ಅಡ್ಡಮತದಾನ ಮಾಡಿದ ಸೋಮಶೇಖರ್​: ಕ್ರಮ ಕೈಗೊಳ್ಳುವ ಬಗ್ಗೆ ಅಶೋಕ್ ಹೇಳಿದ್ದಿಷ್ಟು

| Updated By: ರಮೇಶ್ ಬಿ. ಜವಳಗೇರಾ

Updated on: Feb 27, 2024 | 3:26 PM

Karnataka Rajyasabha Election:ಲೋಕಸಭಾ ಚುನಾವಣೆಗೂ ಮೊದಲ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ಶಾಸಕ ಎಸ್​​ಟಿ ಸೋಮಶೇಖರ್ ಅವರು ಸ್ವಪಕ್ಷದ ಅಭ್ಯರ್ಥಿಗೆ ಬಿಟ್ಟು ಕಾಂಗ್ರೆಸ್​ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತದಾನ ಮಾಡಿರುವ ಸೋಮಶೇಖರ್​ ವಿರುದ್ಧ ಯಾವ ಕ್ರಮಕೈಗೊಳ್ಳಬೇಕೆಂಬ ಬಗ್ಗೆ ಬಿಜೆಪಿ ನಾಯಕರು, ಹಿರಿಯ ವಕೀಲರ ಜೊತೆ ಚರ್ಚಿಸಿದ್ದಾರೆ. ಬಳಿಕ ವಿಪಕ್ಷ ನಾಯಕ ಅಶೋಕ್ ಸೋಮಶೇಖರ್​ ವಿರುದ್ಧ ಕ್ರಮದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಅಡ್ಡಮತದಾನ ಮಾಡಿದ ಸೋಮಶೇಖರ್​: ಕ್ರಮ ಕೈಗೊಳ್ಳುವ ಬಗ್ಗೆ ಅಶೋಕ್ ಹೇಳಿದ್ದಿಷ್ಟು
ಸೋಮಶೇಖರ್, ಅಶೋಕ್
Follow us on

ಬೆಂಗಳೂರು, (ಫೆಬ್ರವರಿ 27): ಬಿಜೆಪಿಯಿಂದ (BJP) ಗೆದ್ದ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌ (ST Somashekhar) ಅವರು ರಾಜ್ಯಸಭಾ ಚುನಾವಣೆಯಲ್ಲಿ(Karnataka Rajyasabha Election 2024) ಬಿಜೆಪಿ ಅಥವಾ ಮೈತ್ರಿ ಅಭ್ಯರ್ಥಿಗೆ ಮತ ಹಾಕುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ಬಿಜೆಪಿ ಮುಂದಾಗಿದ್ದು, ಈ ಬಗ್ಗೆ ಹೈಕೋರ್ಟ್​ ಹಿರಿಯ ವಕೀಲರ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok), ವಕೀಲ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಕೊನೆಯ ಕ್ಷಣದವರೆಗೂ ನಮ್ಮ ಜೊತೆ ಮಾತಾಡಿದ್ದರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದಿದ್ದರು. ತಾಯಿಗೆ ಮೋಸ ಮಾಡಲ್ಲ ಅಂದಿದ್ದರು. ಆದ್ರೆ, ಸೋಮಶೇಖರ್ ಅಡ್ಡ ಮತದಾನ ಮಾಡಿದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇ ಪದೇ ಮೋಸ ಮಾಡುವುದನ್ನು ಜನ ಸಹಿಸಲ್ಲ. ಸೋಮಶೇಖರ್ ಮಂತ್ರಿ ಮಾಡಿ, ಮೈಸೂರು ಉಸ್ತುವಾರಿ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತಾರೆ. ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ? ಇಂದು ಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿ ದ್ರೋಹ ಬಗೆಯಲ್ಲ ಎಂದು ಹೇಳಿದ್ದರು. ಸೋಮಶೇಖರ್ ಡಿ.ಕೆ. ಶಿವಕುಮಾರ್ ಜೊತೆಗೆ, ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಕ್ಷಮಿಸಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: ಅಡ್ಡಮತದಾನ ಮಾಡಿದ ಬಿಜೆಪಿ ಶಾಸಕ ಸೋಮಶೇಖರ್​ ಅನರ್ಹವಾಗ್ತಾರಾ? ಏನು ಕ್ರಮವಾಗಬಹುದು? ಇಲ್ಲಿದೆ ವಿವರ

ಇನ್ನು ಸೋಮಶೇಖರ್, ಶಿವರಾಮ್ ಹೆಬ್ಬಾರ್ ಬಿಜೆಪಿ ತೊರೆಯುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಜಗದೀಶ್ ಶೆಟ್ಟರ್ ರಾಜೀನಾಮೆ ಕೊಟ್ಟು ಬಿಜೆಪಿ ಬಂದರು. ಇವರೂ ಪಕ್ಷಕ್ಕೆ ರಾಜೀನಾಮೆ ಕೊಟ್ಟು, ಮತ ಹಾಕಬಹುದಿತ್ತು. ಕಾನೂನು ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ. ಸ್ಪರ್ಧೆ ಆಗಬೇಕು ಎನ್ನುವ ದೃಷ್ಟಿಯಿಂದ ಸ್ಪರ್ಧೆ ಆಗಿದೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದೇ ಇದೆ. ಇದು ಬಿಜೆಪಿ, ಜೆಡಿಎಸ್‌ ಸೋಲು ಅಂತ ಅಲ್ಲ ಎಂದು ಸಮಜಾಯಿಷಿ ನೀಡಿದರು.

ಎನ್​ ರವಿಕುಮಾರ್​ ವಾಗ್ದಾಳಿ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಬಗ್ಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್​ ರವಿಕುಮಾರ್ ಪ್ರತಿಕ್ರಿಯಿಸಿ,. ನಮ್ಮ ಇಬ್ಬರು ಶಾಸಕರ ಮತ ಪಡೆಯಲು ದುಷ್ಟರಾಜಕಾರಣ ಮಾಡಿದೆ. ಕಾಂಗ್ರೆಸ್​ಗೆ ಮತ ಹಾಕಿದವರಿಗೆ ಇದು ಆತ್ಮದ್ರೋಹ ಎಂದು ಹೇಳುತ್ತೇವೆ. ಅವರಾಗಿಯೇ ಬಂದು ಪಕ್ಷ ಸೇರಿದರು, ಅಧಿಕಾರ ಅನುಭವಿಸಿದರು. ಮುಂದಿನ ದಿನಗಳಲ್ಲಿ ಆ ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು. ಅಲ್ಲದೇ ರಾಜೀನಾಮೆ ಕೊಟ್ಟ ಹೋಗಬಹುದು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಶಾಸಕರಾದ ಎಸ್​.ಟಿ.ಸೋಮಶೇಖರ್​​, ಶಿವರಾಮ್​ ಹೆಬ್ಬಾರ್ ವಿರುದ್ಧ ಕ್ರಮದ ಬಗ್ಗೆ ಮಾತನಾಡಿ, ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಕರ್ನಾಟಕದ ಉಸ್ತುವಾರಿಗಳು ಹೈಕಮಾಂಡ್​​ಗೆ ದೂರು ನೀಡುವ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಪಕ್ಷದಲ್ಲಿ ಇಬ್ಬರೂ ಶಾಸಕರಿಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದು ಅನುಕೂಲ ಸಿಂಧು ರಾಜಕಾರಣ ಎಂದು ಹೇಳಿದರು.

ಯಾವ ರೀತಿ ಕ್ರಮ ಆಗಬೇಕು ಎಂದು ವಕೀಲರ ಜೊತೆ ಚರ್ಚೆ ಮಾಡಲಿದ್ದೇವೆ. ದುಷ್ಟ ರಾಜಕಾರಣ ಮಾಡಿರೋದು ಸಿದ್ದರಾಮಯ್ಯ . ಅವರಿಗೆ ಮೊದಲೇ ಮತ ಹಾಕಿಸಿಕೊಳ್ಳುವ ವಿಚಾರ ಗೊತ್ತಿತ್ತು. ಅನುಕೂಲ ಸಿಂಧು ರಾಜಕಾರಣ ಮಾಡಿದ್ದಾರೆ. ಆತ್ಮಸಾಕ್ಷಿಯ ರಾಜಕಾರಣ ಮಾಡಿಲ್ಲ‌. ಬಿಜೆಪಿ ಎಂದೂ ಶಾಸಕರ ವಿರುದ್ಧವಾಗಿ ನಡೆದುಕೊಂಡಿಲ್ಲ. ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ನಾವು ಶಿವರಾಮ್ ಹೆಬ್ಬಾರ್ ಅವರನ್ನು ಸಂಪರ್ಕ ಮಾಡುವ ಕೆಲಸ ಮಾಡ್ತಿದ್ದೇವೆ. ಮೊಬೈಲ್ ಫೋನ್ ಸ್ವಿಚ್ ಆಫ್ ಬರುತ್ತಿದೆ. ಟಿವಿ ನೋಡುತ್ತಿದ್ದರೆ ಬಂದು ಮತ ಚಲಾಯಿಸಿ ಎಂದು ಮಾಧ್ಯಮಗಳ ಮೂಲಕ ಶಿವರಾಮ್ ಹೆಬ್ಬಾರ್​ಗೆ ಮನವಿ ಮಾಡಿದರು.

ಸಿಟಿ ರವಿ ಹೇಳಿದ್ದೇನು?

ಇನ್ನು ಈ ಬಗ್ಗೆ ಸಿಟಿ ರವಿ ಮಾತನಾಡಿ, ವ್ಯಕ್ತಿಯ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದ್ದಲ್ಲ. ರಾಜಕಾರಣ ವ್ಯಭಿಚಾರ ಮಾಡುವವರು ಎಲ್ಲಾ ಕಡೆ ಸೆಟ್ ಆಗುತ್ತಾರೆ. ಹಾರ್ಡ್​ಕೋರ್, ಸಿದ್ಧಾಂತ ರಾಜಕಾರಣ ಮಾಡುವುದು ನಿಷ್ಠೂರ ಆಗುತ್ತಾರೆ. ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡುವುದು ಶೂನ್ಯ ಸಹನೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ