ದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣಕ್ಕೆ ಸುಪ್ರೀಂಕೋರ್ಟ್ನಲ್ಲಿ ಮತ್ತೊಮ್ಮೆ ಜಯ ಸಿಕ್ಕಿದೆ. ಉದ್ಧವ್ ಠಾಕ್ರೆ ಅವರ ಆಪ್ತರೂ ಆಗಿರುವ ಶಿವಸೇನೆಯ ಮುಖ್ಯ ಸಚೇತಕ (ಚೀಫ್ ವಿಪ್) ಸುನಿಲ್ ಪ್ರಭು ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಲ್ಲ. ಅನರ್ಹತೆಗೆ ಸಂಬಂಧಿಸಿದ ಮತ್ತೊಂದು ಅರ್ಜಿಯ ಜೊತೆಗೆ ಹೊಸ ಅರ್ಜಿಯನ್ನೂ ಜುಲೈ 11ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ವೇಳೆ ನ್ಯಾಯಮೂರ್ತಿಗಳು, ‘ನಾವು ಕಣ್ಣುಮುಚ್ಚಿ ಕುಳಿತಿಲ್ಲ. ಎಲ್ಲ ಬೆಳವಣಿಗೆಗಳನ್ನೂ ಗಮನಿಸುತ್ತಿದ್ದೇವೆ’ ಎಂದು ಹೇಳಿದರು.
16 ಶಾಸಕರು ವಿಧಾನಸಭೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು. ಶಿಂದೆ ಸೇರಿದಂತೆ 16 ಶಾಸಕರನ್ನು ವಿಧಾನಸಭೆಯಿಂದ ಅಮಾನತು ಮಾಡಬೇಕು ಎಂದು ಉದ್ದವ್ ಬಣದ ಸುನಿಲ್ ಪ್ರಭು ವಿನಂತಿಸಿದ್ದರು. 16 ಶಾಸಕರ ವಿರುದ್ಧದ ಅನರ್ಹತೆಯ ದೂರು ಬಗೆಹರಿಯುವವರೆಗೂ ಶಾಸಕರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಅವರು ಕೋರಿದ್ದರು. ಏಕನಾಥ ಶಿಂದೆ ಮತ್ತು ಬಂಡಾಯ ಶಾಸಕರು ಬಿಜೆಪಿಯ ದಾಳಗಳಾಗಿ ಬಳಕೆಯಾಗುತ್ತಿದ್ದಾರೆ. ಪಕ್ಷಾಂತರ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಅವರಿಗೆ ಒಂದೇ ಒಂದು ದಿನವೂ ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬಾರದು ಎಂದು ಉದ್ದವ್ ಠಾಕ್ರೆ ಬಣ ಅರ್ಜಿಯಲ್ಲಿ ವಾದಿಸಿತ್ತು.
ಉದ್ಧವ್ ಠಾಕ್ರೆ ಬಣದ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಎರಡೂ ಬಣಗಳು ವಿಪ್ ಜಾರಿ ಮಾಡಿದರೆ ಯಾರ ವಿಪ್ ಊರ್ಜಿತಗೊಳ್ಳಬೇಕು ಎಂಬ ಪ್ರಶ್ನೆ ಮೂಡುತ್ತದೆ ಎಂದು ವಿವರಿಸಿದರು. ಸಂವಿಧಾನಕ್ಕೆ ಅಪಚಾರ ಮಾಡಿರುವ ಶಿಂದೆ ಮತ್ತು ಅವರ ಬೆಂಬಲಿಗರಿಗೆ ಒಂದೇ ಒಂದು ದಿನವೂ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೋರಿದರು.
ನಿರ್ಬಂಧದ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್, ಏನೆಲ್ಲಾ ಆಗುತ್ತಿದೆ ಎನ್ನುವುದು ನಮಗೂ ಗೊತ್ತಿದೆ. ಆದರೆ ನಾವು ಈ ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸುತ್ತೇವೆ. ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಲಾಗಿದೆಯೇ ಎಂಬುದನ್ನೂ ವಿಮರ್ಶಿಸುತ್ತೇವೆ ಎಂದು ಹೇಳಿದರು.
ರಜಾ ಕಾಲದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೆ.ಪಿ.ಪರ್ದಿವಾಲಾ ಈ ಮೂಲಕ ಬಂಡಾಯ ಶಾಸಕರಿಗೆ ತಾತ್ಕಾಲಿಕ ನೆಮ್ಮದಿಗೆ ಕಾರಣರಾದರು. ಈ ಹಿಂದೆ ಬಂಡಾಯ ಶಾಸಕರಿಗೆ ನೊಟೀಸ್ ಕೊಟ್ಟಿದ್ದ ಮಹಾರಾಷ್ಟ್ರದ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಜೂನ್ 27ರ ಒಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದ್ದರು. ಇದನ್ನು ಪ್ರಶ್ನಿಸಿದ್ದ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಸುಪ್ರೀಂಕೋರ್ಟ್ ಜುಲೈ 11ಕ್ಕೆ ನಿಗದಿಪಡಿಸಿದೆ.
ಈ ನಡುವೆ ಮಹಾರಾಷ್ಟ್ರ ರಾಜ್ಯಪಾಲರಾದ ಬಿ.ಎಸ್.ಕೋಶಿಯಾರಿ ವಿಶ್ವಾಸಮತ ಯಾಚಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ್ದ ಉದ್ಧವ್ ಠಾಕ್ರೆ, ಶಾಸಕರ ಅನರ್ಹತೆ ವಿಚಾರ ತೀರ್ಮಾನವಾಗುವವರೆಗೆ ತೀರ್ಮಾನವಾಗುವವರೆಗೆ ವಿಶ್ವಾಸಮತ ಯಾಚನೆ ಕಾರ್ಯಸಾಧುವಲ್ಲ ಎಂದು ಪ್ರತಿಪಾದಿಸಿದ್ದರು. ವಿಶ್ವಾಸಮತ ಯಾಚನೆಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಿಸಿದ್ದರಿಂದ, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಜುಲೈ 4ರ ಸೋಮವಾರ ಏಕನಾಥ ಶಿಂದೆ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ. ಭಾನುವಾರ (ಜುಲೈ 3) ಭಾನುವಾರ ಹೊಸ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Published On - 11:21 am, Fri, 1 July 22