ನವದೆಹಲಿ: ‘ನನಗೆ ಮಕ್ಕಳೆಂದರೆ ಇಷ್ಟ, ಮಕ್ಕಳನ್ನು (Children) ಹೊಂದಲು ಬಯಸುತ್ತೇನೆ. ಆದರೆ ಮಾಡಲು ತುಂಬಾ ಕೆಲಸಗಳಿವೆ’. ಮದುವೆ ಬಗ್ಗೆ ತಮ್ಮತ್ತ ತೂರಿ ಬಂದ ಪ್ರಶ್ನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಉತ್ತರವಿದು. ಇಟಲಿಯ ದಿನಪತ್ರಿಕೆ ‘ಕೊರಿಯೆರೆ ಡೆಲ್ಲಾ ಸೆರಾ’ಗೆ ನೀಡಿದ ಅಪರೂಪದ ಸಂದರ್ಶನದಲ್ಲಿ ಭಾರತ್ ಜೋಡೋ (Bharat Jodo) ಯಾತ್ರೆಯ ಅನುಭವಗಳು ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆ, ನೀವಿನ್ನೂ ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ಮೇಲಿನಂತೆ ಉತ್ತರಿಸಿದ್ದಾರೆ. ಜತೆಗೆ, ಮದುವೆಯಾಗುವ ಮತ್ತು ಮಕ್ಕಳನ್ನು ಹೊಂದುವ ಯೋಚನೆ ಮನಸ್ಸಲ್ಲಿ ಬಂದಿತ್ತು. ಆದರೆ ಯಾಕೆ 52 ವರ್ಷ ಆಗಿದ್ದರೂ ಅವಿವಾಹಿತನಾಗಿದ್ದೇನೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಅಜ್ಜಿ ಇಂದಿರಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ ಇಟಲಿಯ ಅಜ್ಜಿ ಪಾವೊಲಾ ಮೈನೋ ಅವರೇ ನನಗೆ ಅಚ್ಚುಮೆಚ್ಚಿನವರು ಎಂದು ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ 3,500 ಕಿಲೋ ಮೀಟರ್ನ ‘ಭಾರತ್ ಜೋಡೋ ಯಾತ್ರೆ’ಯ ಅನುಭವಗಳನ್ನೂ ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಸಂರಚನೆಗಳು ದೇಶದಲ್ಲಿ ಕುಸಿಯುತ್ತಿವೆ. ಸಂಸತ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ದೇಶದಲ್ಲಿ ಫ್ಯಾಸಿಸಂ ಅತಿಕ್ರಮಿಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಬಹುದೇ?; ರಾಹುಲ್ ಗಾಂಧಿ ಉತ್ತರ ಹೀಗಿದೆ
ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಸೋಲುವುದು ಶೇ 100ರಷ್ಟು ಖಚಿತ ಎಂದೂ ಹೇಳಿದ್ದಾರೆ. ವಂಶಾಡಳಿತದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾವೊಂದು ಕುಟುಂಬ. ಆದರೆ ನಮ್ಮ ಬಳಿ ಆಲೋಚನೆಗಳಿವೆ. ಅದು ಕೇವಲ ಭಾರತದ್ದಷ್ಟೇ ಅಲ್ಲ, ಭಾರತವನ್ನು ಸ್ಥಾಪಿಸಿದ ಮೂಲತತ್ವಗಳ ಆಲೋಚನೆಗಳಾಗಿವೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಅಜ್ಜಿ ಇಂದಿರಾ ಗಾಂಧಿ ಜತೆಗಿನ ಗಾಢವಾದ ಬಾಂಧವ್ಯ, ತಂದೆ ರಾಜೀವ್ ಗಾಂಧಿ ತಮ್ಮನ್ನು ಬೆಳೆಸಿದ ರೀತಿಯ ಬಗ್ಗೆ ಕೂಡ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅನುಭವ ಹಂಚಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ