Siddaramiah: ಮೊಟ್ಟೆ ಎಸೆತಕ್ಕೆ ಆಕ್ರೋಶ: ಕೊಡಗು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಿದ್ದರಾಮಯ್ಯ ನಿರ್ಧಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 19, 2022 | 10:43 AM

Karnataka Politics: ‘ಗೋಬ್ಯಾಕ್‘ ಎಂದರೆ ನಾನು ಎಲ್ಲಿಗೆ ಹೋಗಬೇಕು? ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೂ ‘ಗೋಬ್ಯಾಕ್’ ಎಂದು ಹೇಳುತ್ತಾರೆ ಎಂದು ಸವಾಲು ಹಾಕಿದರು.

Siddaramiah: ಮೊಟ್ಟೆ ಎಸೆತಕ್ಕೆ ಆಕ್ರೋಶ: ಕೊಡಗು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಿದ್ದರಾಮಯ್ಯ ನಿರ್ಧಾರ
ಸಿದ್ದರಾಮಯ್ಯ
Follow us on

ಚಿಕ್ಕಮಗಳೂರು: ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ಮಾಡಿರುವ ಬಿಜೆಪಿ ವಿರುದ್ಧ ಸಿದ್ದರಾಮಯ್ಯ  (Siddaramiah) ಕೆಂಡಾಮಂಡಲವಾಗಿದ್ದಾರೆ. ಅತಿವೃಷ್ಟಿಯ ಅನಾಹುತಗಳನ್ನು ಪರಿಶೀಲಿಸಲೆಂದು ಜಿಲ್ಲೆಗೆ ಬಂದಿರುವ ಸಿದ್ದರಾಮಯ್ಯ, ಚಿಕ್ಕಮಗಳೂರು ತಾಲೂಕಿನ ಬಾಸಾಪುರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ರಕ್ಷಣೆ ಒದಗಿಸಬೇಕಿದ್ದ ಕೊಡಗು ಎಸ್​ಪಿ ಏನು ಮಾಡುತ್ತಿದ್ದರು? ಇವರ ವರ್ತನೆ ಖಂಡಿಸಿ ಆಗಸ್ಟ್ 26ರಂದು ಕೊಡಗು ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ. ನಿನ್ನೆಯ ನಡೆದಿರುವ ಘಟನೆಗೆ ರಾಜ್ಯ ಸರ್ಕಾರದ್ದೇ ಚಿತಾವಣೆ, ಅವರೇ ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷವು ಎರಡು ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಸೋಲಿನ ಭೀತಿ ಮತ್ತು ಗೆಲ್ಲಲು ಆಗದ ಹತಾಶೆಯಿಂದ ಬಿಜೆಪಿ ಕಾರ್ಯಕರ್ತರು ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದರು. ‘ಗೋಬ್ಯಾಕ್‘ ಎಂದರೆ ನಾನು ಎಲ್ಲಿಗೆ ಹೋಗಬೇಕು? ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರೂ ‘ಗೋಬ್ಯಾಕ್’ ಎಂದು ಹೇಳುತ್ತಾರೆ ಎಂದು ಸವಾಲು ಹಾಕಿದರು.

ಜನಪ್ರತಿನಿಧಿಗಳಿಗೆ ಭದ್ರತೆ ನೀಡುವುದು ಪೊಲೀಸ್​ ಅಧಿಕಾರಿಗಳ ಜವಾಬ್ದಾರಿ. ಮೂರ್ನಾಲ್ಕು ಕಡೆ ಪ್ರತಿಭಟನೆ ಮಾಡುವುದು ಗೊತ್ತಿದ್ದರೂ ಅವರು ಸುಮ್ಮನಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿ ಜಿಲ್ಲೆಗೆ ಬಂದಿದ್ದರೆ ಪೊಲೀಸರು ಇದೇ ರೀತಿ ಸುಮ್ಮನಿರುತ್ತಿದ್ದರೇ? ನಾಲ್ಕು ಕಡೆ ಪ್ರತಿಭಟನಾಕಾರರನ್ನ ತಡೆಯಲು ಆಗಲಿಲ್ವಾ ಇವರಿಗೆ? ಕೊಡಗಿನ ಎಸ್‌ಪಿಗೆ ಯಾವ ರೋಗ ಬಂದಿತ್ತು ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಪೊಲೀಸರ ವೈಫಲ್ಯ ಖಂಡಿಸಿ ಆಗಸ್ಟ್ 26ರಂದು ಕೊಡಗಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ನನ್ನ ನೇತೃತ್ವದಲ್ಲೇ ಎಸ್​ಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರದ ವಿರುದ್ಧ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪ ಪುನರುಚ್ಚರಿಸಿದ ಅವರು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಲೂಟಿ ಹೊಡೆಯಲು ಬಂದಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಎಂದಿಗೂ 40 ಪರ್ಸೆಂಟ್ ಸರ್ಕಾರ ಬಂದಿರಲಿಲ್ಲ. ಇದು ಕಮ್ಯೂನಲ್ ಮತ್ತು ಕರಪ್ಟ್ ಸರ್ಕಾರ. ದಕ್ಷಿಣ ಕನ್ನಡದಲ್ಲಿ ಕೊಲೆಯಾದಾಗ ಕೇವಲ ಪ್ರವೀಣ್ ಮನೆಗೆ ಸಿಎಂ ಹೋಗಿಬಂದರು. ಫಾಝಿಲ್ ಮತ್ತು ಮಸೂದ್ ಮನೆಗೆ ಹೋಗಲಿಲ್ಲ. ಪರಿಹಾರವನ್ನು ಕೇವಲ ಪ್ರವೀಣ್ ಕುಟುಂಬಸ್ಥರಿಗೆ ಮಾತ್ರ ಕೊಟ್ಟರು. ಇವರ ಸ್ವಂತ ಜೇಬಿನಿಂದ ಏನು ಕೊಟ್ಟಿದ್ದಾ ಅದು? ಪರಿಹಾರ ಕೊಟ್ಟಿದ್ದು ಜನಸಾಮಾನ್ಯರ ತೆರಿಗೆ ಹಣದಿಂದ. ಅದರಲ್ಲಿ ಸಮಾನತೆ ಬೇಡವೇ? ರಾಜ್ಯದಲ್ಲಿ ಪ್ರಜಾಪ್ರಭುತ್ವ, ಜನರ ಸರ್ಕಾರ ಸತ್ತು ಹೋಗಿದೆ ಎಂದರು.

ಕಾಫಿನಾಡಲ್ಲಿ ಸಿದ್ದರಾಮಯ್ಯ ಪ್ರವಾಸ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಿದ್ದರಾಮಯ್ಯ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಸಂಚರಿಸಿದ ನಂತರ ಚಿಕ್ಕಮಗಳೂರು ನಗರಕ್ಕೆ ಬಂದಿದ್ದಾರೆ. ಬೆಳಿಗ್ಗೆ 8ಕ್ಕೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ನಿವಾಸದಲ್ಲಿ ಉಪಹಾರ ಸೇವಿಸಿದ ನಂತರ ಸಿದ್ದರಾಮಯ್ಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಾಳೆಹೊನ್ನೂರು, ಕೊಪ್ಪ, ಶೃಂಗೇರಿ ತಾಲ್ಲೂಕಿನ ನೆರೆ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ನಂತರ ನಂತರ ಮೂಡಿಗೆರೆ ಕ್ಷೇತ್ರದ ಹಿರೇಬೈಲು, ಕಳಸ, ಕೊಟ್ಟಿಗೆಹಾರದಲ್ಲಿ ಪರಿಸ್ಥಿತಿ ವೀಕ್ಷಿಸಿ, ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ತಲಗೂರು ಗ್ರಾಮಕ್ಕೂ ಭೇಟಿ ನೀಡಲಿದ್ದಾರೆ. ಮೂಡಿಗೆರೆ ಐಬಿಯಲ್ಲಿ ಕಾಫಿ ಬೆಳೆಗಾಗರರೊಂದಿಗೆ ಸಭೆ ನಡೆಸಿದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಡಿಕೇರಿ ಪ್ರತಿಭಟನೆ ನಂತರ ಸಿದ್ದರಾಮಯ್ಯಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಮೊಟ್ಟೆ ಎಸೆತದ ನಂತರ ಭದ್ರತೆ ಹೆಚ್ಚಳ

ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಳಿಕ ವಿಪಕ್ಷ ನಾಯಕ ಪೊಲೀಸ್ ಭದ್ರತೆ ಹೆಚ್ಚಿಸಲಾಯಿತು. 20 ಪೊಲೀಸ್ ಅಧಿಕಾರಿಗಳು ಸೇರಿ 220 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಿನ್ನೆ ಸಿದ್ದರಾಮಯ್ಯ ಭದ್ರತೆಗೆ 80 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ನಿನ್ನೆ ಗುಡ್ಡೆಹೊಸೂರಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆಯಲಾಗಿತ್ತು.

Published On - 10:43 am, Fri, 19 August 22