ಕರ್ನಾಟಕ ಸಚಿವರು ಅಲಿ ಬಾಬ 40 ಚೋರರು! ಇವರ ಮುಖಕ್ಕೆ ವೋಟ್ ಬರಲ್ಲಾಂತ ಮೋದಿಗೆ ಕರ್ಕೊಂಡು ಬರ್ತಾರೆ: ಸಿದ್ದರಾಮಯ್ಯ
ಈಗಿನ ಸಚಿವರು ಅಲಿ ಬಾಬ 40 ಚೋರ್ ಇದ್ದ ಹಾಗೆ. ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿಗೆ ಕರೆದುಕೊಂಡು ಬರುತ್ತಿದ್ದಾರೆ. ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಕರೆದುಕೊಂಡು ಬರುತ್ತಿದ್ದಾರೆ. ಯಾಕೆಂದ್ರೆ ಇವರ ಮುಖ ಅಳಸಿ ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಾದಗಿರಿ: ಬಿಜೆಪಿಯ ಬಂಡವಾಳವೇ ಪ್ರಧಾನಿ ನರೇಂದ್ರ ಮೋದಿ (Narendra Modi). ಈಗಿನ ಸಚಿವರು ಅಲಿ ಬಾಬ 40 ಚೋರರಿದ್ದಂತೆ. ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಏಕೆಂದರೆ ಇವರ ಮುಖ ಅಳಸಿ ಹೋಗಿದೆ. ಇವರಿಗೆ ಜನ ಬಡಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ಯಾದಗಿರಿ ನಗರದ ವನಕೇರಿ ಲೇಔಟ್ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ (Congress Prajadhwani Yatra) ಸಮಾವೇಶದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರನ್ನ ಕರೆದುಕೊಂಡು ಕಾರ್ಯಕ್ರಮ ಮಾಡುತ್ತಾರೆ. ಆದರೆ ಇವರ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಎಂದು ಘೋಷಣೆ ಕೂಗಿದರು.
ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತೇನೆ. ಫೆ.3ರಿಂದ ಬಸವಕಲ್ಯಾಣದಿಂದ ಪ್ರತಿ ಕ್ಷೇತ್ರದಲ್ಲೂ ಯಾತ್ರೆ ಮಾಡುತ್ತೇವೆ. ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಯಾತ್ರೆ ಮಾಡಲಿದ್ದಾರೆ. ಯಾತ್ರೆ ಮಾಡಿ ಜನರಿಗೆ ಬಿಜೆಪಿ ಸರ್ಕಾರದ ಕರ್ಮಕಾಂಡ ತಿಳಿಸುತ್ತೇವೆ. ನಮ್ಮ ಪಕ್ಷದಿಂದ ಬಿಜೆಪಿ ವಿರುದ್ಧದ ಚಾರ್ಜ್ ಶೀಟ್ ಜನರ ಮುಂದೆ ಇಡುತ್ತಿದ್ದೇವೆ. ಪಾಪದ ಪುರಾಣ ಅಂತ ಚಾರ್ಜ್ ಶೀಟ್ಗೆ ಹೆಸರು ಇಡುತ್ತಿದ್ದೇವೆ. ಇದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 165 ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ. ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ಕೊಡುತ್ತೇವೆ. ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ಕೊಡುತ್ತೇವೆ, ನಾನು ಸಿಎಂ ಇದ್ದಾಗ 7 ಕೆ.ಜಿ ಅಕ್ಕಿ ಉಚಿತವಾಗಿ ಕೊಡ್ತಾಯಿದ್ದೆವು. ಮುಂದೆ ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಯಾರ ಮನೆ ಕಾಯಬೇಕಿಲ್ಲ, ಭವಾನಿ ರೇವಣ್ಣ ಪಕ್ಷ ಸೇರುವುದಾದರೆ ಸ್ವಾಗತ: ಅಶ್ವತ್ಥ್ ನಾರಾಯಣ
ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ಪಂಚಾಯತ್ಗಳಿಗೆ 200-300 ಮನೆಗಳನ್ನ ಕೊಟ್ಟಿದ್ದೆ. ಇವರ ಮನೆ ಹಾಳಾಗ ಕಟ್ಟಿರುವ ಮನೆಗಳಿಗೆ ಬಿಲ್ ಕೊಡುತ್ತಿಲ್ಲ ಇವರು. ನಾನು ಸಿಎಂ ಇದ್ದಾಗ ವರ್ಷಕ್ಕೆ 3 ಲಕ್ಷ ಮನೆಗಳನ್ನ ಕಟ್ಟಿಸಿದ್ದೆವು. ಐದು ವರ್ಷಕ್ಕೆ 15 ಲಕ್ಷ ಮನೆಗಳನ್ನ ಕಟ್ಟಿದ್ದೆವು ಎಂದರು.
ತಾಂಡಗಳಲ್ಲಿ ವಾಸ ಮಾಡುವ ಜನರಿಗೆ ಯಾವುದೇ ದಾಖಲಾತಿಗಳು ಇರಲಿಲ್ಲ. ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆವು. ಇದನ್ನು ಮಲ್ಲಿಕಾರ್ಜುನ ಖರ್ಗೆ ಅವರು ಆರಂಭಸಿದ್ದರು. ಅದರಂತೆ ನರಸಿಂಹಯ್ಯ ನೇತೃತ್ವದಲ್ಲಿ ನಾವು ತಾಂತ್ರಿಕ ಸಮಿತಿ ನೇಮಕ ಮಾಡಿದ್ದೆವು. ಆಗ ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಂಡಿದ್ದೆವು ಎಂದರು.
ಅಂದು ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ದರು. ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ದೆವು. ನಾರಾಯಣಪುರ ಸ್ಕಾಡಾ ಗೇಟ್ಗಳನ್ನು 2014ರಲ್ಲಿ ನಾವು ಪ್ರಾರಂಬಿಸಿದ್ದೆವು. 3500 ಸಾವಿರ ಕೋಟಿ ನಾವು ಇದ್ದಕ್ಕೆ ಖರ್ಚು ಮಾಡಿದ್ದೆವು. ಇದನ್ನು ಮೋದಿಯವರು ಉದ್ಘಾಟಿಸಿದರು. ಅಡುಗೆ ಮಾಡಿದವರು ನಾವು ಊಟಕ್ಕೆ ಮೋದಿಗೆ ಕರೆದುಕೊಂಡು ಬಂದರು ಎಂದು ಟಾಂಗ್ ಕೊಟ್ಟರು.
ಮೋದಿ ಮಿಮಿಕ್ರಿ ಮಾಡಿದ ಸಿದ್ದರಾಮಯ್ಯ
ಸಮಾವೇಶದಲ್ಲಿ ಭಾಷಣ ಮಾಡುತ್ತಾ ಸಿದ್ದರಾಮಯ್ಯ ಅವರು ಮಿಮಿಕ್ರಿ ಮಾಡಿದರು. ಹತ್ತಿಗೆ ಬೆಲೆ ಇಲ್ಲ ತೊಗರಿ ಬೆಳೆ ಹಾಳಾಗಿ ಹೋಗಿದೆ. ರೈತರಿಗೆ ಪರಿಹಾರ ಕೊಡಬೇಕು. ನಮ್ಮದು ರೈತರ ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಅಂತಾರೆ. ರೈತರ ದುಪ್ಪಟ್ಟು ಮಾಡುತ್ತೇನೆ ಅಂತ ಮೋದಿ ಹೇಳಿದ್ದರು. ಆಯ್ತಾ? ಗೊಬ್ಬರದ ಬೆಲೆ ಗಗನಕ್ಕೆ ಹೋಗಿದೆ. ಡಿಎಪಿ ಬೆಲೆ ಏರಿಕೆ ಆಗಿದೆ. ಮೋದಿ ಹೇಳ್ತಾರೆ ಅಚ್ಚೆ ದಿನ್ ಆಯೇಂಗೆ ಅಂತಾ, ಆದರೆ ಆಯ್ತಾ? ಮೋದಿ ಇನ್ನೊಂದು ಸುಳ್ಳು ಹೇಳಿದರು. ನಾ ಕಾವುಂಗಾ ನಾ ಕಾಹನ ದುಂಗಾ ಮೈ ಚೌಕಿದಾರ್ ಅಂತ ಹೇಳಿದರು. ಮೋದಿ ಜೀ ಕಿಂವ್ ಜೂಟ್ ಬೋಲ್ತೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮೋದಿ ಮಿಮಿಕ್ರಿ ಮಾಡಿದರು.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಇದೆ ತುಕ್ಡೆ ಗ್ಯಾಂಗ್, ಮೋದಿ ವಿರೋಧಿ ಶಕ್ತಿಗಳ ಸಾಥ್: ಸಿ.ಟಿ.ರವಿ
ಈ ಭಾಗಕ್ಕೆ ಖರ್ಗೆ, ಎನ್.ಧರಂಸಿಂಗ್ ಅಪಾರ ಕೊಡುಗೆ ನೀಡಿದ್ದಾರೆ: ಡಿಕೆಶಿ
ಸಮಾವೇಶದಲ್ಲಿ ಭಾಷಣ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಲ ದಿನಗಳ ಹಿಂದೆ ಮೋದಿ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದಿದ್ದರು. ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನಾದರೂ ಸಾಕ್ಷ್ಯ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು. ಈ ಭಾಗಕ್ಕೆ ಮಲ್ಲಿಕಾರ್ಜುನ ಖರ್ಗೆ, ಎನ್.ಧರಂಸಿಂಗ್ ಅಪಾರ ಕೊಡುಗೆ ನೀಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾವುದಾರೂ ಅಣೆಕಟ್ಟು ನಿರ್ಮಿಸಿದ್ದೀರಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈ ಭಾಗಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ ಮೀಸಲಿಡುತ್ತೇವೆ. ರಾಜ್ಯದಲ್ಲಿ ಇನ್ಮುಂದೆ ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಕುಟುಂಬದ ಒಬ್ಬ ಮಹಿಳೆಯರಿಗೆ 2 ಸಾವಿರ ರೂ. ನೀಡಲಿದ್ದೇವೆ. 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ರೂಪಾಯಿ ಖಚಿತ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:53 pm, Sat, 28 January 23