ನಾವು ಸೋಮಶೇಖರ್​ಗೆ ಏನು ಮಾಡಿದ್ದೆವು? ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಹಿರಂಗ ಪತ್ರದಲ್ಲಿ ಇನ್ನೂ ಏನೇನಿದೆ ನೋಡಿ

| Updated By: ಗಣಪತಿ ಶರ್ಮ

Updated on: Feb 29, 2024 | 7:56 AM

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್ ವಿರುದ್ಧ ಬಿಜೆಪಿಗರ ಸಿಟ್ಟು ಇನ್ನೂ ತಣಿದಿಲ್ಲ. ಅಡ್ಡಮತದಾನ ವಿಚಾರವಾಗಿ ಸೋಮಶೇಖರ್​​ಗೆ ರಾಜಾಜಿನಗರ ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗ ಪತ್ರ ಬರೆದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ನಾವು ಸೋಮಶೇಖರ್​ಗೆ ಏನು ಮಾಡಿದ್ದೆವು? ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಹಿರಂಗ ಪತ್ರದಲ್ಲಿ ಇನ್ನೂ ಏನೇನಿದೆ ನೋಡಿ
ಸುರೇಶ್ ಕುಮಾರ್ & ಸೋಮಶೇಖರ್
Follow us on

ಬೆಂಗಳೂರು, ಫೆಬ್ರವರಿ 29: ರಾಜ್ಯಸಭಾ ಚುನಾವಣೆಯಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ (S Suresh Kumar) ಬಹಿರಂಗ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿರುವ ಸುರೇಶ್​ ಕುಮಾರ್, ಸೋಮಶೇಖರ್ ನಿಲುವಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜತೆಗೆ ಬಿಜೆಪಿ (BJP) ಕಾರ್ಯಕರ್ತರ ನೋವಿನ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಸುರೇಶ್ ಕುಮಾರ್ ಪತ್ರದಲ್ಲೇನಿದೆ?

‘ತಾವು ಬಹಳ ದಿನದ ಕಣ್ಣು ಮುಚ್ಚಾಟದ ನಂತರ ಈಗ ರಾಜ್ಯ ಸಭೆಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿ ಆತ್ಮಸಾಕ್ಷಿಯ ಹೆಸರಿನಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗೆ ತಮ್ಮ ಮತವನ್ನು ನೀಡಿ ಕೃತಾರ್ಥರಾಗಿದ್ದೀರಿ. (ಆತ್ಮಸಾಕ್ಷಿ ಎಂಬುದು ಅತ್ಯಂತ ಅನುಕೂಲಸಿಂಧು ಪದ ಎಂಬುದು ನಿಮಗೂ ಗೊತ್ತು). ಕೆಲವು ದಿವಸಗಳ ಹಿಂದೆ ಪದವೀಧರ ಶಿಕ್ಷಕರ ಕ್ಷೇತ್ರದ ನಮ್ಮ ಎನ್​ಡಿಎ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದ್ದು ಸಾಲದೆ ಆಡಳಿತ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೀರಿ. ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಒಂದೇ ವೇದನೆ. ‘ನಾವು ಸೋಮಶೇಖರ್​​ರಿಗೆ ಏನು ಮಾಡಿದ್ದೆವು? ನಮ್ಮ ಪ್ರೀತಿ ಗೌರವದಲ್ಲಿ ಅವರಿಗೇನು ಕೊರತೆ ಇತ್ತು? ಕಾಂಗ್ರೆಸ್ ಕಾರ್ಯಕರ್ತರು ನಮಗಿಂತ ಹೆಚ್ಚು ಏನು ಕೊಡಬಲ್ಲರು?’ ನಮ್ಮ ಪರಿವಾರದ ಪ್ರಮುಖರಿಗೂ ಅದೇ ಬೇಸರ. ನಾವು ಇಷ್ಟು ಚೆನ್ನಾಗಿ ನೋಡಿಕೊಂಡ, ನಂಬಿದ್ದ ಸೋಮಶೇಖರ್ ಹೀಗ್ಯಾಕೆ ಆದರು? ಎಂಬುದು. ದೇವರು ನಿಮಗೆ ಒಳಿತು ಮಾಡಲಿ’ ಎಂದು ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸುರೇಶ್ ಕುಮಾರ್ ಪತ್ರ


ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎಸ್​ಟಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿ ಪರ ಅಟ್ಟ ಮತದಾನ ಮಾಡಿದ್ದರು. ಆ ಮೂಲಕ ಬಿಜೆಪಿ ಜೆಡಿಎಸ್ ಮೈತ್ರಿಗೆ ಆಘಾತ ನೀಡಿದ್ದರು. ಸೋಮಶೇಖರ್ ಅವರು ಕಳೆದ ಹಲವು ದಿನಗಳಿಂದ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಒಂದು ಹಂತದಲ್ಲಿ, ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಬಗ್ಗೆ ಬಲವಾದ ವದಂತಿ ಹಬ್ಬಿತ್ತು. ಬಿಜೆಪಿ ನಾಯಕರ ಕೆಲವು ನಡೆಗಳ ಬಗ್ಗೆ ಸೋಮಶೇಖರ್ ಬಹಿರಂಗವಾಗಿಯೇ ಟೀಕೆ ಮಾಡಿದ್ದರು.

ಇದನ್ನೂ ಓದಿ: ಎಸ್​ಟಿ ಸೋಮಶೇಖರ್ ಮತ 25 ಕೋಟಿ ರೂ.ಗೆ ಸೇಲ್: ಜೆಡಿಎಸ್ ನಾಯಕ ರಮೇಶ್ ಗೌಡ ಗಂಭೀರ ಆರೋಪ

ಅಂತಿಮವಾಗಿ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ವಿರುದ್ಧದ ಅಸಮಾಧಾನವನ್ನು ಹೊರಹಾಕಿದ್ದರು. ಬಿಜೆಪಿಯು ಇದೀಗ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ