ರಾಯಚೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 20-22 ಸ್ಥಾನ ಬರುತ್ತದೆ ಎಂದು ಸಿದ್ದರಾಮಯ್ಯ (Siddaramaiah) ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಓರ್ವ ನಿತ್ಯ ಜಾಗಟೆ ಹೊಡೆಯುವ ಗಿರಾಕಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು. ಜಿಲ್ಲೆಯ ಸಿಂಧನೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನೀವು ಹುಟ್ಟು ಕಾಂಗ್ರೆಸ್‌ನವರಾ? ನಿಮಗೆ ಅಧಿಕಾರ ಎಲ್ಲಿ ಸಿಗುತ್ತದೆ ಅನ್ನೋದೇ ನಿಮ್ಮ ಸಿದ್ದಾಂತ. ನಿಮ್ಮದು ಸೋತ ಎತ್ತಿನ ಬಾಲ ಹಿಡಿದುಕೊಂಡು ಬರುವುದು ನಿಮ್ಮ ಸಿದ್ಧಾಂತ ಎಂದರು. ಅಲ್ಲದೆ, ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನ ಬಿಡಿ, ಈ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಎಚ್ಚರಿಕೆ ಕೊಡುತ್ತೇನೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಗುಡುಗಿದರು.
ಜೆಡಿಎಸ್‌ಗೆ 20-22 ಸೀಟು ಅಂತಾರೆ, ಅವರ ಪಕ್ಷ 150 ಗೆದ್ದಿದ್ದರೆ ನಿತ್ಯ ಬೇರೆ ಪಕ್ಷಗಳ ಕಾರ್ಯಕರ್ತರನ್ನ ತಮ್ಮ ಪಕ್ಷಕ್ಕೆ ಬರಲು ಯಾಕೆ ಬೇಡಿಕೊಳ್ಳುತ್ತಿದ್ದಾರೆ? ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಜೆಡಿಎಸ್‌ಗೆ ನೆಲೆನೇ ಇಲ್ಲ ಅಂತ ಸಿದ್ದರಾಮಯ್ಯ ಅಂದಿದ್ದಾರೆ. ಈ ಬಾರೀಯ ಚುನಾವಣೆಯಲ್ಲಿ ಜೆಡಿಎಸ್‌ಗೆ ನೆಲೆ ಇದೆಯೋ ಇಲ್ವೋ ಅನ್ನೋದನ್ನ ಜನ ತೀರ್ಮಾನಿಸುತ್ತಾರೆ ಎಂದರು.
ಸಾಲ ಮನ್ನ ಯೋಜನೆ, ರೈತರ ಬಗ್ಗೆ ಜೆಡೆಎಸ್ಗೆ ಇರುವ ಕಾಳಜಿ ಬೇರೆ ಯಾರಿಗೂ ಇಲ್ಲ. ಇವತ್ತು ಹತ್ತಿ ಬೆಳೆದ ರೈತರ ಸ್ಥಿತಿ ಏನಿದೆ ಅಂತ ಗೊತ್ತಿದೆ. ಸರ್ಕಾರ ಬೆಂಬಲ ಬೆಲೆ ನೀಡಿಲ್ಲ. ತೊಗರಿಗೆ ಪರಿಹಾರ ಕೊಟ್ಟಿಲ್ಲ. ಅಷ್ಟರಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ: Hassan JDS Ticket Fight: ಕುಮಾರಸ್ವಾಮಿ ಭಾವುಕರಾದ ಬೆನ್ನಲ್ಲೇ ಮೌನ ಮುರಿದ ಹೆಚ್.ಡಿ.ರೇವಣ್ಣ
ಜೆಡಿಎಸ್ ವಿಸರ್ಜಿಸುವುದಾಗಿ ಹೇಳಿದ್ದೇನೆ ಅಂತಾ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಕನ್ನಡ ಭಾಷೆ ಮರೆತು ಶ್ಲೋಕ ಹೇಳಿಕೊಂಡು ಹೋಗುತ್ತಿದ್ದಾರೆ. ಇಡಿ ಅಧಿಕಾರಿಗಳ ನೋಟಿಸ್ಗೆ ಕನ್ನಡದಲ್ಲಿ ಮಾತನಾಡಲು ಆಗಲ್ಲ. ದೆಹಲಿಯಲ್ಲಿ ಇಡಿ ಅಧಿಕಾರಿಗಳಿಗೆ ಉತ್ತರ ಕೊಡಲು ಆಗಲ್ವಲ್ಲಾ. ಅದಕ್ಕೆ ಅವರು ಕನ್ನಡ ಮರೆತಿದ್ದಾರೋ ಏನೋ ಗೊತ್ತಿಲ್ಲ ಎಂದರು.
ನಮ್ಮ ರಥ ಯಾತ್ರೆಗೂ ಕಾಂಗ್ರೆಸ್ ಮತ್ತು ಬಿಜೆಪಿ ಯಾತ್ರೆಗಳಿಗೂ ವ್ಯತ್ಯಾಸ ಇದೆ. ಕಾಂಗ್ರೆಸ್ನ ಪ್ರಜಾ ಧ್ವನಿ ಕಾರ್ಯಕ್ರಮ ಮುಗಿದಿದೆ. ಎರಡನೇ ಹಂತದ ಪ್ರವಾಸವನ್ನ ಎರಡು ಗುಂಪುಗಳಾಗಿ ಹೋಗುತ್ತಿದ್ದಾರೆ. ನಾಡಿನ ಜನತೆಯ ರೈತರ ಸಮಸ್ಯೆ ಬಗ್ಗೆ ಜನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಿಲ್ಲ. ಎರಡನೆ ಹಂತದಲ್ಲಿ ಬಿಜೆಪಿಯ ಭ್ರಷ್ಟಾಚಾರದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಕಾಲದಲ್ಲಿ 15 ಲಕ್ಷ ಮನೆ ಕಟ್ಟಿದ್ದೇನೆ ಅಂತ ಹೇಳಿದ್ದಾರೆ. ಅದಕ್ಕೆ 29 ಸಾವಿರ ಕೋಟಿ ಬೇಕಿತ್ತು. ಆದರೆ ಅವರ ಸರ್ಕಾರದಲ್ಲಿ ಕಡಿಮೆ ಹಣ ಇಟ್ಟರು. ಐದು ವರ್ಷದಲ್ಲಿ ಎಷ್ಟು ಜನರಿಗೆ ಪರಿಹಾರ ಕೊಟ್ಟಿದ್ದೀರಿ ಎಂಬುದನ್ನು ಜನತೆ ಮುಂದಿಡಿ. ಮಹಾದಾಯಿಗೆ ನೋಟಿಸ್ ಬಂದಿದೆ. ಬೊಮ್ಮಾಯಿ, ಕಾರಜೋಳ ಸ್ವೀಟ್ ಹಂಚಿದರು, ನಾಳೆನೇ ಫೌಂಡೇಶನ್ ಅಂತ ಬೀಗುತ್ತಿದ್ದಾರೆ. ಆದರೆ ಇದಕ್ಕೆ ಮೊದಲು 100 ಕೋಟಿ ಕೋಟ್ಟೋನು ಇಲ್ಲಿ ಕೂತಿದಿನಿ ಎಂದರು.
ಜೆಡಿಎಸ್‌ಗೆ ಅಧಿಕಾರ ನೀಡಿದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಕುದುರೆ ಏರಲು ಬರದವನು ಶೂರನೂ ಅಲ್ಲ, ವೀರನೂ ಅಲ್ಲ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೀವೆ ಸಿಎಂ ಸ್ಥಾನ ತಗೊಂಡು ಕೆಲಸ ಮಾಡಿ ಅಂದಿದ್ದೆ. ಆದರೆ ಏನಾಯ್ತು ಅಂತ ಸಿದ್ದರಾಮಯ್ಯ ಜನತೆ ಮುಂದೆ ಹೇಳಿ. ಅವರು ಕೊಟ್ಟ ಕುದುರೆ ಹೇಗಿತ್ತು ಅಂದರೆ, ಕುದುರೆಯ ನಾಲ್ಕು ಕಾಲು ಮುರಿದು ಓಡಿಸಲು ಬಿಟ್ಟಿದ್ದರು ಎಂದರು.
ಇದನ್ನೂ ಓದಿ: Hassan Ticket Fight: ಹಾಸನ‘ದಳ’ಮನೆಯಲ್ಲಿ ತಳಮಳ, ಕುಮಾರಸ್ವಾಮಿ ಭಾವುಕ ನುಡಿ..!
ಅಮಿತ್ ಶಾ ಬೆಳಗಾವಿ, ಹುಬ್ಬಳ್ಳಿಗೆ ಬಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಭ್ರಷ್ಟಾಚಾರ ಮಾಡುವ ಪಕ್ಷಗಳು. ಹೀಗಾಗಿ ಬಿಜೆಪಿಗೆ ಬೆಂಬಲಿಸಬೇಕು ಅಂತ ಹೇಳುತ್ತಿದ್ದಾರೆ. ಅವರು ಎರಡು ಬಾರೀ ಬಂದಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಜನರ ಸಮಸ್ಯೆಗಳ ಪರಿಹಾರಕ್ಕೆ ಯಾವ ಕೊಡುಗೆ ಕೊಟ್ಟಿದ್ದೇವೆ ಅಂತ ಪ್ರಸ್ತಾಪಿಸಿಲ್ಲ ಎಂದು ಆರೋಪಿಸಿದರು.
ಜೆಡಿಎಸ್‌ಗೆ ಮತ ಕೊಟ್ಟರೆ ಅದು ಕಾಂಗ್ರೆಸ್ಗೆ ಕೊಟ್ಟಹಾಗೆ ಅಂತ ಅಮೀತ್ ಶಾ ಹೇಳುತ್ತಾರೆ. ಇನ್ನೊಂದೆಡೆ ಜೆಡಿಎಸ್‌ಗೆ ಮತ ಕೊಟ್ಟರೆ ಅದು ಬಿಜೆಪಿಗೆ ಕೊಟ್ಟ ಹಾಗೆ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಅವರಿಬ್ಬರು ಮಾತನಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರ ಕೊಡಬೇಕು. ಎರಡು ರಾಷ್ಟ್ರೀಯ ಪಕ್ಷಗಳು ನಿಮ್ಮ ಒಗಟನ್ನ ಬಿಡಿಸಿ ಹೇಳಿ ಅಂತ ಕೇಳುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Sun, 29 January 23