ಚಿತ್ರದುರ್ಗ: ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಹಿಂಪಡೆಯಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯಶ್ರೀ (Jayamrutyunjaya swamiji) ಹೇಳಿದರು. ಜಿಲ್ಲೆಯಲ್ಲಿ ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಹಿನ್ನೆಲೆಯಲ್ಲಿ ಹಾಗೇ ಮಾತಾಡಿದ್ದಾರೋ ಗೊತ್ತಿಲ್ಲ. ಲಿಂಗಾಯತರು ಎಲ್ಲರೂ ಕೆಟ್ಟವರು ಆಗಿರಲ್ಲ. ಯಾರೋ ಒಬ್ಬರು ಭ್ರಷ್ಟಾಚಾರ ಮಾಡಿದ ಕಾರಣ ಇಡೀ ಲಿಂಗಾಯತರ ಮೇಲೆ ಟೀಕೆ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗತವಾಗಿ ಟೀಕೆ ಮಾಡಲಿ. ಆದರೆ ಸಮುದಾಯಗಳ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದರು.
ಹೇಳಿಕೆ ಪುನರ್ ಪರಿಶೀಲಿಸಿ ವಾಪಸ್ ಪಡೆಯಬೇಕು. ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಎಲ್ಲಾ ಸಮುದಾಯದವರು ಸಿಎಂ ಆಗಿದ್ದಾರೆ. ಸಿಎಂ ಆಗಿದ್ದಾಗ ತಪ್ಪು-ಒಪ್ಪು ಮಾಡಿದ್ದಾರೆ. ಎಸ್.ನಿಜಲಿಂಗಪ್ಪ, ವಿರೇಂದ್ರ ಪಾಟೀಲ್, ಜೆ.ಹೆಚ್.ಪಟೇಲ್ರಿಂದ ದೇಶ ಮೆಚ್ಚುವ ಆಡಳಿತ ಮಾಡಿದ್ದಾರೆ. ಯಾರೋ ಓರ್ವ ಲಿಂಗಾಯತ ಸಿಎಂ ತಪ್ಪು ಮಾಡಿದರೆಂಬ ಕಾರಣಕ್ಕೆ ಇಡೀ ಸಮುದಾಯದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಸಿದ್ಧರಾಮಯ್ಯ ಬಗ್ಗೆ ನಮಗೆ ಅಪಾರ ಗೌರವ ಇದೆ ಎಂದು ಹೇಳಿದರು.
ಇದನ್ನೂ ಓದಿ: ವೀರಶೈವ ಲಿಂಗಾಯತರ ಬಗ್ಗೆ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ
ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಹಾಳು ಮಾಡಿದ್ದಾರೆಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ವ್ಯಕ್ತಿಗತವಾಗಿ ನಾನು ಹೇಳಲು ಹೋಗುವುದಿಲ್ಲ. ಸಿದ್ಧರಾಮಯ್ಯಗೆ ಹಾಗೇ ಅನ್ನಿಸಿದರೆ ವ್ಯಕ್ತಿಗತ ಟೀಕೆ ಮಾಡಲಿ, ಸಮುದಾಯದ ಹೆಸರಿನಲ್ಲಿ ಟೀಕೆ ಸೂಕ್ತವಲ್ಲ ಎಂದರು.
ಈ ಕುರಿತಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದು, ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂಬ ಸಂವೇದನಾರಹಿತ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ: ಸಿದ್ದರಾಮಯ್ಯ ಸ್ಪಷ್ಟನೆ
ರಾಜ್ಯದ ಅತಿ ದೊಡ್ಡ ಸಮುದಾಯ ವೀರಶೈವ-ಲಿಂಗಾಯತ ನಾಯಕರನ್ನು ಹೀನಾಯವಾಗಿ ನಡೆಸಿಕೊಂಡು, ಸಮುದಾಯಕ್ಕೆ ದ್ರೋಹ ಬಗೆಯುತ್ತಾ ಬಂದಿದೆ ಕಾಂಗ್ರೆಸ್. ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರನ್ನೂ ಕಡೆಗಣಿಸಿ ಅವಮಾನಿಸಿದ ರಾಜ್ಯ ಕಾಂಗ್ರೆಸ್ಗೆ ವೀರಶೈವ-ಲಿಂಗಾಯತ ಸಮುದಾಯದವರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Sat, 22 April 23