ಬೆಂಗಳೂರಿನಲ್ಲಿ ಸಿದ್ದರಾಮೋತ್ಸವ ಸಮಿತಿ ಪೂರ್ವ ಸಿದ್ಧತಾ ಸಭೆ: ಆಯೋಜಕರಿಗೆ ಸಂಸದ ಡಿಕೆ ಸುರೇಶ್ ಟಾಂಗ್
ಯಾರದ್ದೋ ಅಂಜಿಕೆಯಿಂದ ಸಿದ್ದರಾಮೋತ್ಸವವನ್ನು ಅಲ್ಲಗೆಳಯಬೇಡಿ. ಇಲ್ಲಿ ಯಾರನ್ನೂ ವೈಭವೀಕರಿಸಲಾಗುತ್ತಿಲ್ಲ ಎಂದು ಡಿ.ಕೆ.ಸುರೇಶ್ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯನವರ 75ನೇ ಅಮೃತ ಮಹೋತ್ಸವ (Siddaramotsava) ಆಚರಣೆಯ ಪೂರ್ವಭಾವಿ ಸಭೆಯು ನಗರದ ಬೆಂಗಳೂರಿನ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ (DK Suresh), ನಮಗೆ ಇಷ್ಟ ಇದೆಯೋ ಇಲ್ವೋ ಇದನ್ನು ಸಿದ್ದರಾಮೋತ್ಸವ ಎನ್ನುತ್ತಿದ್ದಾರೆ. ಇದನ್ನು ಅಮೃತ ಮಹೋತ್ಸವ ಸಮಿತಿ ಅಲ್ಲಗೆಳೆಯಬಾರದು. ನೀವು ಇದನ್ನು ಸಿದ್ದರಾಮೋತ್ಸವ ಎಂಬುದನ್ನು ಒಪ್ಪಿಕೊಳ್ಳಬೇಕು. ಜೊತೆಗೆ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವವನ್ನೂ ಆಚರಿಸಬೇಕು. ಯಾರದ್ದೋ ಅಂಜಿಕೆಯಿಂದ ಸಿದ್ದರಾಮೋತ್ಸವವನ್ನು ಅಲ್ಲಗೆಳಯಬೇಡಿ. ಇಲ್ಲಿ ಯಾರನ್ನೂ ವೈಭವೀಕರಿಸಲಾಗುತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯನವರ ಸಾಧನೆ ಬಗ್ಗೆ ಎಲ್ಲರೂ ಮಾತನಾಡೋಣ. ಇಂದು 75 ವರ್ಷ ಬದುಕುವುದೇ ಕಷ್ಟ. ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಇಷ್ಟ ಇದೆಯೋ ಇಲ್ವೋ ಬೇರೆಯವರು ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ತೊಂದರೆ ಆಗದಂತೆ ಕಾರ್ಯಕ್ರಮ ಮಾಡಬೇಕು. ಸಮಾಜಕ್ಕೆ ಬೇರೆ ಸಂದೇಶ ಹೋಗದಂತೆ ಆಚರಿಸಬೇಕು ಎಂದು ಸಲಹೆ ಮಾಡಿದರು. ಸಂಸದ ಡಿ.ಕೆ.ಸುರೇಶ್ ಅವರ ನೇರ ಮಾತಿಗೆ ಹಲವು ಕಾಂಗ್ರೆಸ್ ನಾಯಕರು ತಬ್ಬಿಬ್ಬಾದರು.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಇದನ್ನು ನಾವ್ಯಾರೂ ಸಿದ್ದರಾಮೋತ್ಸವ ಎಂದು ಹೇಳಿಲ್ಲ. ಬಿಜೆಪಿಯವರು ಕೀಳುಮಟ್ಟದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ವ್ಯಕ್ತಿ ವೈಭವ ಅಲ್ಲ. ಆ ರೀತಿ ಮಾತನಾಡುವವರಿಗೆ ಸಂಸ್ಕೃತಿ ಅಥವಾ ಸಂಸ್ಕಾರ ಇರುವುದಿಲ್ಲ. ಇದು ಸಿದ್ದರಾಮೋತ್ಸವ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯರನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದೇವೆ ಎಂದುಕೊಳ್ಳಬಾರದು. ಪಕ್ಷದ ಆಶಯ ಮುಂದಿಟ್ಟುಕೊಳ್ಳಬೇಕು ಎಂದು ಹೇಳಲು ಬಯಸುತ್ತೇನೆ. ಈ ಕಾರ್ಯಕ್ರಮವು ಸ್ವತಃ ಸಿದ್ದರಾಮಯ್ಯನವರಿಗೆ ಇಷ್ಟವಿಲ್ಲ. ಆದರೂ ಸಿದ್ದರಾಮಯ್ಯನವರ ಬೆಂಬಲಿಗರು ಕಾರ್ಯಕ್ರಮ ಮಾಡುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವನ್ನು ಸಿದ್ದರಾಮಯ್ಯ ಮೈಗೂಡಿಸಿಕೊಂಡಿದ್ದಾರೆ. ದೇವರಾಜ ಅರಸು ಅವರಂಥದ್ದೇ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ. ಕಾಂಗ್ರೆಸ್ ಹೊರಟು ಹೋಗಿದೆ. ಅಧಿಕಾರಕ್ಕೆ ಬರುವುದಿಲ್ಲ ಎಂಬ ಭಾವನೆ ಬೇಡ ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ರಿಂದ ಯಡಿಯೂರಪ್ಪ ಭೇಟಿ
ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕುಶಲ ವಿಚಾರಿಸಿದರು. ನಂತರ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ರಾಜಕೀಯಕ್ಕೂ ಈ ಭೇಟಿಗೂ ಏನೂ ಸಂಬಂಧ ಇಲ್ಲ. ಕೆಲವು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ. ಸಮುದಾಯ ಮತ್ತು ರಾಜಕೀಯ ಎರಡೂ ರೀತಿಯ ಚರ್ಚೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಇಚ್ಛೆ ಮೊದಲಿನಿಂದಲೂ ಯಡಿಯೂರಪ್ಪ ಅವರಿಗೆ ಇತ್ತು. ಕೆಲ ತಾಂತ್ರಿಕ ಕಾರಣಗಳಿಂದ 2ಎ ಮೀಸಲಾತಿ ಕೊಡಲು ಆಗಿರಲಿಲ್ಲ. ಬೊಮ್ಮಾಯಿಯವರ ಅವಧಿಯಲ್ಲಿ ಕೊಡುವ ಭರವಸೆ ಇದೆ ಎಂದು ವಿವರಿಸಿದರು.
ಸಿದ್ದರಾಮೋತ್ಸವ ಜೊತೆಗೆ ಶಿವಕುಮಾರೋತ್ಸವ ಮಾಡಬೇಕು ಎನ್ನುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಶಿವಕುಮಾರೋತ್ಸವ ಮಾಡಲು ಪತ್ರ ಬರೆದ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮೋತ್ಸವದ ಸಮಿತಿಯಲ್ಲಿ ನಾನೂ ಕೂಡ ಇದ್ದೇನೆ. ಉತ್ಸವ ಮಾಡಿ ಎಂದು ಸಿದ್ದರಾಮಯ್ಯ ಯಾರಿಗೂ ಹೇಳಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.