ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರ, ಕಾಂಗ್ರೆಸ್​ಗೆ ನಿರಾಸೆ?

| Updated By: ರಮೇಶ್ ಬಿ. ಜವಳಗೇರಾ

Updated on: Nov 13, 2023 | 9:58 AM

ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಜೆಡಿಎಸ್‌ನಿಂದ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ನಿರತವಾಗಿದೆ. ಇನ್ನು ಕೆಲ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ತಮ್ಮ ವರಿಷ್ಠರ ನಡೆಯಿಂದ ಬೇಸತ್ತು ಸ್ವತಃ ತಾವೇ ಕಾಂಗ್ರೆಸ್​ ಸೇರಿದ್ದಾರೆ. ಇನ್ನು ಕೆಲವರು ಕೈ ಹಿಡಿಯಲು ಚಿಂತನೆ ನಡೆಸಿದ್ದಾರೆ. ಆದ್ರೆ, ಕೆಲ ನಾಯಕರು ಇದೀಗ ವರಸೆ ಬದಲಿಸಿದ್ದು, ಪಕ್ಷದಿಂದ ಹೊರಹೋಗಲು ತೀರ್ಮಾನಿಸಿದ್ದ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದಕ್ಕೆ ಕಾರಣ ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದಕ್ಕೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರ, ಕಾಂಗ್ರೆಸ್​ಗೆ ನಿರಾಸೆ?
ಬಿವೈ ವಿಜಯೇಂದ್ರ
Follow us on

ಬೆಂಗಳೂರು, (ನವೆಂಬರ್ 13): ಒಂದು ಕಡೆ ವಿಜಯೇಂದ್ರಗೆ (by vijayendra) ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ಸಂಭ್ರಮ ಮುಗಿಲು ಮುಟ್ಟಿದೆ. ಆದ್ರೆ, ಅದೇ ಸಂಭ್ರಮದ ಮನೆಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಒಳಗೊಳಗೆ ಕೆಲ ನಾಯಕರು ಮುನಿಸಿಕೊಂಡಿದ್ದು, ಪರೋಕ್ಷವಾಗಿ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ನೇರವಾಗಿ ಹೈಕಮಾಂಡ್ ನಿರ್ಧಾರವನ್ನ ಪ್ರಶ್ನಿಸಲಾಗದೇ ತೊಳಲಾಡುತ್ತಿದ್ದಾರೆ. ಮತ್ತೊಂದೆಡೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಹಿನ್ನೆಲೆ ಬಿಜೆಪಿಯಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದ್ದು, ಪಕ್ಷದಿಂದ ಹೊರಹೋಗಲು ತೀರ್ಮಾನಿಸಿದ್ದ ಕೆಲ ನಾಯಕರು ಇದೀಗ ಹಿಂದೇಟು ಹಾಕಿದ್ದಾರೆ.

ಹೌದು…ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಪಕ್ಷದಲ್ಲಿ ಯಡಿಯೂರಪ್ಪ ಕೈ ಮೇಲಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನೇ ನಂಬಿ ಬಂದಿದ್ದ ಆಪರೇಷನ್ ಶಾಸಕರ ಲೆಕ್ಕಾಚಾರವೇ ಬದಲಾಗಿದೆ. ಕಾಂಗ್ರೆಸ್ ಕದ ತಟ್ಟುತ್ತಿದ್ದ ಶಾಸಕ ಎಸ್​ಟಿ ಸೋಮಶೇಖರ್ ಸಹ ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಗೊಂದಲದಲ್ಲಿ ಸಿಲುಕಿದ್ದಾರೆ. ಏಕಾಏಕಿ ನಿರ್ಧಾರ ಮಾಡುವ ಬದಲು ಕಾದು ನೋಡುವ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಮೊದಲ ಸವಾಲು ಎದುರಿಸಲು ನೂತನ ಅಧ್ಯಕ್ಷ ವಿಜಯೇಂದ್ರ ಮೆಗಾ ಪ್ಲ್ಯಾನ್: ಏನದು?

ಇನ್ನು ವಿಜಯೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿತ್ತಿದ್ದಂತೆಯೇ ಯಡಿಯೂರಪ್ಪ ನಿವಾಸಕ್ಕೆ ಮುನಿರತ್ನ ಹಾಗೂ ಬೈರತಿ ಬಸವರಾಜ್ ಭೇಟಿ ಮಾತುಕತೆ ನಡೆಸಿದ್ದಾರೆ. ಇನ್ನು ಯಡಿಯೂರಪ್ಪ ಮಾತಿನ ಮೇಲೆ ನಿಂತಿದ್ದೇನೆ. ಯಡಿಯೂರಪ್ಪ ಒಂದು ಮಾತು ಹೇಳಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದ ಸೋಮಶೇಖರ್ ಸಹ ಪಕ್ಷ ಬಿಡಲು ಹಿಂದೇಟು ಹಾಕುವಂತೆ ಮಾಡಿದೆ. ಮತ್ತೊಂದೆಡೆ ಅವರು ಬರುತ್ತಾರೆ, ಇವರು ಬರುತ್ತಾರೆ ಎಂದು ಕಾದು ಕುಳಿತುಕೊಂಡಿರುವ ಕಾಂಗ್ರೆಸ್​ಗೆ ಕೊಂಚ ನಿರಾಸೆಯಾಗಿದೆ.

ಇನ್ನು ವಿಧಾನಸಭಾ ಚುನಾವಣೆ ವೇಳೆ ಪಕ್ಷದ ವಿರುದ್ದ ಬಂಡಾಯ ಎದ್ದಿದ್ದ ಅರುಣ್ ಕುಮಾರ್ ಪುತ್ತಿಲ, ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಶೀಘ್ರವೇ ಮತ್ತೆ ಬಿಜೆಪಿಗೆ ಮರು ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಈ ಬಾರಿ ಅವರು ದಕ್ಷಿಣ ಕನ್ನಡ ಲೋಕಸಭಾದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್​ ಸಿಗುವುದು ಖಚಿತವಾದರೆ ಮಾತ್ರ ವಾಪಸ್ ಪಕ್ಷಕ್ಕೆ ಬರಲಿದ್ದಾರೆ. ಒಂದು ವೇಳೆ ಈ ಬಾರಿಯೂ ಸಹ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್​ ಅವರಿಗೆ ಟಿಕೆಟ್​ ಎನ್ನುವುದಾದರೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ವಾಪಸ್ ಹೋಗುವ ಸಾಧ್ಯತೆಗಳು ಕಡಿಮೆ ಇವೆ.

ಬಿಜೆಪಿಯಲ್ಲಿ ಯಡಿಯೂರಪ್ಪನವರ ಕಥೆ ಮುಗಿಯಿತು, ಇನ್ನು ನಮ್ಮನ್ನು ಯಾರು ಕೇಳುವುದಿಲ್ಲ ಎಂದು ತಮ್ಮ ಮುಂದಿನ  ರಾಜಕೀಯ  ಹಲವು ನಾಯಕರು ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ.  ಅದರಲ್ಲೂ ಪ್ರಮುಖವಾಗಿ ಲಿಂಗಾಯತ ಸಮುದಾಯದ ಬಿಜೆಪಿ ನಾಯಕರು ಕಾಂಗ್ರೆಸ್​ ಸೇರುವ ಸರದಿಯಲ್ಲಿ ನಿಂತಿದ್ದಾರೆ. ಆದ್ರೆ, ಇದೀಗ ಯಡಿಯೂರಪ್ಪ ಪುತ್ರನ ಕೈಗೆ ಪವರ್ ಸಿಕ್ಕಿದ್ದು, ಪಕ್ಷ ತೊರೆಯುವ ತೀರ್ಮಾನ ಮಾಡಿರುವ ಬಿಜೆಪಿ ನಾಯಕರು ಇದೀಗ ಹಲವು ಲೆಕ್ಕಾಚಾರ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ವಿಧಾನಸಭೆಯಲ್ಲಿ ತನ್ನ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆ ವಿಳಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರೇ ಹೈಕಮಾಂಡ್​ ಮೇಲೆ ಅಸಮಾಧಾನಗೊಂಡಿದ್ದರು. ಇದೀಗ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಬಿಜೆಪಿಯಲ್ಲಿ ನಾಯಕರ ಹೊಸ ಲೆಕ್ಕಾಚಾರ ಶುರುವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:51 am, Mon, 13 November 23