ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ಶನಿವಾರ ದೆಹಲಿ ಪ್ರವೇಶಿಸಿದೆ. ಇದೇ ವೇಳೆ ಆ್ಯಂಬುಲೆನ್ಸೊಂದು (Ambulance) ಸಾಗಿ ಬರುತ್ತಿರುವುದನ್ನು ಗಮನಿಸಿದ ರಾಹುಲ್ ಗಾಂಧಿ, ಯಾತ್ರೆಯನ್ನು ತುಸು ಹೊತ್ತು ಸ್ಥಗಿತಗೊಳಿಸಿ, ಜತೆಗಿದ್ದವರಿಗೆ ಬದಿಗೆ ಸರಿಯುವಂತೆ ಸೂಚಿಸಿ ದಾರಿ ಮಾಡಿ ಕೊಟ್ಟಿದ್ದಾರೆ. ಯಾತ್ರೆಯು ಹರಿಯಾಣದ ಬದಾರ್ಪುರ ಗಡಿ ದಾಟಿ ಬಂದು ದೆಹಲಿಯ ಅಪೋಲೊ ಆಸ್ಪತ್ರೆ ಬಳಿ ತಲುಪಿದಾಗ ಬೆಳಿಗ್ಗೆ 8.30ರ ವೇಳೆಗೆ ಈ ವಿದ್ಯಮಾನ ನಡೆದಿದೆ. ಇಂದು 23 ಕಿಲೋ ಮೀಟರ್ ಕ್ರಮಿಸಲಿರುವ ಯಾತ್ರೆ ಕೆಂಪುಕೋಟೆ ಬಳಿ ಕೊನೆಗೊಳ್ಳಲಿದೆ.
ಆಶ್ರಮ್ ಚೌಕ್, ನಿಜಾಮುದ್ದೀನ್, ಇಂಡಿಯಾ ಗೇಟ್, ಐಟಿಒ, ಕೆಂಪುಕೋಟೆ, ರಾಜ್ಘಾಟ್ ಮೂಲಕ ಯಾತ್ರೆ ಸಾಗಲಿದೆ. ಆಶ್ರಮ್ ಚೌಕ್ನಲ್ಲಿ 2 ತಾಸು ವಿರಾಮ ಇರಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಯಾತ್ರೆ ಈಗಾಗಲೇ ಸುಮಾರು 3,000 ಕಿಲೋ ಮೀಟರ್ ಕ್ರಮಿಸಿದ್ದು, 12 ರಾಜ್ಯಗಳ ಮೂಲಕ ಸಾಗಿ ಬಂದಿದೆ. ಒಟ್ಟಾರೆಯಾಗಿ 3,570 ಕಿಲೋ ಮೀಟರ್ ಕ್ರಮಿಸಲಿದ್ದು, ಜನವರಿ ಅಂತ್ಯದ ವೇಳೆಗೆ ಜಮ್ಮು ಮತ್ತು ಕಾಶ್ಮೀರ ತಲುಪಲಿದೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ದೆಹಲಿ ಪ್ರವೇಶಿಸಿದ ಬಳಿಕ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಸಾಥ್ ನೀಡಿದರು. ರಾಹುಲ್ ಜತೆ ಈ ನಾಯಕರೂ ಹೆಜ್ಜೆ ಹಾಕಿದರು. ನೂರಾರು ಕಾರ್ಯಕರ್ತರು ಸಹ ನಾಯಕರೊಂದಿಗೆ ಹೆಜ್ಜೆಹಾಕಿದರು.
ಇದನ್ನೂ ಓದಿ: ಕೋವಿಡ್ ನಿಯಮಾವಳಿ ಪಾಲಿಸಿ ಎಂಬ ಕೇಂದ್ರ ಆರೋಗ್ಯ ಸಚಿವರ ಪತ್ರ ನೆಪ: ರಾಹುಲ್ ಗಾಂಧಿ
ಕೋವಿಡ್ ನೆಪದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿತ್ತು. ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಮಾಸ್ಕ್ ಧರಿಸಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಯಾತ್ರೆಯಲ್ಲಿ ಭಾಗವಹಿಸುವವರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಗಡಿಭಾಗದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಅವರು ದ್ವೇಷವನ್ನು ಹರಡುತ್ತಾರೆ, ನಾವು ಪ್ರೀತಿಯನ್ನು ಹರಡುತ್ತೇವೆ ಮತ್ತು ಎಲ್ಲಾ ಭಾರತೀಯರನ್ನು ಅಪ್ಪಿಕೊಳ್ಳುತ್ತೇವೆ. ಈ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರೀತಿ ಇದೆ. ಅದು ಯಾವುದೇ ಜಾತಿ, ಧರ್ಮ, ಧರ್ಮ, ಶ್ರೀಮಂತ ಅಥವಾ ಬಡವ ಎಂದು ನೋಡುವುದಿಲ್ಲ. ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ ಎಂದರು. ದೇಶದ ಜನಸಾಮಾನ್ಯರು ಈಗ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದಾರೆ. ನಿಮ್ಮ ದ್ವೇಷದ ಬಜಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ. ಬಿಜೆಪಿ ಮತ್ತು ಆರ್ಎಸ್ಎಸ್ ಭಯವನ್ನು ಹರಡುತ್ತದೆ. ನಾವು ಪ್ರೀತಿಯನ್ನು ಹರಡುತ್ತೇವೆ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Sat, 24 December 22