ಮೈಸೂರು, ನ.18: ಯತೀಂದ್ರ ಅವರ ವಿಡಿಯೋ ವೈರಲ್ ಆದ ನಂತರ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಈ ಹೆಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ವಿವೇಕಾನಂದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯತೀಂದ್ರ ಹೇಳಿದ ವಿವೇಕಾನಂದ ಬೇರೆ, ಕುಮಾರಸ್ವಾಮಿ ಹೇಳಿದ ವಿವೇಕಾನಂದ ಬೇರೆ ಎಂದು ಸ್ಪಷ್ಟನೆ ನೀಡಿದರು. ಯತೀಂದ್ರ ಹೇಳಿದ ವಿವೇಕಾನಂದ ಮೈಸೂರು ಬಿಇಒ. ಈಗ ವರ್ಗಾವಣೆ ಆಗಿರುವ ವಿವೇಕಾನಂದ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇವರು ವಿವಿ ಪುರಂಗೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಆಗಿದ್ದಾರೆ. ಆದರೆ, ಹೆಚ್ಡಿ ಕುಮಾರಸ್ವಾಮಿ ಅವರು ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಈ ಇಬ್ಬರೂ ವಿವೇಕಾನಂದಗಳಿಗೆ ಸಂಬಂಧವೇ ಇಲ್ಲ ಎಂದರು.
ವಿಪಕ್ಷಗಳು ಹತಾಶವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ. ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್ ಈ ಹಿಂದೆ 38 ಸೀಟ್ ಗೆದ್ದಿತ್ತು, ಈಗ 19ಕ್ಕೆ ಇಳಿದಿದೆ. ಸರ್ಕಾರದ ಬಗ್ಗೆ ಪೆನ್ ಡ್ರೈವ್ ಇದೆ ಎಂದು ಕುಮಾರಸ್ವಾಮಿ ತೋರಿಸಿದ್ದರು. ಆದಾದ ಬಳಿಕ ಅಧಿವೇಶನದಲ್ಲಿ ಪೆನ್ಡ್ರೈವ್ ಬಗ್ಗೆ ಮಾತಾಡಬಹುದಿತ್ತು. ಕುಮಾರಸ್ವಾಮಿ ಪೆನ್ಡ್ರೈವ್ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದರು.
ಬಿಜೆಪಿಯಲ್ಲಿ ನೂತನ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಏನು ಆಗುತ್ತದೆ ಎಂಬುದಕ್ಕೆ ಸ್ವಲ್ಪ ಕಾಯಿರಿ. ವೇಟ್ ಅಂಡ್ ಸೀ. ಕಾಯಿರಿ, ಕಾಯಿರಿ, ಕಾಯಿರಿ ಎಂದು ಮೂರು ಬಾರಿ ಹೇಳಿದ ಸಿಎಂ ಸಿದ್ದರಾಮಯ್ಯ, ಅಸಮಾಧಾನ ಹೇಗೆ ಸ್ಪೋಟವಾಗುತ್ತಾ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ: ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆಗೂ ನನಗೂ ಸಂಬಂಧವಿಲ್ಲ: ಡಾ.ಯತೀಂದ್ರ ಸ್ಪಷ್ಟನೆ
ನಿನ್ನೆಯ ಸಭೆಯಿಂದ ಬಸನಗೌಡಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ರಮೇಶ್ ಜಾರಕಿಹೊಳಿ ಯಾಕೇ ಎದ್ದು ಹೋದರು? ಯಡಿಯೂರಪ್ಪ ಮಗನನ್ನ ಅಧ್ಯಕ್ಷ ಮಾಡಿರುವುದು, ಅಶೋಕನನ್ನು ವಿಪಕ್ಷ ನಾಯಕ ಮಾಡಿರುವುದು ಅವರಿಗೆ ಬೇಸರ ತಂದಿದೆ. ಸ್ವಲ್ಪ ದಿನ ನೀವೇ ಕಾದು ನೋಡಿ. ಬಿಜೆಪಿಯಲ್ಲಿ ಏನೇನ್ ಆಗುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು.
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, ಈಗ ಯಾಕ್ರಿ ಚುನಾವಣೆ ನಡೆಯುತ್ತದೆ? ಹಿಂದೆಯೂ ಹೇಳುತ್ತಿದ್ದರು ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಾ, ಅಧಿಕಾರಕ್ಕೆ ಬಂದಿದ್ದು ಯಾರು? ಸುಮ್ಮನ್ನೆ ಏನೋ ಹೇಳುತ್ತಾರೆ, ಅದನ್ನೆಲ್ಲಾ ಬಿಟ್ಟು ಬಿಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Sat, 18 November 23