ಬೆಂಗಳೂರು, (ಸೆಪ್ಟೆಂಬರ್ 18): ಮೂರು ಸಮುದಾಯಕ್ಕೆ ಮೂರು ಉಪಮುಖ್ಯಮಂತ್ರಿ(three deputy cm) ಸೃಷ್ಟಿಸಬೇಕು.ಇದರಿಂದ ಲೋಕಸಭೆಯಲ್ಲೂ ನೆರವಾಗುತ್ತೆ. ಹೈಕಮಾಂಡ್ಗೂ ಇದನ್ನ ಮನವರಿಕೆ ಮಾಡಿಕೊಡುವುದಾಗಿ ಸಚಿವ ಕೆ.ಎನ್, ರಾಜಣ್ಣ ಹೇಳಿದ್ದು, ರಾಜ್ಯ ಕಾಂಗ್ರೆಸ್‌ನಲ್ಲಿ(Congress) ಸಂಚಲನ ಮೂಡಿಸಿದೆ. ರಾಜಣ್ಣ ಹೇಳಿಕೆ ಬಳಿಕ ರಾಜ್ಯ ಕಾಂಗ್ರೆಸ್(Karnataka Congress)ನಲ್ಲಿ ಡಿಸಿಎಂ ದಂಗಲ್ ಶುರುವಾಗಿತ್ತು. ಕೆಲವೊಬ್ಬರು ಮೂವರು ಡಿಸಿಎಂ ಬೇಕು ಅಂದ್ರೆ, ಇನ್ನು ಕೆಲವರು ಬೇಡ ಎಂದಿದ್ದಾರೆ. ಇದೀಗ ಖುದ್ದು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಸಿಎಂ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು ಎಂದಿದ್ದಾರೆ. ಆದ್ರೆ, ಮೂವರು ಡಿಸಿಎಂ ಸೃಷ್ಟಿಸಬೇಕು ಎನ್ನುವ ಬೇಡಿಕೆ ಸಂಬಂಧ ಸಿಎಂ ಈಗಾಗಲೇ ಉತ್ತರ ನೀಡಿಬಿಟ್ಟಿದ್ದಾರೆ. ಹೈಕಮಾಂಡ್ ಒಪ್ಪುವುದಾದರೆ ನನ್ನದೇನು ಅಭ್ಯಂತರ ಇಲ್ಲ ಎನ್ನುವ ಮೂಲಕ ಹೆಚ್ಚುವರಿ ಡಿಸಿಎಂ ವಾದದ ಪರವಾಗಿ ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮ ರಾಜಕೀಯ ದಾಳ ಉರುಳಿಸಿದ್ದಾರೆ. ಇದರಿಂದ ಸದ್ಯಕ್ಕೆ ಕೈ ಪಾಳಯದಲ್ಲಿ ಡಿಸಿಎಂ ಗಲಾಟೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬದಲಾಗಿ ಈ ಕಿಚ್ಚು ಗಣೇಶ ಹಬ್ಬದ ಬಳಿಕ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕೆಪಿಸಿಸಿ ಸಾರಥಿಯೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನಲ್ಲಿ ದಿನೇ ದಿನೇ ಗಟ್ಟಿಯಾಗುತ್ತಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಸಿಎಂಗೆ ಪರ್ಯಾಯವಾಗಿ ತಮ್ಮ ನಾಯಕತ್ವ ಮತ್ತು ವರ್ಚಸ್ಸು ಸ್ಥಾಪಿಸಲು ಡಿ.ಕೆ. ಶಿವಕುಮಾರ್ ಹೆಜ್ಜೆ ಇಟ್ಟಿದ್ದಾರೆ. ಆದರೆ ಈ ಬೆಳವಣಿಗೆ ಕಾಂಗ್ರೆಸ್ ಪಾಳಯದ ಕೆಲ ಹಿರಿಯ ನಾಯಕರಿಗೆ ಇಷ್ಟವಾಗಲಿಲ್ಲ. ಜತೆಗೆ ಮುಂದೊಂದು ದಿನ ಡಿಕೆ ಶಿವಕುಮಾರ್ ಸಿಎಂ ಆದರೆ ಇತರೆ ನಾಯಕರ ಅಸ್ತಿತ್ವಕ್ಕೂ ಪ್ರಶ್ನೆ ಮೂಡಲಿದೆ. ಹೀಗಾಗಿಯೇ ಹಾಲಿ ಡಿಸಿಎಂ ಜತೆ ಮೂವರು ಡಿಸಿಎಂ ಎಂಬ ದನಿ ಎದ್ದಿದೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ರಾಜಕೀಯ ಪ್ರತಿ ಪಟ್ಟುಗಳನ್ನ ಅರಿತಿರುವ ಡಿಕೆ ಶಿವಕುಮಾರ್, ಯಾವ ಸಮಯದಲ್ಲಿ ಯಾರಿಗೆ ಮತ್ತು ಎಲ್ಲಿ ಏಟು ಕೊಡಬೇಕು ಎನ್ನುವುದನ್ನ ಅರಿತಿದ್ದಾರೆ. ಇದೇ ಕಾರಣಕ್ಕೆ ನನ್ನದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎನ್ನುವ ಮೂಲಕ ಬಣ ರಾಜಕೀಯ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದಾರೆ.
ಇನ್ನು ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಸಿಎಂ ಆಗಲೇಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು.
ಎದುರಾಳಿಗಳು ತಮ್ಮ ವಿರುದ್ಧ ದಾಳ ಉರುಳಿಸಿದ್ರೆ ಡಿಕೆ. ಶಿವಕುಮಾರ್ ಕೈ ಚೆಲ್ಲಿ ಕುರುವ ಮಾತೇ ಇಲ್ಲ. ಅತ್ತ ಇನ್ನಿತರ ನಾಯಕರು ಸಹ ಪಟ್ಟು ಬಿಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಒಳಗೆ ರಾಜಕೀಯದ ಸುಂಟರಗಾಳಿಯೊಂದು ಸದ್ದಿಲ್ಲದೇ ಸುರಳಿ ಸುತ್ತುತ್ತಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ