ರಾಜ್ಯಸಭೆ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಪಾಳಯದಲ್ಲಿ ರಾಜಕಾರಣ ಚುರುಕು, ಕಾದು ನೋಡುವ ತಂತ್ರಕ್ಕೆ ಬಿಜೆಪಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 03, 2022 | 1:32 PM

ಕಾಂಗ್ರೆಸ್​ನ 2ನೇ ಅಭ್ಯರ್ಥಿಯ ನಾಮಪತ್ರ ಹಿಂದಕ್ಕೆ ತೆಗೆಸಲು ಜೆಡಿಎಸ್ ತಂತ್ರ ಹೆಣೆದಿದೆ. ಆಡಳಿತಾರೂಢ ಬಿಜೆಪಿ ಕಾದುನೋಡುವ ತಂತ್ರಕ್ಕೆ ಶರಣಾಗಿದೆ.

ರಾಜ್ಯಸಭೆ ಚುನಾವಣೆ: ಜೆಡಿಎಸ್-ಕಾಂಗ್ರೆಸ್ ಪಾಳಯದಲ್ಲಿ ರಾಜಕಾರಣ ಚುರುಕು, ಕಾದು ನೋಡುವ ತಂತ್ರಕ್ಕೆ ಬಿಜೆಪಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯಸಭೆಯ (Rajya Sabha Elections) ನಾಲ್ಕು ಸದಸ್ಯ ಸ್ಥಾನಗಳಿಗೆ ಜೂನ್ 10ರಂದು ಮತದಾನ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿವೆ. ಕಾಂಗ್ರೆಸ್ ತನ್ನ 2ನೇ ಅಭ್ಯರ್ಥಿಯಿಂದ ನಾಮಪತ್ರ ಹಿಂದಕ್ಕೆ ತೆಗೆಸಬಹುದು ಎಂಬ ಮಾತುಗಳು ಕೇಳಿಬರುತ್ತಿವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಕಾದುನೋಡುವ ತಂತ್ರಕ್ಕೆ ಶರಣಾಗಿದೆ. 3ನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್​ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್​ನ 2ನೇ ಅಭ್ಯರ್ಥಿ ನಾಮಪತ್ರ ಹಿಂಪಡೆದರೆ ಬಿಜೆಪಿಯ ಗೆಲುವು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳವಣಿಗೆಗಳನ್ನು ಕಾದು ನೋಡುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.

2ನೇ ಅಭ್ಯರ್ಥಿಯ ನಾಮಪತ್ರ ಹಿಂದಕ್ಕೆ ತೆಗೆಸುವಂತೆ ಕಾಂಗ್ರೆಸ್ ನಾಯಕರ ಮನವೊಲಿಕೆ ಪ್ರಯತ್ನವನ್ನು ಜೆಡಿಎಸ್ ಮುಂದುವರಿಸಿದೆ. ಅಭ್ಯರ್ಥಿ ಗೆಲ್ಲಿಸಲು ಸಂಧಾನ ಸೂತ್ರದ ಮೊರೆಹೋಗಿರುವ ಜೆಡಿಎಸ್ ನಾಯಕರು ಕಾಂಗ್ರೆಸ್​ನ ವಿವಿಧ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ. ವಿದೇಶದಲ್ಲಿರುವ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಸಹ ಕಾಂಗ್ರೆಸ್ ನಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮಾತುಕತೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಸಿದ್ದರಾಮಯ್ಯ ಸೇರಿ ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದ ಜೆಡಿಎಸ್ ನಾಯಕರು ಇಂದು ಮತ್ತೋರ್ವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿ ವಿನಂತಿಸಿದ್ದಾರೆ. ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮತ್ತು ನಾಯಕ ಸಿ.ಎಸ್.ಪುಟ್ಟರಾಜು ಈ ಸಂಬಂಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜ ಖರ್ಗೆ ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.

ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿರುವ ಜೆಡಿಎಸ್​ನ ಸಂಧಾನ ತಂತ್ರದ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್​ನ ಹೈಕಮಾಂಡ್​ ಮಟ್ಟದಲ್ಲಿ ಜೆಡಿಎಸ್ ನಡೆಸುತ್ತಿರುವ ತಂತ್ರಗಾರಿಕೆಯು ಕುತೂಹಲ ಮೂಡಿಸಿದೆ.

ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಕಾಂಗ್ರೆಸ್ ನಾಯಕರು ನಮ್ಮ ಬೆಂಬಲಕ್ಕೆ ಬರುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ನಾಯಕರು ಕಾಂಗ್ರೆಸ್ ಹೈಕಮಾಂಡ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಒಂದು ಶುಭ ಸುದ್ದಿ ಬರುವ ನಿರೀಕ್ಷೆಯಲ್ಲಿದ್ದೇವೆ. ಕಾಂಗ್ರೆಸ್ ಒಳ್ಳೆಯ ನಿರ್ಧಾರಕ್ಕೆ ಬರುತ್ತದೆ. ನಮ್ಮ ವಿರೋಧಿ ಬಿಜೆಪಿ, ಕಾಂಗ್ರೆಸ್​ಗೂ ವಿರೋಧಿ. ಹೀಗಾಗಿ ಜೆಡಿಎಸ್​ಗೆ ಕಾಂಗ್ರೆಸ್ ಬೆಂಬಲ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Fri, 3 June 22