ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸಲು ಧಾರವಾಡದಲ್ಲಿ 162 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ: ಪ್ರಲ್ಹಾದ ಜೋಶಿ ಪರಿಶೀಲನೆ

|

Updated on: Jun 21, 2023 | 8:13 PM

ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸುವ ನಿಟ್ಟಿನಲ್ಲಿ ಧಾರವಾಡದ ಹೊರವಲಯದಲ್ಲಿರುವ ಲೋಹಿಯಾ ನಗರದಲ್ಲಿ 162 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾ ಸಂಕೀರ್ಣವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂದು ಪರಿಶೀಲನೆ ಮಾಡಿದರು.

ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸಲು ಧಾರವಾಡದಲ್ಲಿ 162 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ: ಪ್ರಲ್ಹಾದ ಜೋಶಿ ಪರಿಶೀಲನೆ
ಕ್ರೀಡಾ ಸಂಕೀರ್ಣ ಪರಿಶೀಲನೆ ಮಾಡಿದ ಪ್ರಲ್ಹಾದ ಜೋಶಿ
Follow us on

ಧಾರವಾಡ: ಭವಿಷ್ಯದ ಕ್ರೀಡಾಪಟುಗಳನ್ನು ರೂಪಿಸುವ ನಿಟ್ಟಿನಲ್ಲಿ ಧಾರವಾಡದ ಹೊರವಲಯದಲ್ಲಿರುವ ಲೋಹಿಯಾ ನಗರದಲ್ಲಿ 162 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾ ಸಂಕೀರ್ಣವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಇಂದು ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮುಂಬರುವ ವರ್ಷಗಳಲ್ಲಿ ಕ್ರೀಡಾ ಗ್ರಾಮವನ್ನೇ ರೂಪಿಸುವ ಕನಸಿನೊಂದಿಗೆ ಮೊದಲ ಹಂತವಾಗಿ ಈ ಕ್ರೀಡಾ ಸಂಕೀರ್ಣದ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕ್ರೀಡೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇಲ್ಲಿಯೇ ಶಾಲಾ ವಿದ್ಯಾಭ್ಯಾಸದೊಂದಿಗೆ ತಮ್ಮ ಆಯ್ಕೆಯ ಕ್ರೀಡೆಯಲ್ಲಿ ತರಬೇತಿ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಈ ಸಂಕೀರ್ಣದ 50% ಕಾಮಗಾರಿ ಮುಕ್ತಾಯಗೊಂಡಿದ್ದು ಇದೇ ಡಿಸೆಂಬರ್ ಅಂತ್ಯದ ವೇಳೆಗೆ ಹೊರಾಂಗಣ ಆಟದ ಸೌಲಭ್ಯಗಳು ಲಭ್ಯವಾಗಲಿವೆ ಹಾಗೂ ಒಳಾಂಗಣ ಆಟದ ಸೌಲಭ್ಯಗಳು ಜೂನ್ ವೇಳೆಗೆ ಸಿದ್ಧವಾಗಲಿವೆ. ಕುಸ್ತಿ, ವಾಲಿಬಾಲ್, ಹಾಕಿ ಸೇರಿದಂತೆ 24 ಬಗೆಯ ಕ್ರೀಡೆಗಳಿಗೆ ಅವಶ್ಯವಿರುವ ಸೌಲಭ್ಯಗಳು ಇಲ್ಲಿ ಸಿದ್ಧವಾಗುತ್ತಿವೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದ್ದರೆ ದೂರು ನೀಡಿ: ಪ್ರಲ್ಹಾದ್ ಜೋಶಿ

6.75 ಎಕರೆ ಜಾಗೆಯಲ್ಲಿ ಹೊರಾಂಗಣ ಕ್ರೀಡೆಗಳ ಸೌಲಭ್ಯಗಳು ಹಾಗೂ 2.75 ಜಾಗೆಯಲ್ಲಿ ಕಟ್ಟಡಗಳು ತಲೆ ಎತ್ತಲಿವೆ. ಒಟ್ಟು 15 ಎಕರೆ ಜಮೀನು ಈ ಸಂಕೀರ್ಣದ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ 9 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಖೇಲೋ ಇಂಡಿಯಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಪ್ರೇರಣೆಯಿಂದ ವಿದ್ಯಾ ಕಾಶಿ ಧಾರವಾಡದಲ್ಲಿ, ಕ್ರೀಡಾಪಟುಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅವಳಿ ನಗರದಲ್ಲಿ ಕ್ರೀಡಾಸಕ್ತರಿಗೆ ಇದೊಂದು ವಿಶೇಷ ಸ್ಥಳವಾಗಿ ಹೊರಹೊಮ್ಮಲಿದೆ ಎಂದರು‌.

ಇದನ್ನೂ ಓದಿ: ಹುಬ್ಬಳ್ಳಿ- ಧಾರವಾಡ ನೂತನ ಮೇಯರ್, ಉಪಮೇಯರ್ ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ

ಇಲ್ಲಿ ತರಬೇತಿ ಪಡೆಯುವ ಮಕ್ಕಳು ರಾಜ್ಯ ಹಾಗೂ ರಾಷ್ಟ್ರದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುತ್ತಾರೆ ಎಂಬ ವಿಶ್ವಾಸವಿದೆ ಹಾಗೂ ಅಂತಹ ಸುಂದರ ದಿನಗಳಿಗಾಗಿ ನಾನು ಮುನ್ನೋಡುತ್ತಿದ್ದೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಆಶಾಭಾವ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಹು-ಧಾ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ವೀಣಾ ಬರದ್ವಾಡ, ಉಪಮಹಾಪೌರರಾದ ಸತೀಶ್ ಹಾನಗಲ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:43 pm, Wed, 21 June 23