AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಕೆಲವು ಶಾಸಕರು, ಸಂಸದರು ಈಗಾಗಲೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ ಎಂದಿದ್ದಾರೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಸಿಎಂ ಸಿದ್ದರಾಮಯ್ಯ
Anil Kalkere
| Edited By: |

Updated on: Jan 20, 2024 | 9:37 PM

Share

ಬೆಂಗಳೂರು, ಜನವರಿ 20: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಒಂದು ದಿನ ಕಳೆದ್ರೆ, ಶತಶತಮಾನಗಳಿಂದ ರಾಮ ಭಕ್ತರ ಕನವರಿಕೆಗೆ ಫಲಸಿಗುವ ಸನ್ನಿವೇಶ ಒದಗಿ ಬರಲಿದೆ. ಹಾಗಾಗಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಈಗಾಗಲೇ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಮಾಯಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಕಿವಿಗೆ ಬಿದ್ದ ತಕ್ಷಣ ಆತುರಕ್ಕೆ ಬಿದ್ದು ಆವೇಶಕ್ಕೆ ಒಳಗಾಗದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಪ್ರಸಂಗತನವನ್ನು ಮಾಡಬಾರದು ಎಂದಿದ್ದಾರೆ.

ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆಯಲ್ಲಿ ಬೆದರಿಕೆ ಮತ್ತು ಪ್ರಚೋದನೆಯ ದನಿ

ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಹೊಣೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಶಾಂತಿ ಕಾಪಾಡಿಕೊಂಡು ಬರಬೇಕೆಂಬ ಸದಾಶಯಕ್ಕಿಂತ ಹೆಚ್ಚಾಗಿ ಬೆದರಿಕೆ ಮತ್ತು ಪ್ರಚೋದನೆಯ ದನಿ ಇದೆ. ಸರ್ಕಾರಕ್ಕೆ ಅದರ ಕರ್ತವ್ಯದ ಅರಿವಿದೆ. ತಪ್ಪು ನಡೆದರೆ ಕಾನೂನು ಅದರ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿಯ ಕೆಲವು ಶಾಸಕರು, ಸಂಸದರು ಈಗಾಗಲೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಇಂತಹವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಕಠಿಣ ಕ್ರಮಗಳನ್ನು ಕೈಗೊಂಡರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸರ್ಕಾರದ ಕೆಲಸ ಸುಲಭವಾಗುತ್ತದೆ.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯರನ್ನೇ ಕರೆದಿಲ್ಲ: ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದ ಸಚಿವ ಚಲುವರಾಯಸ್ವಾಮಿ

ದೇವರು, ಧರ್ಮ, ಪೂಜೆ, ಆರಾಧನೆಗಳೆಲ್ಲ ವೈಯಕ್ತಿಕವಾದುದು. ಇದನ್ನು ವೈಯಕ್ತಿಕ ಮಟ್ಟದಲ್ಲಿಯೇ ಉಳಿಸಿಕೊಂಡರೆ ದೇವರು, ಧರ್ಮ ಎಲ್ಲರಿಗೂ ಗೌರವ ಮತ್ತು ಸಮಾಜಕ್ಕೂ ಕ್ಷೇಮ. ಇದು ಎಲ್ಲ ಧರ್ಮಾನುಯಾಯಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.