ಬೆಂಗಳೂರು: ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದ ಕ್ರೆಡಿಟ್ ವಾರ್ ತೀವ್ರಗೊಂಡ ಬೆನ್ನಲ್ಲೇ ದಶಪಥ ಹೆದ್ದಾರಿಯನ್ನು ಮಾರ್ಚ್ 9ರಂದು ಪರಿಶೀಲಿಸುತ್ತೇನೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಆದರೆ, ಇದೀಗ ಕೊನೇ ಕ್ಷಣದಲ್ಲಿ ಅವರ ಹೆದ್ದಾರಿ ಪರಿಶೀಲನೆ ಕಾರ್ಯ ರದ್ದಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಗೆ (Assembly Elelctions) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳುಹಿಸುವುದಕ್ಕಾಗಿ ಬುಧವಾರ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ (Congress Screening Committee Meeting) ನಡೆದಿದೆ. ರಾತ್ರಿಯೇ ದೆಹಲಿಗೆ ಮೊದಲ ಪಟ್ಟಿ ರವಾನಿಸಬೇಕಿತ್ತು. ಆದರೆ, ಬಾಕಿ ಉಳಿದ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಬೇಕಾದ ಹಿನ್ನೆಲೆಯಲ್ಲಿ ಗುರುವಾರವೂ ಸಭೆ ಮುಂದುವರಿಯಲಿದೆ. ಹೀಗಾಗಿ ಸಿದ್ದರಾಮಯ್ಯ ಹೆದ್ದಾರಿ ವೀಕ್ಷಣೆ ರದ್ದಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಚುನಾವಣಾ ಟಿಕೆಟ್ ಪರಿಶೀಲನಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಾಗೂ ಇತರ ಪ್ರಮುಖ ನಾಯಕರು ಟಿಕೆಟ್ ಹಂಚಿಕೆ ಕುರಿತ ಸಭೆಯಲ್ಲಿ ಭಾಗವಹಿಸಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆ ಮಾಡಿದವರು ನಾವು. ಹೀಗಾಗಿ, ಅದರ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಬೇಕು ಎಂದು ಇತ್ತೀಚೆಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಯೋಜನೆಯಲ್ಲಿ ಸಂಸದ ಪ್ರತಾಪ್ ಸಿಂಹನದ್ದಾಗಲೀ ಬಿಜೆಪಿಯದ್ದಾಗಲೀ ಯಾವುದೇ ಪಾತ್ರವಿಲ್ಲ. ಸುಮ್ಮನೇ ಅವರೇ ಮಾಡಿಸಿದ್ದು ಎಂದುಕೊಂಡು ತಿರುಗಾಡುತ್ತಿದ್ದಾರೆ. ಮಾಜಿ ಸಚಿವ ಡಾ. ಎಚ್‌ಸಿ ಮಹದೇವಪ್ಪಗೆ ಈ ಹೆದ್ದಾರಿಯ ಎಲ್ಲ ಮಾಹಿತಿ ಇದೆ. ನಮ್ಮ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಅವರೇ ಈ ಯೋಜನೆಯನ್ನು ಮಾಡಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: Bengaluru-Mysuru Expressway: ಬೆಂಗಳೂರು-ಮೈಸೂರು ಹೆದ್ದಾರಿ ಕ್ರೆಡಿಟ್ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು: ಸಿದ್ದರಾಮಯ್ಯ
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದ ಸಂಸದ ಪ್ರತಾಪ್ ಸಿಂಹ, ನಮ್ಮಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣಗೊಂಡಿದೆ. ವಿನಾಕಾರಣ ಸಿದ್ದರಾಮಯ್ಯ ಈ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಾರೆ. 2 ತಿಂಗಳು ಕಾಯಿರಿ, ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ. ಅವರು ಚುನಾವಣೆಯಲ್ಲಿ ಸೋತು ಮನೆಗೆ ಹೋಗುತ್ತಾರೆ. ನಂತರ ಅವರು ಪ್ರವಾಸ ಮಾಡಲಿ. ಮಕ್ಕಳು, ಮೊಮ್ಮಕ್ಕಳ ಜತೆ ಬೆಂಗಳೂರು-ಮೈಸೂರು ಟ್ರಿಪ್ ಮಾಡಲಿ ಎಂದು ವ್ಯಂಗ್ಯವಾಡಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದರು. ಇಂತಹ ಸುಳ್ಳು ಸಿದ್ದರಾಮಯ್ಯ ಬಾಯಲ್ಲಿ ಬರುತ್ತಿರುವುದು ಹೊಸದಲ್ಲ. ಈ ಹಿಂದೆ ಪ್ರಧಾನಿ ಮೋದಿ ಕೊಟ್ಟ ಅಕ್ಕಿ ಚೀಲದ ಮೇಲೆ ಫೋಟೋ ಹಾಕಿಸಿಕೊಂಡಿದ್ದರು. ಆ ಮೂಲಕ ನಾವೇ ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಫೋಟೋ ಹಾಕಿಕೊಂಡು ರಾಜ್ಯದ ತುಂಬ ಪ್ರಚಾರ ಮಾಡುವ ಪ್ರಯತ್ನ ಮಾಡಿದ್ದರು ಎಂದು ವಿಜಯೇಂದ್ರ ಹೇಳಿದ್ದರು. ಬೆಂಗಳೂರು-ಮೈಸೂರು ಹೈವೇ ಕಾಮಗಾರಿ 9 ವರ್ಷಗಳಿಂದ ನಡೆಯುತ್ತಿದೆ. ಮೋದಿಯವರು ಯಾವಾಗಿನಿಂದ ಪ್ರಧಾನಿಯಾಗಿದ್ದಾರೆಂದು ಕಾಂಗ್ರೆಸ್ನವರು ತಿಳಿದುಕೊಳ್ಳಲಿ ಎಂದು ಸುಧಾಕರ್ ತಿರುಗೇಟು ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:13 pm, Wed, 8 March 23