ಲಿಂಗಾಯತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ

ಲಿಂಗಾಯತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಮೇಲೆ ಸಿದ್ದರಾಮಯ್ಯ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ವಜಾ ಮಾಡಿದೆ.

ಲಿಂಗಾಯತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ
ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on:Jun 13, 2023 | 5:36 PM

ಬೆಂಗಳೂರು: ಲಿಂಗಾಯತರ(lingayat community) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆ(Defamation case) ಅರ್ಜಿ ವಜಾಗೊಂಡಿದೆ. ಶಂಕರ್ ಶೇಟ್ ಎಂಬುವವರು ಸಲ್ಲಿಸಿದ ಖಾಸಗಿ ದೂರನ್ನು ವಜಾ ಮಾಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್(special court) ವಜಾ ಮಾಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಪ್ರೀತ್.ಜೆ ಅವರು ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ವಜಾಗೊಳಿಸಿ ಇಂದು (ಜೂನ್ 13) ಆದೇಶ ಹೊರಡಿಸಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯನವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ: ಲಿಂಗಾಯತ ಸಿಎಂ ಹೇಳಿಕೆ: ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ರಾಜ್ಯದ ಲಿಂಗಾಯತ ಸಿಎಂಗಳು ಭ್ರಷ್ಟರು ಎಂದು ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು.ಇದನ್ನು ಬಿಜೆಪಿ ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅಲ್ಲದೇ ಈ ಕುರಿತು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.

ಮಾತ್ರವಲ್ಲದೇ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕದಿಂದ ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಲಿಂಗಾಯತ ಯುವ ವೇದಿಕೆ ಮುಖಂಡ ಬಸವರಾಜ್​ ಎನ್ನುವವರು ದೂರು ದಾಖಲಿಸಿದ್ದರು.

ಅಂದು ಸಿದ್ದರಾಮಯ್ಯ ಹೇಳಿದ್ದೇನು?

ಕಳೆದ ತಿಂಗಳೂ ನಡೆದಿದ್ದ ವಿಧಾನಸಭೆ ಚುನಾವಣೆ ವೇಳೆ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವರುಣಾದಲ್ಲಿ (Varuna) ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಈಗಾಗಲೇ ಲಿಂಗಾಯತ ಚೀಫ್ ಮಿನಿಸ್ಟರ್ ಇದ್ದಾರಲ್ಲಾ ಅವ್ರೇ ಭ್ರಷ್ಟಾಚಾರ ಮಾಡಿ ರಾಜ್ಯ ಹಾಳು ಮಾಡಿರೋದು ಎಂದು ಹೇಳಿಕೆ ನೀಡಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಹೇಳಿಕೆ ವಿವಾದಕ್ಕೆ ಕಾರಣವಾಗುತ್ತೆ ಎಂಬುದನ್ನು ಅರಿತ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದರು. ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿದ್ದೇನೆಂದು ತೋರಿಸಲು ಮಾಡುತ್ತಿರುವ ಪ್ರಯತ್ನ ರಾಜಕೀಯ ದುರುದ್ದೇಶದಿಂದ ಕೂಡಿದ್ದು. ಆ ರೀತಿ ನಾನು ಹೇಳಿಯೇ ಇಲ್ಲ ಎಂದಿದ್ದರು.

Published On - 5:19 pm, Tue, 13 June 23