ಚುನಾವಣೆಗೆ ಒಂದು ವರ್ಷ ಮೊದಲೇ ಪ್ರಶಾಂತ್​ ಕಿಶೋರ್​ರನ್ನು ಪ್ರಧಾನ ಸಲಹೆಗಾರನಾಗಿ ನೇಮಿಸಿಕೊಂಡ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್

ಉನ್ನತ ಮೂಲಗಳಿಂದ ಲಭ್ಯವಾಗಿರುವ ಮೂಲಗಳ ಪ್ರಕಾರ ಅಡಳಿತರೂಢ ಕಾಂಗ್ರೆಸ್ ಪಕ್ಷವು ರೂ. 1 ಗೌರವಧನ ನೀಡಿ ಕಿಶೋರ್ ಅವರ ಸೇವೆಯನ್ನು ಪಡೆಯಲಿದೆ. ಆದರೆ, ಅದೇ ರಾಜ್ಯದ ಕೆಲ ಕಾಂಗ್ರೆಸ್ ನಾಯಕರಿಗೆ ಅವರನ್ನು ನೇಮಕ ಮಾಡಿಕೊಡಿರುವ ಬಗ್ಗೆ ಸುಳಿವು ಸಹ ಇಲ್ಲ

  • TV9 Web Team
  • Published On - 22:53 PM, 1 Mar 2021
ಚುನಾವಣೆಗೆ ಒಂದು ವರ್ಷ ಮೊದಲೇ ಪ್ರಶಾಂತ್​ ಕಿಶೋರ್​ರನ್ನು ಪ್ರಧಾನ ಸಲಹೆಗಾರನಾಗಿ ನೇಮಿಸಿಕೊಂಡ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್
ಪ್ರಶಾಂತ್ ಕಿಶೋರ್

ಚಂಡೀಗಡ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ಚುನಾವಣಾ ವ್ಯೂಹ ರಚನೆಯಲ್ಲಿ ಪರಿಣಿತರೆನಿಸಿಕೊಂಡಿರುವ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಕಿಶೋರ್​ವರನ್ನು ನೇಮಕ ಮಾಡಿಕೊಂಡಿರುವ ಕುರಿತು ಟ್ವೀಟ್​ ಮಾಡಿರುವ ಮುಖ್ಯಮಂತ್ರಿಗಳು, ಅವರೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

‘ಪ್ರಶಾಂತ್ ಕಿಶೋರ್ ಅವರು ಪ್ರಮುಖ ಸಲಹೆಗಾರರಾಗಿ ನನ್ನೊಂದಿಗೆ ಸೇರಿರುವ ವಿಷಯವನ್ನು ಹಂಚಿಕೊಳ್ಳಲು ತುಂಬಾ ಖುಷಿಯೆನಿಸುತ್ತಿದೆ. ಪಂಜಾಬ್ ಜನತೆಯ ಅಭ್ಯುದಯಕ್ಕಾಗಿ ಅವರೊಂದಿಗೆ ಕೆಲಸ ಮಾಡಲು ಕಾತುರನಾಗಿದ್ದೇನೆ,’ ಎಂದು ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಕಿಶೋರ್ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವನ ಸ್ಥಾನಮಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅವರ ಕಚೇರಿಯಿಂದ ಹೊರಬಿದ್ದಿರುವ ಟ್ವೀಟ್​ ಒಂದರ ಪ್ರಕಾರ ಕಿಶೋರ್ ತಾವು ಸಲ್ಲಿಸುವ ಸೇವೆಗೆ ರೂ. 1 ಗೌರವಧನ ಪಡೆಯಲಿದ್ದಾರೆ. ಆದರೆ ಅವರಿಗೆ ಸರ್ಕಾರಿ ಬಂಗ್ಲೆ ಮತ್ತು ಆರೇಳು ಜನ ಸಿಬ್ಬಂದಿಯನ್ನು ಒದಗಿಸಲಾಗುವುದು. ಹಾಗೆಯೇ, ಒಬ್ಬ ಕ್ಯಾಬಿನೆಟ್​ ದರ್ಜೆಯ ಸಚಿವನಿಗೆ ಸಿಗುವ ಸಾರಿಗೆ ಭತ್ಯೆ, ಟೆಲಿಫೋನ್ ಮತ್ತು ವೈದ್ಯಕೀಯ ಸೌಲಭ್ಯಗಳು ಸಹ ದೊರೆಯಲಿವೆ.

ಉನ್ನತ ಮೂಲಗಳಿಂದ ಲಭ್ಯವಾಗಿರುವ ಮೂಲಗಳ ಪ್ರಕಾರ ಅಡಳಿತರೂಢ ಕಾಂಗ್ರೆಸ್ ಪಕ್ಷವು ರೂ. 1 ಗೌರವಧನ ನೀಡಿ ಕಿಶೋರ್ ಅವರ ಸೇವೆಯನ್ನು ಪಡೆಯಲಿದೆ. ಆದರೆ, ಅದೇ ರಾಜ್ಯದ ಕೆಲ ಕಾಂಗ್ರೆಸ್ ನಾಯಕರಿಗೆ ಅವರನ್ನು ನೇಮಕ ಮಾಡಿಕೊಡಿರುವ ಬಗ್ಗೆ ಸುಳಿವು ಸಹ ಇಲ್ಲ
ಚಂಡೀಗಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸುನಿಲ್ ಜಾಖರ್, ‘ಪ್ರಶಾಂತ್ ಕಿಶೋರ್​ ಅವರನ್ನು ನೇಮಕ ಮಾಡಿಕೊಂಡಿರುವುದು ನನಗೆ ಗೊತ್ತಿಲ್ಲ,’ ಎಂದು ಹೇಳಿದ್ದಾರೆ.

Captain Amarinder Singh

ಕ್ಯಾಪ್ಟನ್ ಅಮರಿಂದರ್ ಸಿಂಗ್

ಮುಂದಿನ ವರ್ಷ ಮಾರ್ಚ್​ ತಿಂಗಳು ಪಂಜಾಬ್​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಹಳ ದಿನಗಳಿಂದ ಮುಖ್ಯಮಂತ್ರಿ ಸಿಂಗ್ ಅವರು ಮತ್ಮೊಮ್ಮೆ ಕಿಶೋರ್ ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದರು. ಅದು ಈಗ ಈಡೇರಿದಂತಾಗಿದೆ.

ಇಂಡಿಯನ್ ಪೊಲಿಟಿಕಲ್ ಌಕ್ಷನ್ ಕಮಿಟಿಯ ಸಂಸ್ಥಾಪಕರಾಗಿರುವ ಕಿಶೋರ್ ಅವರು 2017ರಲ್ಲಿ ಚುನಾವಣೆ ನಡೆದಾಗ ಅಮರಿಂದರ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ವ್ಯೂಹಗಳನ್ನು ರಚಿಸಿ ಗೆಲುವಿಗೆ ಕಾರಣರಾಗಿದ್ದರು. 117 ಸ್ಥಾನಗಳ ವಿಧಾನಸಭೆಗೆ 77 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಮರಳಿ ಪಡೆದಿತ್ತು.

ಆ ಗೆಲುವಿನ ನಂತರ ಅಮರಿಂದರ್ ಅವರು ಕಿಶೋರ್ ಮತ್ತವರ ತಂಡ ನೀಡಿದ ನೆರವನ್ನು ಕೊಂಡಾಡಿದ್ದರು. ಕಿಶೋರ್ ಹಾಗೂ ಅವರ ಟೀಮಿನ ಸಹಕಾರ ಕಾಂಗ್ರೆಸ್ ಪಕ್ಷವನ್ನು ಪಂಜಾಬಿನಲ್ಲಿ ಪುನಃ ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿತು ಎಂದು ಅವರು ಉದ್ಗರಿಸಿದ್ದರು.
ಕಿಶೋರ್ ಅವರು ಪ್ರಸ್ತುತವಾಗಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ನಡೆಯನ್ನು ಕಟುವಾಗಿ ಟೀಕಿಸಿರುವ ವಿರೋಧ ಪಕ್ಷ ಶಿರೋಮಣಿ ಅಕಾಲಿ ದಳದ (ಎಸ್​ಎಡಿ) ನಾಯಕ ಬಿಕ್ರಮ್ ಸಿಂಗ್ ಮಂಜಿತಾ ಅವರು ಮುಖ್ಯಮಂತ್ರಿಗಳು ಜನರ ಮುಂದೆ ಪುನಃ ಸುಳ್ಳುಗಳನ್ನು ಹೇಳಲು ತಯಾರಿ ನಡೆಸಿದ್ದಾರೆ ಅಂತ ಹೇಳಿದ್ದಾರೆ.

‘ಜುಮ್ಲೆಬಾಜ್ ಕಿಶೋರ್ ಅವರನ್ನು ಪ್ರಮುಖ ಸಲಹೆಗಾರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಅವರು ಪಂಜಾಬಿಗಳ ಗಾಯಗಳ ಮೇಲೆ ಉಪ್ಪು ಸವರಿದ್ದಾರೆ. ಅವರ ಈ ನಡೆಯಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಕಿಸೋರ್ ಅವರ ಮೂಲಕ ಮತ್ತೊಂದು ಸುಳ್ಳಿನ ಕಂತೆಯನ್ನು ಜನರ ಮುಂದಿಟ್ಟು ಅವರನ್ನು ಮೂರ್ಖರನ್ನಾಗಿಸಿ ಪುನಃ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ,’ ಎಂದು ಸೋಮವಾರದಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಂಜೀತಾ ಹೇಳಿದ್ದಾರೆ.

ಇದನ್ನೂ ಓದಿWest Bengal Assembly Elections 2021: ಬಿಜೆಪಿ ಕಾರ್ಯಕರ್ತನ ತಾಯಿ ಮೇಲೆ ಟಿಎಂಸಿ ಕಾರ್ಯಕರ್ತರಿಂದ ಹಲ್ಲೆ ಆರೋಪ