ಬೆಂಗಳೂರು, ಫೆ.13: ರಾಜ್ಯ ಸರ್ಕಾರ ಸುಳ್ಳು ಹೇಳುವಂತಹ ಕ್ಯಾಂಪೇನ್ ಶುರು ಮಾಡಿದೆ ಎಂದು ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ ಎಂದು ಹೇಳಿದರು. ಜಿಎಸ್ಟಿ ಹಂಚಿಕೆಯಲ್ಲಿ ಕಡಿಮೆಯಾಗಿದೆ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಜೋಶಿ, ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸಲು ಯತ್ನ ಮಾಡಲಾಗುತ್ತಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಸುಳ್ಳು ಹೇಳುವಂತಹ ಕ್ಯಾಂಪೇನ್ ಶುರು ಮಾಡಿದೆ. ತಮ್ಮ ಕೈಯಲ್ಲಿ ಆಗದೇ ಇರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಶಾಸಕರು ಅಭಿವೃದ್ಧಿಗೆ ಹಣ ಇಲ್ಲ ಅಂತ ಹೇಳಿರುವುದೇ ಇದಕ್ಕೆ ಸಾಕ್ಷಿ. ಕ್ಲಾರಿಟಿ ಇಲ್ಲದೇ ಚುನಾವಣೆ ಪೂರ್ವದಲ್ಲಿ ಘೋಷಣೆಗಳನ್ನು ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ತಮ್ಮ ವೈಫಲ್ಯ ಮುಚ್ಚಿಕೊಳ್ಳಲಿಕ್ಕೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿ ಅನುದಾನ ಬಿಡುಗಡೆಯಾದ ಬಗ್ಗೆ ಅಂಕಿ ಅಂಶ ನೀಡಿದರು.
2004 ರಿಂದ 2014ರ ವರೆಗೆ ಕಾಂಗ್ರೆಸ್ ನೇತೃತ್ವದ ಅಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 60 ಸಾವಿರ ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ, ಮೋದಿ ನೇತೃತ್ವದ ಸರ್ಕಾರವು ಕಳೆದ 10 ವರ್ಷಗಳಲ್ಲಿ 2.36 ಲಕ್ಷ ಕೋಟಿ ಅನುದಾನ ನೀಡಿದೆ. ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಬಿಜೆಪಿ ಸರ್ಕಾರ ಶೇ.243 ರಷ್ಟು ಹೆಚ್ಚು ಅನುದಾನ ಕೊಟ್ಟಿದೆ ಎಂದರು.
ಇದನ್ನೂ ಓದಿ: ಕರ್ನಾಟಕಕ್ಕೆ ಎಷ್ಟು ತೆರಿಗೆ ಹಣ ನೀಡಲಾಗಿದೆ? ಅಂಕಿ-ಅಂಶ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಎನ್ಡಿಆರ್ಎಫ್ ಅಡಿ ನಾಲ್ಕು ಪಟ್ಟು ಹೆಚ್ಚು ಹಣ ರಾಜ್ಯಕ್ಕೆ ಕೊಟ್ಟಿದ್ದೇವೆ ಎಂದು ಹೇಳಿದ ಜೋಶಿ, 2004 ರಿಂದ 2014ರ ವರೆಗೆ ಯುಪಿಎ ಕಾಲದಲ್ಲಿ ರಾಜ್ಯಕ್ಕೆ 3,655 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 12,542 ಕೋಟಿ ರೂಪಾಯಿ ಕೊಟ್ಟಿದೆ ಎಂದರು.
ತೆರಿಗೆಯ ಪಾಲು 2004 ರಿಂದ 2014 ರ ವರೆಗೆ ಯುಪಿಎ ಕಾಲದಲ್ಲಿ ರಾಜ್ಯಕ್ಕೆ 81 ಸಾವಿರ ಕೋಟಿ ರೂ. ಅನುದಾನ ನೀಡಲಾಗಿತ್ತು. ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ 2.85 ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ. ಯುಪಿಎಗೆ ಹೋಲಿಕೆ ಮಾಡಿದರೆ ಶೇ.250 ರಷ್ಟು ಹೆಚ್ಚು ಅನುದಾನ ನಾವು ಕೊಟ್ಟಿದ್ದೇವೆ ಎಂದರು. ಜಿಎಸ್ಟಿ ಹಣವನ್ನು ಒಂದು ಪೈಸೆಯೂ ಬಾಕಿ ಇರಿಸಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟಿದೆ ಎಂದರು.
ಮುಖ್ಯಮಂತ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯ ಅಲ್ಲ, ಸುಳ್ಳುರಾಮಯ್ಯ. ಅವರು ಸುಳ್ಳು ಹೇಳುವುದರಲ್ಲಿ ಎಕ್ಸ್ಪರ್ಟ್ ಎಂದು ಜೋಶಿ ಹೇಳಿದರು. ಎರಡು ಕಾರಣಗಳಿಗಾಗಿ ಸುಳ್ಳು ಹೇಳುತ್ತಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗದೇ ಸುಳ್ಳು ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಜಗಳ ಡೈವರ್ಟ್ ಮಾಡಲು ಹೋರಾಟ ಮಾಡುತ್ತೇವೆ ಅಂತ ಹೇಳಿ ಡ್ರಾಮಾ ಮಾಡುತ್ತಿದ್ದಾರೆ ಎಂದರು.
ಕೇಂದ್ರದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ತಮ್ಮದು ಎಂದು ಹೇಳಿಕೊಂಡಿದೆ. ಅನುದಾನ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಆದವರು ಈ ರೀತಿ ಹೇಳುವುದು ಖಂಡನೀಯ. ಪ್ರಧಾನ ಮಂತ್ರಿಯನ್ನು ನಿಂದಿಸುವುದನ್ನು ಖಂಡಿಸುತ್ತೇನೆ. ಕೆಂಪಣ್ಣ ಈಗ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದಾರೆ, ಏನು ಹೇಳುತ್ತೀರಿ ಇದಕ್ಕೆ? ನಾಗಮೋಹನ್ ದಾಸ್ ಕಮಿಟಿ ಮಾಡಿದರು, ಕೋರ್ಟ್ ಸರ್ಕಾರಕ್ಕೆ ಛೀ ಥೂ ಎಂದಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ