ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?

|

Updated on: May 29, 2024 | 8:27 AM

ಅಂದಿನ ಅನಕ್ಷರಸ್ಥ ಭಾರತದಲ್ಲಿ ದುರ್ಬಲ ನಾಗರಿಕರಿಗೆ ಪೇಪರ್ ಬ್ಯಾಲೆಟ್ ವ್ಯವಸ್ಥೆಯಲ್ಲಿ ಮತ ಚಲಾಯಿಸುವುದಕ್ಕೆ ಸಾಕಷ್ಟು ಅಡ್ಡಿ ಆತಂಕಗಳಿದ್ದವು. ಇದು ಬಲಾಢ್ಯ ರಾಜಕಾರಣಿಗಳಿಗೆ ಅನುಕೂಲಸಿಂಧು ಆಗುತ್ತಿತ್ತು. ದೇಶದಿಂದ ಕಾಲ್ತೆಗೆದಿದ್ದ ಬ್ರಿಟೀಷರು ಸೇರಿದಂತೆ ಮುಂದುವರಿದ ದೇಶಗಳ ನಾಯಕರು ಅಂಬೆಗಾಲಿಡುತ್ತಿದ್ದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ ಮಾಡತೊಗಿದ್ದರು. ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಪ್ರಜಾಪ್ರಭುತ್ವ/ ಮತದಾನ ಎಂಬುದು ಭಾರತಕ್ಕೆ ಹೇಳಿಮಾಡಿಸಿದ್ದಲ್ಲ ಎಂದು ವ್ಯಂಗ್ಯವಾಗತೊಡಗಿದ್ದರು. ಆದರೆ ಹರಿದು ಹಂಚಿಕೆಯಾಗಿದ್ದ ಮತಪತ್ರ ಚುನಾವಣೆಗೆ ಗುಡ್​​ಬೈ ಹೇಳುವ ಕಾಲ ಬಂದಿತ್ತು.

ಆರಂಭದಲ್ಲಿ ಅನುಮಾನ! ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ: ಏನಿದರ ಬೆಳವಣಿಗೆಯ ರಹಸ್ಯ?
ಕಾಲಾಂತರದಲ್ಲಿ ಗಟ್ಟಿಯಾಗಿ ನೆಲೆಯೂರಿದ EVMಗಳ ಯಶಸ್ಸಿನ ಕತೆ ಇಲ್ಲಿದೆ
Follow us on

ಆ ಕಾಲಕ್ಕೆ ಮಹಾ ಚುನಾವಣೆಗಳು ನಡೆಯುತ್ತಿದ್ದುದ್ದೇ ಹಾಗೆ. ದುಡ್ಡು ಮತ್ತು ತೋಳಿನ ಶಕ್ತಿಯನ್ನೇ ಅಸ್ತ್ರವಾಗಿಸಿಕೊಂಡಿದ್ದ ಬಲಾಢ್ಯ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುತ್ತಿದ್ದರು. ಭಾರತದ ರಾಜಕೀಯದಲ್ಲಿ Money and Muscle Power ಪಾತ್ರ ಮಿತಿಮೀರಿತ್ತು. ವಾಸ್ತವದಲ್ಲಿ ಪ್ರಜಾಪ್ರಭುತ್ವದ ಮುಖ್ಯ ಆಶಯಕ್ಕೆ ಎಳ್ಳು ನೀರು ಬಿಡಲಾಗಿತ್ತು. ನಿಜವಾದ ಕಾಳಜಿಯೊಂದಿಗೆ ಜನ ಸೇವೆ ಮಾಡುವುದು ಗಗನಕುಸುಮವಾಗಿತ್ತು. ದುಡ್ಡಿನ ಆಮಿಷವೊಡ್ಡಿ ಮತ ಹಾಕಿಸಿಕೊಳ್ಳಲಾಗುತ್ತಿತ್ತು. ಇಲ್ಲಾಂದ್ರೆ ತೋಳಿನ ಶಕ್ತಿ ಬಳಸಿ ಮತದಾರರನ್ನು ಹೆದರಿಸಿ, ಬೆದರಿಸಿ ಓಲೈಕೆ ಮಾಡಲಾಗುತ್ತಿತ್ತು. ಆದರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ. ಬಲಿಷ್ಟ ದುಷ್ಟ ಜನನಾಯಕರು ಮತಗಟ್ಟೆಯೊಳಕ್ಕೆ ನುಗ್ಗಿ ಮತಪತ್ರಗಳನ್ನು ವಶಪಡಿಸಿಕೊಂಡು ತಮ್ಮ ಪಟಾಲಂಗಳ ಮೂಲಕ ತಮ್ಮ ಗುರ್ತಿಗೆ ಮತ ಒತ್ತಿಸಿಕೊಳ್ಳುತ್ತಿದ್ದರು. ಇದಿಷ್ಟೂ ರಾಜಕಾರಣಿಗಳ ಮುಖವಾಡವಾಗಿದ್ದರೆ ಇದಕ್ಕೆ ಮತ್ತೊಂದು ಆಯಾಮವೂ ಸೇರಿಕೊಂಡಿತ್ತು. ಅದು ತಾಂತ್ರಿಕವಾಗಿ ಎದುರಾಗುತ್ತಿದ್ದ ಸಮಸ್ಯೆಗಳು. ಅಂದರೆ ಮತಪತ್ರಗಳ ಪಾಲನೆ. ಬೃಹತ್​ ಭಾರತದಲ್ಲಿ ಅದು ಹೇಳಿಕೇಳಿ ಕಾಗದದ ಮತಪತ್ರ ಪದ್ಧತಿ (paper ballot system) ಇದ್ದ ಕಾಲ. ಅವುಗಳ ಮುದ್ರಣ, ರಕ್ಷಣೆ, ಮತ ಪತ್ರಗಳ ಸಾಗಣೆ, ವೆಚ್ಚ ಕೊನೆಗೆ ಮತ ಎಣಿಕೆ ಇವೇ ಮುಂತಾದ ಬೃಹತ್​​ ಸಮಸ್ಯೆಗಳೂ ತಾಂಡವವಾಗತೊಡಗಿದ್ದವು. ಸರಿಯಾಗಿ ಅದೇ ಕಾಲಕ್ಕೆ ಪ್ರಜ್ಞಾವಂತ ಮತದಾರ ಜಾಗೃತನಾಗತೊಡಗಿದ್ದ. ಚುನಾವಣೆ/ ಮತದಾನ ಎಂಬ ಈ ಬೃಹತ್​​ ನಾಟಕದಲ್ಲಿ ಹೊಸತನ್ನು ಬಯಸತೊಡಗಿದ್ದ. ಹೇಗಾದರೂ ಮಾಡಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ದುಡ್ಡು ಮತ್ತು ತೋಳಿನ ಶಕ್ತಿ ಕುತಂತ್ರವನ್ನು ಹಿಮ್ಮೆಟ್ಟಿಸಲು ಹಾತೊರೆಯುತ್ತಿದ್ದ. ಇಲ್ಲಿ ಮತ್ತೂ ಒಂದು ಅಹಿತಕರ ವಿದ್ಯಮಾನ ನಡೆಯುತ್ತಿತ್ತು. ಬಲಾಢ್ಯ ರಾಜಕಾರಣಿಗಳ ಕುತಂತ್ರದಿಂದ ಬೇಸತ್ತು ಹೆಚ್ಚಾಗಿ ಜನ ಮತಗಟ್ಟೆಗಳತ್ತ ಸುಳಿಯುತ್ತಿರಲಿಲ್ಲ. ಅಂದರೆ ಮತದಾನ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿತ್ತು. ಮತ್ತು ಮತದಾರರ ಅನುಪಸ್ಥಿತಿಯಿಂದಾಗಿ ಬಲಾಢ್ಯರು ತಮ್ಮ ಹೆಸರಿಗೆ ಮತ ಬೀಳುವಂತೆ ನೋಡಿಕೊಳ್ಳುತ್ತಿದ್ದರು. ಒಟ್ಟಾರೆಯಾಗಿ ಸ್ವಾತಂತ್ರ್ಯ ಬಂದಾಗಿನಿಂದ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಮತದಾನವೆಂಬುದು ಅಪವಿತ್ರವಾಗತೊಡಗಿತ್ತು.

ದುಡ್ಡು ಮತ್ತು ತೋಳಿನ ಶಕ್ತಿ ಕುತಂತ್ರವನ್ನು ಹಿಮ್ಮೆಟ್ಟಿಸಿದ ವೋಟಿಂಗ್​ ಮಷಿನ್​​​ಗಳು:

ಅಂದಿನ ಅನಕ್ಷರಸ್ಥ ಭಾರತದಲ್ಲಿ ದುರ್ಬಲ ನಾಗರಿಕರಿಗೆ (ಅನಕ್ಷರಸ್ಥರು, ಮಹಿಳೆಯರು, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳು, ಅಂಗವಿಕಲರು ಮತ್ತು ವೃದ್ಧರು) ಪೇಪರ್ ಬ್ಯಾಲೆಟ್ ವ್ಯವಸ್ಥೆಯ ಅಡಿ ತಮ್ಮ ಮತ ಚಲಾಯಿಸುವುದಕ್ಕೆ ಅಡ್ಡಿ ಆತಂಕಗಳು ಸಾಕಷ್ಟಿದ್ದವು. ಅವಿದ್ಯಾವಂತರೇ ಹೆಚ್ಚಾಗಿದ್ದ ದೇಶದಲ್ಲಿ, ಮತಗಳ ಸಿಂಧುತ್ವವನ್ನು ನಿರ್ಧರಿಸಲು ಪೇಪರ್ ಬ್ಯಾಲೆಟ್ ಸಹಿ ಅಥವಾ ಹೆಬ್ಬೆರಳಿನ ಗುರುತುಗಳ ವ್ಯಾಖ್ಯಾನವನ್ನು ಚುನಾವಣಾ ಅಧಿಕಾರಿಗಳ ವಿವೇಚನೆಗೆ ಬಿಡಲಾಗುತ್ತಿತ್ತು. ಇದು ಬಲಾಢ್ಯ ರಾಜಕಾರಣಿಗಳಿಗೆ ಅನುಕೂಲಸಿಂಧು ಆಗುತ್ತಿತ್ತು. ದೇಶದಿಂದ ಕಾಲ್ತೆಗೆದಿದ್ದ ಬ್ರಿಟೀಷರು ಸೇರಿದಂತೆ ಮುಂದುವರಿದ ದೇಶಗಳ ನಾಯಕರು ಅಂಬೆಗಾಲಿಡುತ್ತಿದ್ದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಅವಹೇಳನ ಮಾಡತೊಗಿದ್ದರು. ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಪ್ರಜಾಪ್ರಭುತ್ವ/ ಮತದಾನ ಎಂಬುದು ಭಾರತಕ್ಕೆ ಹೇಳಿಮಾಡಿಸಿದ್ದಲ್ಲ ಎಂದು ವ್ಯಂಗ್ಯವಾಗತೊಡಗಿದ್ದರು. ಆದರೆ ಭಾರತ ಪ್ರಜಾಪ್ರಭುತ್ವದ ಹಾದಿಯಲ್ಲಿ ಸದೃಢ ಹೆಜ್ಜೆಗಳನ್ನು ಹಾಕತೊಡಗಿತ್ತು.

ಹರಿದು ಹಂಚಿಕೆಯಾಗಿದ್ದ ಮತಪತ್ರ ಚುನಾವಣಾ ಯಂತ್ರಕ್ಕೆ ಗುಡ್​​ಬೈ ಹೇಳುವ ಕಾಲ ಬಂದಿತ್ತು. 1970 ರ ವೇಳೆಗೆ, ಎರಡು ಮೂರು ದಶಕಗಳಲ್ಲಿ ಭಾರತ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಕಿತ ಹಾಕತೊಡಗಿತ್ತು. ಪ್ರಜಾಪ್ರಭುತ್ವದ ಅಂಗಳದಲ್ಲಿ ವಿದ್ಯುನ್ಮಾನ ಮತ ಯಂತ್ರಗಳು ( Electronic voting machines) ಮೆಲ್ಲಗೆ ಕಾಲೂರತೊಡಗಿತ್ತು. ಕೃತ್ರಿಮ ರಾಜಕಾರಣಿಗಳು ಹಿಂಬಾಗಿಲಿಂದ ಓಡಲು ಅನುವಾಗತೊಡಗಿದ್ದರು. ಆದರೆ EVM ಮತದಾನ ಅಂದುಕೊಂಡಷ್ಟು ಸರಳವಾಗಿರಲಿಲ್ಲ. ಚುನಾವಣಾ ಅಕ್ರಮಕ್ಕೆ ಒಗ್ಗಿಹೋಗಿದ್ದ ಬಲಾಢ್ಯ ರಾಜಕಾರಣಿಗಳು EVM ಗಳಲ್ಲೂ ಹುಳುಕು ಹುಡುಕತೊಡಗಿದರು. ಇದೇ ದುಷ್ಟ ರಾಜಕಾರಣಿಗಳು ಮತ್ತು ಪ್ರಜಾಪ್ರಭುತ್ವದ ವಿರೋಧಿಗಳು ಅದರ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಗೆ ಕಪ್ಪುಮಸಿ ಬಳಿಯತೊಡಗಿದ್ದರು. ಅದರೊಂದಿಗೆ EVM ಮತ ಯಂತ್ರಗಳು ಪ್ರಶ್ನಾರ್ಹವೆನಿಸತೊಡಗಿದವು. ಕುತೂಹಲಕಾರಿ ಸಂಗತಿಯೆಂದರೆ ಇವಿಎಂ ಯಂತ್ರಗಳನ್ನು ನೇರ ಚುನಾವಣೆಗಳಲ್ಲಿ ಬಳಸಲಾಗುತ್ತದೆ. ದೇಶದ ರಾಷ್ಟ್ರಪತಿ ಮತ್ತು ರಾಜ್ಯಸಭಾ ಚುನಾವಣೆಗಳಂತಹ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಯಲ್ಲಿ ಈ ವ್ಯವಸ್ಥೆಯನ್ನು ಬಳಸುವುದಿಲ್ಲ.

EVM ಪ್ರಯೋಗ: ಚೊಚ್ಚಲ ಪ್ರಯತ್ನ ವಿವಾದದ ಗೂಡಾಯಿತು!

ಇನ್ನು, 1982ರಲ್ಲಿ ಕೇರಳದ ಪರವೂರು ಎಂಬ ವಿಧಾನಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನಸೆಳೆಯತೊಡಗಿತು. ಕ್ಷೇತ್ರದ ಚುನಾವಣೆಯಲ್ಲಿ ಮತದಾನಕ್ಕೆ ಹೊಸತನ ತುಂಬುವ ಕಿರುಪ್ರಯತ್ನ ನಡೆಯಿತು. ಮತದಾನ ದಕ್ಷತೆಯಿಂದ ನಡೆಸುವ ಪ್ರಯೋಗ ಕ್ಷೇತ್ರದಲ್ಲಿ ನಡೆಯಿತು. ಅದುವರೆಗೆ ಭಾರತದ ಅಗಾಧಶಕ್ತಿಯ 35 ಕೋಟಿ ಮತದಾರರು ಮತಪತ್ರಗಳ ಮೂಲಕ ತಮ್ಮ ಮತದಾನವನ್ನು ಚಲಾವಣೆ ಮಾಡುತ್ತಿದ್ದರು. ಚುನಾವಣೆ ಎಂಬುದು ದೊಡ್ಡ ಪ್ರಹಸನವಾಗಿ, ಆಯೋಗಕ್ಕೆ ಹರಸಾಹಸವಾಗಿತ್ತು. ಅದುವರೆಗೂ ಪರವೂರು ವಿಧಾನಸಭಾ ಕ್ಷೇತ್ರ ದಕ್ಷ ಮತ್ತು ಶಾಂತಿಯುತ ಮತದಾನಕ್ಕೆ ಹೆಸರುವಾಸಿಯಾಗಿತ್ತು. ಚುನಾವಣಾ ಆಯೋಗಕ್ಕೆ ಆ ಕ್ಷೇತ್ರವನ್ನೇ ತನ್ನ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿತು. ಅದುವರೆಗೂ ಭೂತನರ್ತನ ಮಡುತ್ತಿದ್ದ ಸಾಂಪ್ರದಾಯಿಕ ಮತಪತ್ರ ವ್ಯವಸ್ಥೆಗೆ ತಿಲಾಂಜಲಿಯಿಡುವ ಕೆಲಸ ಶುರುವಾಗಿತ್ತು. 123 ಬೂತ್​​ಗಳ ಪೈಕಿ 50 ಬೂತ್​​ಗಳಲ್ಲಿ EVM ಪ್ರಯೋಗಕ್ಕೆ ಅಂಕಿತ ಹಾಕಲಾಯಿತು.

Also Read: ನೆಲ್ಲೂರು ಮೂಲದ ಹಸು 36 ಕೋಟಿಗೆ ಮಾರಾಟವಾಯ್ತು! ಯಾಕೆ ಗೊತ್ತಾ? ಇಲ್ಲಿದೆ ಪೈಸಾ ವಸೂಲ್ ಕಹಾನಿ

ಆದರೆ ಚೊಚ್ಚಲ ಪ್ರಯತ್ನ ವಿವಾದದ ಗೂಡಾಯಿತು. ಮತದಾರರು EVM ಮೂಲಕ ಅಮೂಲ್ಯ ಮತ ಚಲಾಯಿಸಿ ಸ್ಪಷ್ಟ ತೀರ್ಪನ್ನೇ ನೀಡಿದ್ದರು. ಕೊನೆಗೆ, ಆ ತೀರ್ಪು ಊರ್ಜಿತವಾಗದೇ ಹೋಯಿತು. EVM ಪ್ರಯೋಗ ವಿಫಲವಾಗಿ ಮತಪತ್ರ ಮುಖೇನ ಮರುಮತದಾನ ನಡೆಯಿತು. ಆಗ ಜನ ನೀಡಿದ್ದ ತೀರ್ಪು ಬೇರೆಯದ್ದೇ ಆಯಿತು. ಆದರೆ ಚೊಚ್ಚಲ ಪ್ರಯತ್ನದಲ್ಲಿ ವೈಫಲ್ಯ ಕಂಡರೂ EVM ಪ್ರಯೋಗ ಇಂದು ವಿಶ್ವಾಸಾರ್ಹವಾಗಿ, ಭರವಸೆಯ ಹೆಮ್ಮರವಾಗಿ ಬೆಳೆದುಬಿಟ್ಟಿದೆ. ಹಾಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಾಜು 55 ಲಕ್ಷ EVM ಗಳು ಮತದಾರರಿಗೆ ಊರುಗೋಲಾಗಿ ಪರಿಣಮಿಸಿದೆ. ಇಡೀ ಪ್ರಪಂಚದಲ್ಲಿ ಭಾರತ ಅತ್ಯಂತ ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿದೆ. ಅದರಲ್ಲೂ ಇಂದಿನ ವಿದ್ಯುನ್ಮಾನ ಯುಗದಲ್ಲಿ ಮತದಾನದ ಚಿತ್ರಣವೇ ಬದಲಾಗಿದೆ. ಅಂದು ಅಂಜುಅಳುಕಿನಿಂದ ಮತಗಟ್ಟೆಗೆ ಹೋಗದೆ ಮನೆಗಳಲ್ಲೇ ಉಳಿದಿದ್ದ ಮತದಾರ ಮತಗಟ್ಟೆಗಳತ್ತ ಸಾಗಿ ಮತ ಚಲಾಯಿಸುತ್ತಿದ್ದಾನೆ. ಪ್ರಜಾಪ್ರಭುತ್ವದಲ್ಲಿ ತಾನೇ ಮಹಾಪ್ರಭು ಎಂದು ಮತದಾರ ಬಿಂಬಿತವಾಗತೊಡಗಿದ್ದಾನೆ. ಅಂತಿಮ ನಗು ಮತದಾರನದ್ದೇ ಆಗಿದೆ. 2004 ರಿಂದೀಚೆಗೆ ಐದು ಬಾರಿ ಲೋಕಸಭಾ ಚುನಾವಣೆಗಳಲ್ಲಿ EVM ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಆದರೂ ಒಂದು ವರ್ಗ EVM ಸಾಧನೆಯ ಬಗ್ಗೆ ಕೊಂಕು ತೆಗೆದು ಕುಳಿತಿದೆ. ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಇದೆ. ಸುಪ್ರೀಂಕೋರ್ಟ್​ ಆಗಾಗ್ಗೆ ಅಂತಹವರ ಕಿವಿಹಿಂಡುತ್ತಾ, ತಕ್ಕ ತೀರ್ಪು ನೀಡುತ್ತಾ ಬಂದಿದೆ. ತತ್ಪರಿಣಾಮವಾಗಿ ಆಲ್ಪ ವೆಚ್ಚದಲ್ಲಿ, ಕ್ಷಿಪ್ರಗತಿಯಲ್ಲಿ, ದಕ್ಷ ರೀತಿಯಲ್ಲಿ ವಿಶ್ವಾಸಾರ್ಹ ಮತ ತೀರ್ಪು ನೀಡುತ್ತಾ ಬಂದಿದೆ.

1977ರಲ್ಲಿ ಹೈದರಾಬಾದಿನ ಸರ್ಕಾರಿ ಸಂಸ್ಥೆ Electronics Corporation of India Ltd (ECIL) ಮೊದಲ EVM ಕಲ್ಪನೆಯನ್ನು ಮೂಡಿಸಿತು. ಮುಂದೆ ಚುನಾವಣಾ ಆಯೋಗ 1979ರ ವೇಳೆಗೆ ತುಸು ಅಳುಕಿನಿಂದಲೇ ಅದನ್ನು ಸ್ವಾಗತಿಸಿತು. ಒಂದಷ್ಟು ನ್ಯೂನತೆಗಳನ್ನು ಸರಿಪಡಿಸಿಕೊಂಡು 1982 ರ ಮೇ 19ರಂದು ಅಂದರೆ 42 ವರ್ಷಗಳ ಹಿಂದೆ, ಧೈರ್ಯವಾಗಿ ಅದನ್ನು ಆಯ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಪ್ರಯೋಗ ಸಾದರಪಡಿಸಿತು. ಸಾಕಷ್ಟು ಚರ್ಚೆಗಳು, ಸಮಾಲೋಚನೆಗಳು, ಸಾಧಕ ಬಾಧಕಗಳ ಅಧ್ಯಯನದ ಬಳಿಕ ಚುನಾವಣಾ ಆಯೋಗ ಮತ್ತದೇ ಕೇರಳದ ಪರವೂರು ವಿಧಾನಸಭಾ ಕ್ಷೇತ್ರದಲ್ಲಿ EVM ಪ್ರಯೋಗಕ್ಕೆ ಮುಂದಾಯಿತು. ಈ ಬಗ್ಗೆ ಸಂವಿಧಾನದ 324ನೇ ಪರಿವಿಡಿಯಡಿ ನಿರ್ದೇಶನವನ್ನು ಹೊರಡಿಸಿತು. ಈ ಬಾರಿಯೂ 50 ಪೋಲಿಂಗ್​ ಬೂತ್​​ಗಳಲ್ಲಿ EVM ಮೂಲಕ ಮತದಾನ ನಡೆಸಲು ನಿರ್ಧರಿಸಿತು.

ಆದರೆ ಒಂದಷ್ಟು ರಾಜಕೀಯ ಪ್ರಭುಗಳು EVM ಬಳಕೆಗೆ ಕಾನೂನು ಮಾನ್ಯತೆಯೇ ಇಲ್ಲ ಎಂದು ಸುಪ್ರೀಂಕೋರ್ಟ್​ ಮೆಟ್ಟಿಲೇರಿದರು. ಗಮನಾರ್ಹವೆಂದರೆ ಸುಪ್ರೀಂಕೋರ್ಟ್ ಸಹ EVM ಬಳಕೆಯಲ್ಲಿನ ನ್ಯೂನತೆಗಳು ಅಥವಾ ಪ್ರಯೋಜನಗಳ ಬಗ್ಗೆ ಏನನ್ನೂ ಹೇಳಲಿಲ್ಲ. ಬದಲಿಗೆ EVM ಬಳಕೆಗೆ ಏಕಪಕ್ಷೀಯವಾಗಿ ಚುನಾವಣಾ ಆಯೋಗಕ್ಕೆ ಅಧಿಕಾರ ಇಲ್ಲ ಎಂದು ಹೇಳಿ ಸುಮ್ಮನಾಯಿತು. ಅದರೊಂದಿಗೆ 50 ಬೂತ್​​ಗಳ ಮತದಾನವನ್ನು ಎಣಿಕೆ ಮಾಡದೆ ಉಳಿದ ಮತಗಟ್ಟೆಗಳಲ್ಲಿನ ಮತದಾನವನ್ನು ಪರಿಗಣಿಸಿ, ಫಲಿತಾಂಶ ಹೊರಡಿಸುವಂತೆ ಆದೇಶಿಸಿತು.

ಎಲೆಕ್ಟ್ರಾನಿಕ್ ಮತಯಂತ್ರಗಳು ಭಾರತದ ಪ್ರಜಾಪ್ರಭುತ್ವವನ್ನು ಹೇಗೆ ಸುಧಾರಿಸಿದವು ಗೊತ್ತಾ?

ಈ ಬೆಳವಣಿಗೆಯನ್ನು ಸರಿಯಾಗಿ ಅರ್ಥೈಸಿಕೊಂಡ ಚುನಾವಣಾ ಆಯೋಗ 1988ರ ವೇಳೆಗೆ ಪ್ರಜಾಪ್ರತಿನಿಧಿ ಕಾಯಿದೆಗೆ ಹೊಸ ಸೆಕ್ಷನ್​ ಸೇರ್ಪಡೆಯಾಗುವಂತೆ ನೋಡಿಕೊಂಡಿತು. ಅದರಂತೆ 61A ಸೆಕ್ಷನ್ ಅಡಿ ಚುನಾವಣೆಗಳಲ್ಲಿ EVM ಬಳಕೆ ಮಾಡುವುದಕ್ಕೆ ಆಯೋಗಕ್ಕೆ ಶಕ್ತಿ ತುಂಬಿತು. 1989ರ ಮಾರ್ಚ್​​ 15ರಂದು ಈ ತಿದ್ದುಪಡಿಗೆ ಕಾನೂನುಮಾನ್ಯತೆ ಪ್ರಾಪ್ತಿಯಾಯಿತು. ಆಗ ಬೆಂಗಳೂರಿನಲ್ಲಿರುವ ಬಿಇಎಲ್ (​​Bharat Electronics Ltd -BEL) ಸಂಸ್ಥೆ EVM ಯಂತ್ರದ ಪ್ರಾತ್ಯಕ್ಷಿಕೆ ನೀಡಿತು. ಮುಂದೆ ಹೈದರಾಬಾದಿನ ECIL ಜೊತೆಗೂಡಿ EVM ಯಂತ್ರಗಳ ತಯಾರಿಕೆಯನ್ನು BEL ಸುಪರ್ದಿಗೆ ನೀಡಲಾಯಿತು.

ಅದಾಗುತ್ತಿದ್ದಂತೆ 1990ರಲ್ಲಿ ಕೇಂದ್ರ ಸರ್ಕಾರವು ದಿನೇಶ್ ಗೋಸ್ವಾಮಿ ನೇತೃತ್ವದಲ್ಲಿ​ ಚುನಾವಣಾ ಸುಧಾರಣೆಗಳ ಸಮಿತಿಯನ್ನು ರಚಿಸಿತು. ನಾನಾ ರಾಜಕೀಯ ಪಕ್ಷಗಳನ್ನೂ ಆಮಂತ್ರಿಸಲಾಯಿತು. ತಾಂತ್ರಿಕ ಪರಿಣತರ ಮಾರ್ಗದರ್ಶನದಲ್ಲಿ ಸಮಿತಿಯು EVM ಯಂತ್ರಗಳನ್ನು ಪರೀಕ್ಷಿಸಿತು. EVM ಯಂತ್ರಗಳು ಸಮರ್ಥವಾಗಿ, ಸುರಕ್ಷಿತವಾಗಿ, ಪಾರದರ್ಶಕವಾಗಿದ್ದು ಒಂದಿನಿತೂ ವಿಳಂಬ ಮಾಡದೆ EVM ಯಂತ್ರಗಳ ಬಳಕೆಗೆ ಬಹುಮತದಿಂದ ಸಲಹೆ ನೀಡಿತು. ತನ್ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ನಡೆಯಿತು.

1998ರಲ್ಲಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ EVM ಯಂತ್ರಗಳ ಬಳಕೆ ಬಗ್ಗೆ ಬಹುಮತದ ನಿರ್ಧಾರ ತೆಗೆದುಕೊಳ್ಳಲಾಯಿತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ 16 ಅಸೆಂಬ್ಲಿ ಚುನಾವಣೆಗಳಲ್ಲಿ ಇವುಗಳ ಬಳಕೆಗೆ ಅನುಮೋದನೆ ದೊರೆಯಿತು. ಮುಂದೆ 1999 ರ ವೇಳೆಗೆ 46 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು ಆ ನಂತರ 2000ರ ಫೆಬ್ರವರಿ ವೇಳೆಗೆ ಹರಿಯಾಣದಲ್ಲಿ 45 ಅಸೆಂಬ್ಲಿ ಚುನಾವಣೆಗಳಲ್ಲಿ ಯಂತ್ರಗಳ ಬಳಕೆಗೆ ಮಣೆ ಹಾಕಲಾಯಿತು. ಅಲ್ಲಿಂದಾಚೆಗೆ ಆಯೋಗವು ಎಲ್ಲ ಅಸೆಂಬ್ಲಿ ಚುನಾವಣೆಗಳಲ್ಲಿ ಯಂತ್ರಗಳನ್ನು ಬಳಸತೊಡಗಿತು. ಹಾಗೆಯೇ 2004ರಲ್ಲಿ ಎಲ್ಲ 543 ಲೋಕ ಕ್ಷೇತ್ರಗಳಲ್ಲಿ EVM ಗಳನ್ನು ಧಾರಾಳವಾಗಿ ಬಳಸಲಾಯಿತು.

2001ರಲ್ಲಿ ಮತ್ತು 2006ರ ವೇಳೆಗೆ EVM ಯಂತ್ರಗಳನ್ನು ತಾಂತ್ರಿಕವಾಗಿ ಮತ್ತಷ್ಟು ಅಪ್​ಗ್ರೇಡ್​ ಮಾಡಲಾಯಿತು. 2006 ಕ್ಕೂ ಮುಂಚಿನ ಯಂತ್ರಗಳನ್ನು M1 EVMs ಎಂದು ಕರೆಯಲಾಯಿತು. 2006 ರಿಂದ 2010ರ ನಡುವೆ ತಯಾರಾದ ಯಂತ್ರಗಳನ್ನು M2 EVMs ಎಂದೂ ಮತ್ತು ತಾಜಾ ಆಗಿ 2013 ರಿಂದ ತಯಾರಿಸಲಾದ ಯಂತ್ರಗಳನ್ನು M3 EVMs ಎಂದು ಕರೆಯಲಾಗಿದೆ.

ಈ ಮಧ್ಯೆ 2013ರಲ್ಲಿ 1961ರ ಚುನಾವಣಾ ಕಾನೂನಿನಲ್ಲಿ ಮತ್ತೊಮ್ಮೆ ತಿಡ್ಡುಪಡಿ ತಂದು ಚುನಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸತ್ಯಾಸತ್ಯತೆ ಪರಿಶೀಲನೆಗಾಗಿ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು (Voter Verifiable Paper Audit Trail machines) ಅಳವಡಿಸಲಾಯಿತು. ನಾಗಾಲ್ಯಾಂಡಿನ ನೋಕ್ಸೆನ್ ಅಸೆಂಬ್ಲಿ ಉಪಚುನಾವಣೆಯಲ್ಲಿ VVPAT ಅನ್ನು ಮೊದಲ ಬಾರಿಗೆ ಬಳಸಲಾಯಿತು.

ಒಟ್ನಲ್ಲಿ ತಂತ್ರಜ್ಞಾನದಲ್ಲಿನ ನಡೆಯುತ್ತಿರುವ ಕ್ಷಿಪ್ರ ಆವಿಷ್ಕಾರಗಳು ಕಳೆದ ಎರಡು ದಶಕಗಳಲ್ಲಿ ಪ್ರಜಾಪ್ರಭುತ್ವಕ್ಕೆ ಸ್ಪಷ್ಟ ದಿಕ್ಕು-ವೇಗವನ್ನು ನೀಡಿದೆ. ಡಿಜಿಟಲ್ ತಂತ್ರಜ್ಞಾನದ ಪ್ರಸ್ತುತತೆ ಮತ್ತು ಪ್ರಭಾವವು ಸಾಮಾನ್ಯವಾಗಿ ಚರ್ಚೆಯಾಗುತ್ತಿರುವ ಕ್ಷೇತ್ರವೆಂದರೆ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಬಳಕೆ. ಪೆನ್ಸಿಲ್ ಮತ್ತು ಕಾಗದದ ವ್ಯವಸ್ಥೆಗೆ ಹೋಲಿಸಿದರೆ ತಂತ್ರಜ್ಞಾನವು ನಾಗರಿಕರನ್ನು ಹೆಚ್ಚು ಸಶಕ್ತಗೊಳಿಸಲು, ಅವರ ಧ್ವನಿಯನ್ನು ಬಲಗೊಳಿಸಲು ಮತ್ತು ಸರ್ಕಾರಗಳ ರಚನೆ ಕಾರ್ಯದಲ್ಲಿ ನಾಗರಿಕರನ್ನು ಹೊಣೆಗಾರರನ್ನಾಗಿ ಮಾಡಲು ಅನುವು ಮಾಡಿಕೊಡುವ ಪ್ರಚಂಡ ಸಾಮರ್ಥ್ಯವನ್ನು ಇವಿಎಂಗಳು ಹೊಂದಿವೆ ಎನ್ನಲಡ್ಡಿಯಿಲ್ಲ.

ಅಂದಹಾಗೆ EVM ಯಂತ್ರದಲ್ಲಿ ಏನೇನು ಇರುತ್ತದೆ ಅಂದ್ರೆ ಒಂದು ಬ್ಯಾಲೆಟ್ ಯೂನಿಟ್, ಒಂದು ಕಂಟ್ರೋಲ್ ಯೂನಿಟ್ ಮತ್ತು ಒಂದು VVPAT ಇರುತ್ತದೆ. ಇವಿಎಂ ಅಂದಾಜು ವೆಚ್ಚವು ಪ್ರತಿ ಬ್ಯಾಲೆಟ್ ಯೂನಿಟ್‌ಗೆ ರೂ 7,900, ಪ್ರತಿ ಕಂಟ್ರೋಲ್ ಯೂನಿಟ್‌ಗೆ ರೂ 9,800 ಮತ್ತು ಪ್ರತಿ ವಿವಿಪಿಎಟಿಗೆ ರೂ 16,000 ಒಳಗೊಂಡಿರುತ್ತದೆ. ಇನ್ನು 2019 ರಿಂದ ಹೆಚ್ಚಿನ ಪಾರದರ್ಶಕತೆಗಾಗಿ ಪ್ರತಿ ಕ್ಷೇತ್ರಕ್ಕೆ ಆಯ್ಕೆ ಮಾಡಿದ ಐದು ಮತಗಟ್ಟೆಗಳಿಂದ VVPAT ಸ್ಲಿಪ್‌ಗಳನ್ನು EVM ಎಣಿಕೆಯೊಂದಿಗೆ ಹೊಂದಿಸಲಾಗಿದೆ.

Published On - 2:37 pm, Sat, 11 May 24