ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧತೆ: ಸಭೆಯಲ್ಲಿ ಸಿದ್ದರಾಮಯ್ಯಗೆ ಮಾಜಿ ಕಾರ್ಪೊರೇಟರ್ ಮಹತ್ವದ ಸಲಹೆ
ಈ ವರ್ಷದ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಇನ್ನು ಬಿಬಿಎಂಪಿ ಚುನಾವಣೆಗೆ ಸಂಬಂಧ ಸಿದ್ದರಾಮಯ್ಯ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಬೆಂಗಳೂರು: ಈ ವರ್ಷದ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ (BBMP Elections )ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ಸಿದ್ಧರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಬಿಬಿಎಂಪಿ ಮಾಜಿ ಸದಸ್ಯರಿಗೆ ಸೂಚಿಸಿದ್ದಾರೆ. ಬುಧವಾರ ಗೃಹ ಕಚೇರಿ ಕೃಷ್ಣದಲ್ಲಿ ಬಿಬಿಎಂಪಿ ಮಾಜಿ ಮೇಯರ್, ಆಡಳಿತ ಪಕ್ಷದ ಮಾಜಿ ನಾಯಕರು ಹಾಗೂ ಸದಸ್ಯರೊಂದಿಗೆ ಚರ್ಚಿಸಿ, ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ. ಅದಕ್ಕಿರುವ ಕಾನೂನು ತೊಡಕನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತೇವೆ. ಚುನಾವಣೆಗೆ ಎಲ್ಲರೂ ಸಿದ್ಧರಾಗಿರಬೇಕು ಎಂದು ತಿಳಿಸಿದರು. ಈ ವೇಳೆ ಸದಸ್ಯರು ಸಹ ಸಿಎಂ ಸಿದ್ದರಾಮಯ್ಯಗೆ ಮಹತ್ವದ ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ: BBMP Election: 8 ವರ್ಷದಿಂದ ನಡೆಯದ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಈ ವೇಳೆ ಮಾಜಿ ಸದಸ್ಯರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿರುವ ವಾರ್ಡ್ ಮರುವಿಂಗಡಣೆ ಸಮರ್ಪಕವಾಗಿಲ್ಲ. 198 ವಾರ್ಡ್‌ಗಳನ್ನು ಮರುವಿಂಗಡಿಸಿ 243 ವಾರ್ಡ್‌ಗಳನ್ನಾಗಿ ಮಾಡಲಾಗಿದೆ. ಆದರೆ, ಈ ವೇಳೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳ ವಾರ್ಡ್‌ಗಳನ್ನು ಕಡಿಮೆ ಮಾಡಿ, ಬಿಜೆಪಿ ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಸದ್ಯ ಇರುವ 243 ವಾರ್ಡ್‌ಗಳಂತೆಯೇ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷಕ್ಕೆ ಅನಾನುಕೂಲವಾಗಲಿದೆ. ಹೀಗಾಗಿ 243 ವಾರ್ಡ್‌ಗಳ ಗಡಿಯಲ್ಲಿ ಬದಲಾವಣೆ ಮಾಡಬೇಕು ಅಥವಾ ಹಿಂದಿದ್ದಂತೆ 198 ವಾರ್ಡ್‌ಗಳನ್ನು ಮರುಸ್ಥಾಪಿಸಿ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂಕೋರ್ಚ್‌ನಲ್ಲಿದೆ. ಹೀಗಿರುವಾಗ ವಾರ್ಡ್ ಮರುವಿಂಗಡಣೆ ಸೇರಿ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಹೋದರೆ ಚುನಾವಣೆ ಮುಂದೂಡಬೇಕಾಗುತ್ತದೆ. ಆಗ ಸುಪ್ರೀಂಕೊರ್ಚ್‌ನಲ್ಲಿ ಸರ್ಕಾರ ಉತ್ತರಿಸಲು ಕಷ್ಟವಾಗುತ್ತದೆ. ವಾರ್ಡ್ ಮರು ವಿಂಗಡಣೆಯಲ್ಲಿ ಲೋಪ ಸರಿಪಡಿಸಲು ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಬಿಬಿಎಂಪಿಯನ್ನು ಎರಡು ಅಥವಾ ಮೂರು ಭಾಗವಾಗಿ ವಿಂಗಡಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದು, ಕೊನೆಗೆ ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ, ಈ ವರ್ಷದ ಅಂತ್ಯದಲ್ಲಿ ಚುನಾವಣೆ ನಡೆಸುತ್ತೇವೆ. ಅದರ ಬಗ್ಗೆ ಎಲ್ಲರೂ ಗಮನಹರಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳ ವರದಿಯನ್ನು ಸಭೆ ಮುಂದಿಟ್ಟ ಸಿಎಂ
ಇಡೀ ಬೃಹತ್ ಬೆಂಗಳೂರಿಗೆ ಒಬ್ಬರೇ ಮೇಯರ್ ಇರುವುದರಿಂದ ಆಡಳಿತಾತ್ಮಕವಾಗಿ ನಿಭಾಯಿಸುವುದು ಕಷ್ಟ. ಮೂವರು ಮೇಯರ್ ಹಾಗೂ ಆಯುಕ್ತರಿದ್ದರೆ ಆಡಳಿತ ನಿರ್ವಹಿಸಬಹುದು. ಅಧಿಕಾರಿಗಳು ತಮಗೆ ನೀಡಿರುವ ವರದಿಯಲ್ಲಿ ಇದನ್ನ ತಿಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಅವರು ಮಾಜಿ ಮೇಯರ್ ಗಳು ಹಾಗೂ ಮಾಜಿ ಕಾರ್ಪೊರೇಟರ್ ಗಳ ಸಭೆಯಲ್ಲಿ ತಿಳಿಸಿದ್ದಾರೆ.
ಆದ್ರೆ, ಇದಕ್ಕೆ ಮಾಜಿ ಕಾರ್ಪೋರೇಟರ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಈ ರೀತಿಯ ಪ್ರಯೋಗಕ್ಕೆ ಕೈಹಾಕುವುದು ಬೇಡ ಎಂದಿದ್ದಾರೆ. ಬಿಬಿಎಂಪಿಗೆ ಕಾರ್ಪೊರೇಟರ್ ಗಳು ಇಲ್ಲದೆ ಅಭಿವೃದ್ಧಿ ಕುಂಠಿತವಾಗಿದೆ. ದಯವಿಟ್ಟು ಮೊದಲು 198 ವಾರ್ಡ್ ಗಳಿಗೆ ಚುನಾವಣೆ ನಡೆಸಿ, ಹೇಗಿದ್ದರೂ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ಬಿಬಿಎಂಪಿ ಚುಕ್ಕಾಣಿಯನ್ನೂ ನಾವೇ ಹಿಡಿಯಲು ಸಹಕಾರಿಯಾಗಲಿದೆ ಎಂದು ಸಿಎಂಗೆ ಸಲಹೆ ನೀಡಿದ್ದಾರೆ.
Published On - 9:53 am, Thu, 8 June 23