ಅಮಿತ್ ಶಾ ತಮ್ಮ ಮಾತನ್ನು ಉಳಿಸಿಕೊಂಡಿದ್ದರೆ ಈಗ ಬಿಜೆಪಿ ಸಿಎಂ ಪಟ್ಟದಲ್ಲಿರುತ್ತಿತ್ತು: ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿ ಉದ್ಧವ್ ಠಾಕ್ರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಮುಂಬೈ: ‘ಅಮಿತ್ ಶಾ (Amit Shah) ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದರೆ ಈಗ ಬಿಜೆಪಿಯವರು (BJP) ಮುಖ್ಯಮಂತ್ರಿಯಾಗುತ್ತಿದ್ದರು’ ಎಂದು ಉದ್ಧವ್ ಠಾಕ್ರೆ (Uddhav Thackeray) ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿ ಉದ್ಧವ್ ಠಾಕ್ರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಎರಡು ವರ್ಷಗಳಿಂದ ಮಾತು ಉಳಿಸಿಕೊಳ್ಳದ ಮತ್ತು ಬೆನ್ನಿಗೆ ಚೂರಿಗೆ ಹಾಕಿದ ಜನರ ಜತೆ ಬಂಡಾಯ ಶಾಸಕರು ಅದು ಹೇಗೆ ಮೈತ್ರಿ ಮಾಡಿಕೊಂಡಿದ್ದಾರೆ?. ನನಗಿವತ್ತು ಬೇಜಾರಾಗಿದೆ. ನನ್ನಲ್ಲಿ ಅವರಿಗೆ ಸಿಟ್ಟು ಇದ್ದರೆ ನನ್ನ ಜತೆ ಜಗಳವಾಡಬೇಕಿತ್ತು. ಮುಂಬೈಯನ್ನು ನಾಶ ಮಾಡಬೇಡಿ. ಆರೇ ಪ್ಲಾಟ್ನ್ನು ಮುಟ್ಟಬೇಡಿ ಎಂದು ಉದ್ಧವ್ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಆರೇ ಕಾಲೊನಿಯಲ್ಲಿ ಮೆಟ್ರೊ ಕಾರ್ ಶೆಡ್ ಯೋಜನೆಯನ್ನು ಮುಂದುವರಿಸುವ ನಿರ್ಧಾರ ಬಗ್ಗೆ ನನಗೆ ಬೇಸರವಿದೆ ಎಂದಿದ್ದಾರೆ ಠಾಕ್ರೆ. ನಾವು ಅಭಿವೃದ್ಧಿಯನ್ನು ನಿಲ್ಲಿಸಿಲ್ಲ. ಮುಂಬೈನ ಪರಿಸರದೊಂದಿಗೆ ಚೆಲ್ಲಾಟ ಆಡಬೇಡಿ ಎಂದು ನಾನು ಮಹಾರಾಷ್ಟ್ರದ ನೂತನ ಸರ್ಕಾರದ ಮುಂದೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನಿಮ್ಮ ಸಿಟ್ಟನ್ನು ಮುಂಬೈ ಮೇಲೆ ತೀರಿಸಬೇಡಿ.
ಏಕನಾಥ್ ಶಿಂಧೆ ಅವರನ್ನು ಸಿಎಂ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಠಾಕ್ರೆ ಬಿಜೆಪಿ ಶಿವಸೈನಿಕ್ ಎಂದು ಹೇಳಲ್ಪಡುವ ವ್ಯಕ್ತಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಹೊಸ ಸರ್ಕಾರ ರಚನೆಯಾದ ರೀತಿ ಮತ್ತು ಶಿವಸೇನಾ ಕಾರ್ಯಕರ್ತ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ ರೀತಿಯನ್ನು ತಪ್ಪಿಸಬಹುದಿತ್ತು. ಇದೇ ವಿಚಾರವನ್ನು ಅಮಿತ್ ಶಾ ಅವರಿಗೂ ಪ್ರಸ್ತಾಪಿಸಿದ್ದೆ. ಇವೆಲ್ಲವನ್ನೂ ಗೌರವಯುತವಾಗಿ ಮಾಡಬಹುದಿತ್ತು. ಆ ಸಮಯದಲ್ಲಿ ಶಿವಸೇನಾ ಅಧಿಕೃತವಾಗಿ ನಿಮ್ಮೊಂದಿಗಿತ್ತು.
ಅಮಿತ್ ಶಾ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರೆ ಮಹಾರಾಷ್ಟ್ರದಲ್ಲಿ ಈಗ ಬಿಜೆಪಿ ಮುಖ್ಯಮಂತ್ರಿ ಇರುತ್ತಿದ್ದರು. “ಬಿಜೆಪಿ ಅಧಿಕಾರಕ್ಕಾಗಿ ನನ್ನ ಬೆನ್ನಿಗೆ ಚೂರಿ ಹಾಕಿದೆ. 2.5 ವರ್ಷಗಳ ಕಾಲ (ಶಿವಸೇನಾ-ಬಿಜೆಪಿ ಮೈತ್ರಿಯ ಅವಧಿಯಲ್ಲಿ) ಶಿವಸೇನಾದವರು ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ ಮೊದಲೇ ಹೇಳಿದ್ದೆ, ಅವರು ಇದನ್ನು ಮೊದಲೇ ಮಾಡಿದ್ದರೆ, ಮಹಾ ವಿಕಾಸ್ ಅಘಾಡಿ ಆಗುತ್ತಿರಲಿಲ್ಲ ಎಂದು ಶಿವಸೇನಾ ನಾಯಕ ಹೇಳಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದ ನಂತರ 2019 ರಲ್ಲಿ ಬಿಜೆಪಿಯೊಂದಿಗಿನ ತನ್ನ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಠಾಕ್ರೆ ಇಲ್ಲಿ ಉಲ್ಲೇಖಿಸಿದ್ದಾರೆ. ಎರಡು ಪಕ್ಷಗಳು ಐದು ವರ್ಷಗಳ ಅವಧಿಯನ್ನು ವಿಭಜಿಸುವ ಸರದಿ ಮುಖ್ಯಮಂತ್ರಿ ಸ್ಥಾನದ ಭರವಸೆಯನ್ನು ಬಿಜೆಪಿ, ವಿಶೇಷವಾಗಿ ಅಮಿತ್ ಶಾ ಅವರು ತಿರಸ್ಕರಿಸಿದ್ದಾರೆ ಎಂದು ಠಾಕ್ರೆ ಆರೋಪಿಸಿದ್ದಾರೆ. ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ, ಸರ್ಕಾರವನ್ನು ರಚಿಸಲು ಮತ್ತು ಬಿಜೆಪಿಯನ್ನು ಅಧಿಕಾರ ಹಿಡಿಯದಂತೆ ಮಾಡಲು ಸೈದ್ಧಾಂತಿಕವಾಗಿ ವಿರುದ್ಧ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಸಹಕರಿಸಲು ಠಾಕ್ರೆ ಒಪ್ಪಿಕೊಂಡರು.
ಏಕನಾಥ್ ಶಿಂಧೆ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂಬೈನ ಹಸಿರು ವಲಯದಿಂದ ವಿವಾದಾತ್ಮಕ ಮೆಟ್ರೋ ಕಾರ್ ಶೆಡ್ ಯೋಜನೆಯನ್ನು ಸ್ಥಳಾಂತರಿಸುವ ಠಾಕ್ರೆ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವುದು ಅವರು ತೆಗೆದುಕೊಂಡ ಮೊದಲ ನಿರ್ಧಾರಗಳಲ್ಲಿ ಒಂದಾಗಿದೆ.
“ಮುಂಬೈಕರ್‌ಗಳ ಮೇಲೆ ನನ್ನ ಕೋಪವನ್ನು ತೋರಿಸಬೇಡಿ. ಮೆಟ್ರೋ ಶೆಡ್‌ನ ಪ್ರಸ್ತಾಪವನ್ನು ಬದಲಾಯಿಸಬೇಡಿ. ಮುಂಬೈನ ಪರಿಸರದೊಂದಿಗೆ ಆಟವಾಡಬೇಡಿ. ನನಗೆ ದ್ರೋಹ ಮಾಡಿದಂತೆ ಮುಂಬೈಗೆ ದ್ರೋಹ ಮಾಡಬೇಡಿ.
ಮೆಟ್ರೋ ಕಾರ್ ಶೆಡ್ ಯೋಜನೆ ಆರೆಯಲ್ಲಿ ಅಲ್ಲ ಕಂಜುರ್ಮಾರ್ಗ್‌ನಲ್ಲಿ ಇರಲಿ. ಕಂಜುರ್ಮಾರ್ಗ್ ಖಾಸಗಿ ಪ್ಲಾಟ್ ಅಲ್ಲ. ನಾನು ಪರಿಸರವಾದಿಗಳೊಂದಿಗೆ ಇದ್ದೇನೆ ಮತ್ತು ಆರೆಯನ್ನು ಮೀಸಲು ಅರಣ್ಯ ಎಂದು ಘೋಷಿಸಿದ್ದೇನೆ. ಆ ಕಾಡಿನಲ್ಲಿ ವನ್ಯಜೀವಿಗಳು ಅಸ್ತಿತ್ವದಲ್ಲಿವೆ ಎಂದಿದ್ದಾರೆ ಠಾಕ್ರೆ. 2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಮುಂಬೈನ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ಅನ್ನು ನಿರ್ಮಿಸಲಾಗುವುದು ಎಂದು ಶಿಂಧೆ ನಿರ್ಧರಿಸಿದ್ದಾರೆ.
Published On - 2:28 pm, Fri, 1 July 22







