ಒಕ್ಕಲಿಗರ ಸಮಾವೇಶದಲ್ಲಿ ಮತ್ತೊಮ್ಮೆ ಸಿಎಂ ಆಗುವ ಕನಸು ಬಿಚ್ಚಿಟ್ಟ ಡಿಕೆ ಶಿವಕುಮಾರ್: ನಂಜಾವಧೂತ ಶ್ರೀ ಮತ್ತು ಕುಮಾರಸ್ವಾಮಿ ಏನು ಹೇಳಿದರು?
Nanjavadutha swamiji: ಪರೋಕ್ಷವಾಗಿ ಸಮುದಾಯದ ನಾಯಕರು ಸಿಎಂ ಆಗಲಿ ಎಂದು ಶ್ರೀಗಳು ಹೇಳಿದಂತಿತ್ತು. ಆದರೆ ನೀವು ಮಾತ್ರ ಕಿತ್ತಾಡಬೇಡಿ ಎಂದು ಇಬ್ಬರಿಗೂ ಸಲಹೆ ನೀಡಿದ್ದೇನೆ. ನಾವ್ಯಾರೂ ಸಿಎಂ ತಯಾರು ಮಾಡಲು ಆಗಲ್ಲ ಎಂದೂ ನಂಜಾವಧೂತ ಶ್ರೀ ಹೇಳಿದರು.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ (Hiriyur) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC president DK Shivakumar) ಮತ್ತೊಮ್ಮೆ ಸಿಎಂ ಆಗುವ ಕನಸು ಬಿಚ್ಚಿಟ್ಟಿದ್ದಾರೆ. ತಾಲೂಕು ಒಕ್ಕಲಿಗರ ಸಮಾವೇಶದಲ್ಲಿ ಡಿ.ಕೆ.ಶಿ ತಮ್ಮ ಈ ಮನದಾಳದ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಅನೇಕ ಅವಕಾಶಗಳು ಬರಲಿವೆ. ನಮ್ಮ ಸಮುದಾಯದ ನಾಯಕರುಗಳನ್ನು ತಯಾರು ಮಾಡಬೇಕಿದೆ. ‘ಕಿಟಕಿ ಬಾಗಿಲು ತೆರೆದು ಮನೆ ಬಾಗಿಲಿಗೆ ಬೆಳಕು ಬರುತ್ತಿದೆ’ ಮನೆ ಬಾಗಿಲಿಗೆ ಬರುವ ಲಕ್ಷ್ಮೀಯನ್ನು ಸರಿಯಾಗಿ ಮನೆಗೆ ಸೇರಿಸಿಕೊಳ್ಳಿ. ಈ ಮಾತನ್ನು ಶ್ರೀಗಳಿಗೆ ಕೈ ಮುಗಿದು ಹೇಳಿದ್ದೀನಿ ಎಂದುಯ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು. ಶ್ರೀಗಳು ಮುಚ್ಚಿಬಿಡಲಿ, ಇಲ್ಲ ವಾಪಸ್ ಓಡಿಸಲಿ ಅವರಿಗೆ ಬಿಟ್ಟಿದ್ದು. ನಮ್ಮ ಜನರೂ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಸಮಾಜಕ್ಕೆ ಸಮರ್ಥ ನಾಯಕರನ್ನು ನೀಡಬೇಕೆಂಬ ಆಸೆ ನಿಮ್ಮಲ್ಲೂ ಇದೆ. ಒಂದು ಛಲ ಇದೆ, ಇದಕ್ಕೆ ನಿಮ್ಮ ಆಶೀರ್ವಾದ ಬೇಕಾಗಿದೆ ಎಂದು ಡಿಕೆಶಿ ಕೋರಿದರು. ಇದಕ್ಕಿಂತ ಅನೇಕ ವಿಚಾರಗಳು ಇವೆ, ಬೇರೆ ದಿನ ಬಂದು ಮಾತಾಡುವೆ. ಈ ಡಿ.ಕೆ.ಶಿವಕುಮಾರ್ ನಿಮ್ಮ ಮಗ, ಕಷ್ಟ ಕಾಲದಲ್ಲಿ ನನ್ನ ಜತೆ ಇದ್ದೀರಾ. ಮುಂದೆಯೂ ನನ್ನ ಜತೆ ನಿಲ್ಲುತ್ತೀರಿ ಎಂಬ ವಿಶ್ವಾಸ ನನಗೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿದರು.
ಒಕ್ಕಲಿಗ ನಾಯಕ ಸಿಎಂ ಆಗುವ ವಿಚಾರ ಕುರಿತು ಶ್ರೀಗಳು ಏನು ಹೇಳಿದರು?
ಇನ್ನು ಇದೇ ಸಮಾವೇಶದಲ್ಲಿ ಭಾವಹಿಸಿದ್ದ ನಂಜಾವಧೂತ ಶ್ರೀ (Nanjavadutha swamiji) ಅವರು ಒಕ್ಕಲಿಗ ನಾಯಕ ಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಈ ಬಗ್ಗೆ ಭಗವಂತ ತೀರ್ಮಾನ ಮಾಡುತ್ತಾನೆ ಎಂದು ಇಂದು ನಡೆದ ಒಕ್ಕಲಿಗರ ಸಮಾವೇಶದಲ್ಲಿ ಅಭಿಪ್ರಾಯಪಟ್ಟರು. ಡಿ.ಕೆ. ಶಿವಕುಮಾರ್ ಹೇಳಿದರು ನಮಗೆ ಪೆನ್ನು ಕೊಟ್ಟು ನೀಡಿ ಅಂತಾ. ಯಾವ ಕಡೆ ಏನು ಆಗ್ತಿದೆ, ಏನು ಮಾಡ್ತೀವಿ ಅಂತ ನೋಡಬೇಕೆಂದರು. ಇದಕ್ಕೆ ನಾನು ಹೇಳಿದೆ ಭಗವಂತನಿಗೆ ನಾವು ಪ್ರಾರ್ಥನೆ ಮಾಡಿದ್ದೀವಿ. ಏನಾದರೂ ಮಾಡಿ ನಮ್ಮವರಿಗೆ ಪೆನ್ನು ಕೊಡಿ ಅಂತ ಪ್ರಾರ್ಥಿಸಿದ್ದೀವಿ. ಪೆನ್ನು ಬಲಗಡೆ ಹೋಗಬೇಕೋ, ಎಡಗಡೆ ಹೋಗಬೇಕೋ… ಈ ಬಗ್ಗೆ ಭಗವಂತ ತೀರ್ಮಾನ ಮಾಡುತ್ತಾನೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು. ಶ್ರೀಗಳು ಹೀಗೆ ಹೇಳುವಾಗ ಬಲಗಡೆ ಹೆಚ್ಡಿ ಕುಮಾರಸ್ವಾಮಿ ಮತ್ತು ಎಡಗಡೆ ಡಿಕೆ ಶಿವಕುಮಾರ್ಚ ಕಡೆ ತೋರಿಸಿ ಮಾತನಾಡಿದರು.
ಪೆನ್ನು ಎಂದು ಹೇಳುವ ಮೂಲಕ ನಮ್ಮವರು ಸಿಎಂ ಆಗಬೇಕೆಂಬ ಮಾತು ಕೇಳಿಬಂದಿದೆ. ಪರೋಕ್ಷವಾಗಿ ಸಮುದಾಯದ ನಾಯಕರು ಸಿಎಂ ಆಗಲಿ ಎಂದು ಶ್ರೀಗಳು ಹೇಳಿದಂತಿದೆ. ಆದರೆ ನೀವು ಮಾತ್ರ ಕಿತ್ತಾಡಬೇಡಿ ಎಂದು ಇಬ್ಬರಿಗೂ ಸಲಹೆ ನೀಡಿದ್ದೇನೆ. ನಾವ್ಯಾರೂ ಸಿಎಂ ತಯಾರು ಮಾಡಲು ಆಗಲ್ಲ. ಭಗವಂತನ ಪ್ರೀತಿ, ಕರುಣೆ ಇದ್ರೆ ಯಾರೂ ತಪ್ಪಿಸಲು ಆಗಲ್ಲ. ಪೆನ್ನು ಬಂದಾಗ ಈ ಸಮುದಾಯ ಮರೆಯಬೇಡಿ ಎಂದಿದ್ದೇನೆ. ನೀವು ಅರ್ಥ ಮಾಡಿಕೊಳ್ಳಿ ಸಮುದಾಯಕ್ಕೆ ಪೆನ್ನು ಬರುವುದ ಖಚಿತ. ಆದರೆ ಯಾವಾಗ ನೀಡಬೇಕೆಂಬುದನ್ನು ಭಗವಂತ ನಿರ್ಧರಿಸ್ತಾನೆ. ಒಗ್ಗಟ್ಟಾಗಿ ಪೆನ್ನು ಬರೋದಕ್ಕೆ ನೀವೆಲ್ಲರೂ ಪ್ರಯತ್ನ ಮಾಡಿ ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ನಂಜಾವಧೂತ ಶ್ರೀ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ:
ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಲಹೆ ನೀಡಿದ್ದೇನೆ, ಮನವಿಯೂ ಮಾಡಿದ್ದೇನೆ. ಕ್ಷುಲ್ಲಕ ವಿಚಾರ ದೂರವಿಟ್ಟು, ಸಮಸ್ಯೆಗಳ ಬಗ್ಗೆ ಚರ್ಚಿಸಿ. ಸರ್ವಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯುತವಾಗಿ ಬದುಕಲು ಬಿಡಿ. ಯಾವುದೇ ಸಂಘಟನೆಗಳಿರಲಿ, ಹಿಂದೂಪರ ಅಥವಾ ಯಾವುದೇ ಸಮಾಜದ ಪರ ಸಂಘಟನೆಯಿರಲಿ ಜನರ ಬದುಕಿಗೆ ಕಾರ್ಯಕ್ರಮಗಳು ಬೇಕಿವೆ ಎಂದು ಕುಮಾರಸ್ವಾಮಿ ಆಶಿಸಿದರು.
ಸಿದ್ಧರಾಮಯ್ಯ ಮೇಲೆ ಕೋಳಿ ಮೊಟ್ಟೆ ಎಸೆದದ್ದಕ್ಕೆ ನಾನು ಖುಷಿಪಡಲ್ಲ. ಇಂಥ ಘಟನೆಗಳು ನಡೆಯಬಾರದು. ಜನರ ಸಮಸ್ಯೆ ಕೇಳಲು ಬಂದವರ ಮೇಲೆ ಮೊಟ್ಟೆ ಎಸೆತ ಸರಿಯಲ್ಲ. ಮೊಟ್ಟೆ ಎಸೆದ ಸಂಘಟನೆಯವರು ಮಡಿಕೇರಿಗೆ ಗೌರವ ತಂದಿದ್ದೀರಾ? ಪ್ರಮೋದ್ ಮುತಾಲಿಕ್ ಗೆ ಈ ದೇಶದ ಸಮಸ್ಯೆ, ಬಡತನದ ಬಗ್ಗೆ ಗೊತ್ತಿಲ್ಲ. ಅಂಥವರ ಬಗ್ಗೆ ಚರ್ಚೆ ಬೇಕಿಲ್ಲ, ಅಂಥವರಿಗೆ ಜನ ಪ್ರೋತ್ಸಾಹಿಸಬಾರದು. ಈಗಾಗಲೇ ಸಂಪೂರ್ಣ ಬಹುಮತ ಗಳಿಸಿದ್ದೇವೆಂದು ಡಿಕೆಶಿ ಭಾವಿಸಿದ್ದಾರೆ. ಸಿದ್ಧರಾಮಯ್ಯ ಸಿಎಂ ಖುರ್ಚಿಗೆ ಮೊದಲು ಟವೆಲ್ ಹಾಕಿದ್ದಾರೆ. ಡಿಕೆಶಿ ಓವರ್ ಟೇಕ್ ಮಾಡಿ ಬರುತ್ತಾರಾ? ಡಿಕೆಶಿಗೆ ಅವರೆಲ್ಲಾ ಸುಲಭವಾಗಿ ಬಿಡುತ್ತಾರೆಯೇ? ಅವೆಲ್ಲಾ ಭಗವಂತನ ಇಚ್ಛೆ, ಜನರ ಭಾವನೆಯ ತೀರ್ಮಾನಕ್ಕೆ ಬದ್ಧ. ನನ್ನ ಪಕ್ಷದ ಶ್ರಮ ನಾನು ಹಾಕುತ್ತೇನೆ, ನಿಮ್ಮ (ಡಿಕೆಶಿ) ಶ್ರಮ ನೀವು ಹಾಕಿ. ಭಗವಂತ ಯಾರಿಗೆ ಅಧಿಕಾರ ಕೊಡುತ್ತಾನೋ ಗೊತ್ತಿಲ್ಲ. ಮುಂದಿನ ಚುನಾವಣೆ ಫಲಿತಾಂಶದ ಬಗ್ಗೆ ಗೊತ್ತಿಲ್ಲ. ಫಲಿತಾಂಶದ ಬಳಿಕ ಯಾವ ಬೆಳವಣಿಗೆ ಆಗಲಿದೆಯೋ ಅದೂ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆ ಬಿಜೆಪಿ ಬಿ ಟೀಂ ಅಂದಿದ್ದರು. ಚುನಾವಣೆ ಬಳಿಕ ಅದೇ ಕಾಂಗ್ರೆಸ್ ನಮ್ಮೊಟ್ಟಿಗೆ ಸರ್ಕಾರ ರಚನೆ ಮಾಡಿತು. ಆದರೆ ಈಗ ಚುನಾವಣಾ ಫಲಿತಾಂಶದ ಬಳಿಕವೇ ಮುಂದಿನ ಚರ್ಚೆ ಎಂದು ಕುಮಾರಸ್ವಾಮಿ ತಿಳಿಸಿದರು.
Published On - 6:53 pm, Thu, 18 August 22