BREAKING ದ್ರೌಪದಿ ಮುರ್ಮುಗೆ ಉದ್ಧವ್ ಠಾಕ್ರೆ ಬಣದ ಶಿವಸೇನಾ ಸಂಸದರ ಬೆಂಬಲ: ವರದಿ
ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಉದ್ಧವ್ ಬಣದ ಸಂಸದರು ಮುರ್ಮು ಅವರಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು.
ರಾಷ್ಟ್ರಪತಿ ಹುದ್ದೆಗೆ ಕಣದಲ್ಲಿರುವ ಎನ್ಡಿಎ (NDA) ಅಭ್ಯರ್ಥಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಉದ್ದವ್ ಠಾಕ್ರೆ ಅವರ ಶಿವಸೇನಾ (Shiv Sena) ಬೆಂಬಲ ನೀಡಲಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಉದ್ಧವ್ ಬಣದ ಸಂಸದರು ಮುರ್ಮು ಅವರಿಗೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು. ಉದ್ಧವ್ ಠಾಕ್ರೆ ಅವರು ಸಂಸದರ ಬೇಡಿಕೆ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.ಏಕನಾಥ ಶಿಂಧೆ ಬಂಡಾಯವೆದ್ದ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದು, ಶಿಂಧೆ ಬಿಜೆಪಿ ಬೆಂಬಲದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಠಾಕ್ರೆ ಜತೆ 16 ಮಂದಿ ಸಂಸದರು ಸಭೆ ನಡೆಸಿದ್ದು, ಮುರ್ಮು ಅವರು ಬುಡಕಟ್ಟು ಸಮುದಾಯದ ಮಹಿಳೆ ಆಗಿದ್ದರಿಂದ ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದರು. ಈ ಸಭೆ ನಡೆದ ಒಂದು ದಿನದ ನಂತರ ಮುರ್ಮುಗೆ ಬೆಂಬಲ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ಶೇ 10ರಷ್ಟು ಜನಸಂಖ್ಯೆ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಒಂದು ವೇಳೆ ಗೆದ್ದರೆ ದೇಶದ ರಾಷ್ಟ್ರಪತಿಯಾಗುವ ಮೊದಲ ಪರಿಶಿಷ್ಟ ಪಂಗಡದ ಮಹಿಳೆಯಾಗಲಿದ್ದಾರೆ ದ್ರೌಪದಿ ಮುರ್ಮ.
ವಿಪಕ್ಷಗಳು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಳಿಸಿವೆ. ಆದಾಗ್ಯೂ, ಈಗಾಗಲೇ ಹಲವಾರು ಪಕ್ಷಗಳು ಮುರ್ಮ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿವೆ. ಮುರ್ಮು ಅವರಿಗೆ ಬೆಂಬಲ ಘೋಷಿಸಿರುವ ಬಿಎಸ್ ಪಿ ನಾಯಕಿ ಮಾಯಾವತಿ ಆದಿವಾಸಿ ಸಮಾಜವು ನಮ್ಮ ಪಕ್ಷದ ಚಳವಳಿಯಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಮನಗಂಡು ನಾವು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ಜೆಡಿಯು ಬೆಂಬಲ ನೀಡಿದ್ದು, ಜೆಡಿಎಸ್ ಕೂಡಾ ಬೆಂಬಲ ನೀಡುವ ಸಾಧ್ಯತೆ ಇದೆ. ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ಸಿಪಿ ಮತ್ತು ಟಿಡಿಪಿ ಕೂಡಾ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ.
Published On - 3:44 pm, Tue, 12 July 22