ಹೊಸ ಕಾಂಗ್ರೆಸ್ ಅಧ್ಯಕ್ಷರಿಗೆ ಪೂರ್ತಿ ಸ್ವಾತಂತ್ರ್ಯವಿದೆ; ಬಿಜೆಪಿಯ ರಿಮೋಟ್ ಕಂಟ್ರೋಲ್ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು

| Updated By: ಸುಷ್ಮಾ ಚಕ್ರೆ

Updated on: Oct 08, 2022 | 4:56 PM

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರ ಅಧಿಕಾರದಲ್ಲಿ ನಮ್ಮ ಕುಟುಂಬದ ಯಾರೂ ತಲೆಹಾಕುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಹೊಸ ಕಾಂಗ್ರೆಸ್ ಅಧ್ಯಕ್ಷರಿಗೆ ಪೂರ್ತಿ ಸ್ವಾತಂತ್ರ್ಯವಿದೆ; ಬಿಜೆಪಿಯ ರಿಮೋಟ್ ಕಂಟ್ರೋಲ್ ಹೇಳಿಕೆಗೆ ರಾಹುಲ್ ಗಾಂಧಿ ತಿರುಗೇಟು
ರಾಹುಲ್ ಗಾಂಧಿ
Follow us on

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಅವರು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಂಘಟನೆಯನ್ನು ನಡೆಸಲು ಸ್ವತಂತ್ರರಾಗಿರುತ್ತಾರೆ. ಅವರನ್ನು ಗಾಂಧಿ ಕುಟುಂಬದವರು (Gandhi Family) ಯಾರೂ ರಿಮೋಟ್ ಕಂಟ್ರೋಲ್ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ರಾಹುಲ್ ಗಾಂಧಿ ಇಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರನ್ನು ‘ರಿಮೋಟ್ ಕಂಟ್ರೋಲ್’ ಎಂದು ಕರೆಯುವುದು ಅವರಿಬ್ಬರಿಗೂ ಮಾಡುವ ಅವಮಾನವಾಗಿದೆ. ಅವರ ಅಧಿಕಾರದಲ್ಲಿ ನಮ್ಮ ಕುಟುಂಬದ ಯಾರೂ ತಲೆಹಾಕುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಅದರ ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದವರ ಬಳಿ ಇರುತ್ತದೆ ಎಂದು ಬಿಜೆಪಿ ಲೇವಡಿ ಮಾಡಿತ್ತು. ಇದಕ್ಕೆ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಫ್ಯಾಸಿಸ್ಟ್ ಪಕ್ಷವಲ್ಲ. ನಾವು ವಿಭಿನ್ನ ದೃಷ್ಟಿಕೋನಗಳನ್ನು ಸ್ವಾಗತಿಸುತ್ತೇವೆ. ಚುನಾವಣೆಗಳನ್ನು ಗೆಲ್ಲಲು ನಾವು ಒಂದು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ನಮಗೆ ತಿಳಿದಿದೆ ಎಂದಿದ್ದಾರೆ.

ಇದನ್ನೂ ಓದಿ: Congress Presidential Election: ಸೋನಿಯಾ ಗಾಂಧಿ ನಮ್ಮ ಪಕ್ಷದ ರಿಮೋಟ್ ಕಂಟ್ರೋಲ್ ಅಲ್ಲ, ಕಾಂಗ್ರೆಸ್ ಅಧಿನಾಯಕಿಯನ್ನು ಕೊಂಡಾಡಿದ ಖರ್ಗೆ

ಬಿಜೆಪಿಯು ಭಾರತದಲ್ಲಿ ದ್ವೇಷವನ್ನು ಹರಡುತ್ತಿದೆ. ದ್ವೇಷವನ್ನು ಹರಡುವುದು ಮತ್ತು ರಾಷ್ಟ್ರವನ್ನು ಧುಮುಕುವುದು ರಾಷ್ಟ್ರಕ್ಕೆ ಸಹಾಯ ಮಾಡುವ ಕೆಲಸವಲ್ಲ. ಅದಕ್ಕಾಗಿಯೇ ನಾವು ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿದ್ದೇವೆ. ಈ ‘ಭಾರತ್ ಜೋಡೋ ಯಾತ್ರೆ’ ಮಾಡುತ್ತಿರುವುದು ನಾನೊಬ್ಬನೇ ಅಲ್ಲ, ‘ಭಾರತ್ ಜೋಡೋ ಯಾತ್ರೆ’ ಮಾಡುವವರು ಲಕ್ಷ-ಲಕ್ಷ ಜನರಿದ್ದಾರೆ. ಬಿಜೆಪಿಯವರು ಪ್ರಚಾರ ಮಾಡುತ್ತಿರುವ ರೀತಿಯ ರಾಜಕೀಯದಿಂದ ಭಾರತದ ಜನರು ಬೇಸತ್ತಿದ್ದಾರೆ. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಬೇಸತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

22 ವರ್ಷಗಳ ನಂತರ ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರು ಅಭ್ಯರ್ಥಿಗಳು ಈ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ