ಕೋಲಾರದಲ್ಲಿ ಸದ್ದಿಲ್ಲದೆ ಸಿದ್ದವಾಯ್ತು ಸಿದ್ದರಾಮಯ್ಯ ಮನೆ; ವಿಪಕ್ಷ ನಾಯಕರ ಸ್ಪಷ್ಟನೆ ಇಲ್ಲಿದೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಕ್ಷ ಸ್ಥಾಪಕ ಜನಾರ್ಧನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲು ತಾಲೂಕಿನಲ್ಲಿ ಮನೆ ಮಾಡಿದ್ದರು. ಇದೀಗ ಕೋಲಾರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಸಿದ್ದರಾಮಯ್ಯ ಕೂಡ ಅದೇ ಹಾದಿ ಹಿಡಿದಿದ್ದಾರೆ.
ಉಡುಪಿ: ಚುನಾವಣೆ ಕಣಕ್ಕೆ ಇಳಿಯುವ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸ್ವಂತ ಮನೆ ಮಾಡುವುದು ಸಾಮಾನ್ಯವಾಗಿದೆ. ಈ ಹಿಂದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪಕ್ಷ ಘೋಷಣೆಗೂ ಮುನ್ನ ಗಂಗಾವತಿಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಜನಾರ್ಧನ ರೆಡ್ಡಿ, ಅದೇ ಕ್ಷೇತ್ರದಲ್ಲಿ ಮನೆ ಮಾಡಿದ್ದರು. ಅದರಂತೆ ಕ್ಷೇತ್ರ ಪರಿಯಟಣೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೂಡ ಅದೇ ಹಾದಿಯಲ್ಲಿದ್ದಾರೆ. ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವ ಸಿದ್ದರಾಮಯ್ಯ (Siddaramaiah), ಮೇಲಿಂದ ಮೇಲೆ ಕೋಲಾರಕ್ಕೆ ಹೋಗಿ ಕ್ಷೇತ್ರ ಸುತ್ತಾಟ ನಡೆಸಿ ಹವಾ ಸೃಷ್ಟಿಸಿದ್ದಾರೆ. ಇದೀಗ ಕೋಲಾರದಲ್ಲಿ ಒಂದು ಮೆನೆಯನ್ನೂ ಹುಡುಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಉಡುಪಿಯಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ. ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ. ಮನೆ ಹುಡುಕುವ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಹಿನ್ನಲೆ ಸಿದ್ದರಾಮಯ್ಯರಿಗಾಗಿ ಕೋಲಾರದಲ್ಲಿ ಮನೆ ಹುಡುಕಾಟ ನಡೆಸಲಾಗುತ್ತಿದೆ. ಕೋಲಾರ ನಗರದ ಹಲವು ಬಡವಾಣೆಗಳಲ್ಲಿ ಮನೆ ಹಾಗೂ ಕಚೇರಿಗೆ ಸೂಕ್ತ ಸ್ಥಳ ಹುಡುಕಾಟ ನಡೆಸಲಾಗುತ್ತಿದ್ದಾರೆ. ನಾಳೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಭೇಟಿ ನೀಡಿದಾಗ ಮನೆ ಮತ್ತು ಕಚೇರಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಹೆದ್ದಾರಿಗೆ ಹತ್ತಿರುವಿರುವ, ವಾಹನ ನಿಲುಗಡೆ ಎಲ್ಲದಕ್ಕೂ ಅನುಕೂಲವಿರುವ ಪ್ರತಿಷ್ಠಿತ ಬಡಾವಣೆಯಲ್ಲಿ ಮುಖಂಡರು ಮನೆಗಳನ್ನು ಹುಡುಕಿದ್ದಾರೆ ಎನ್ನಲಾಗುತ್ತಿದೆ.
ನಮಗೆ ಕುರ್ಚಿ ಮೇಲೆ ಆಸೆ ಅಂತಾರೆ, ಬಿಜೆಪಿಯವರಿಗೆ ಯಾವುದರ ಮೇಲೆ ಆಸೆ ಮತ್ತೆ?
ಬಿಜೆಪಿಯವರು ಒಮ್ಮೆ ಗೆದ್ದರೆ ಅದು ಮತ್ತೊಮ್ಮೆ ಅವರು ಗೆಲ್ಲುತ್ತಾರೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮಗೆ ಕುರ್ಚಿ ಮೇಲೆ ಆಸೆ ಅಂತಾರೆ. ಇವರಿಗೆ ಮತ್ತೆ ಯಾವುದರ ಮೇಲೆ ಆಸೆ? ಆಸೆ ಇಲ್ಲವೆಂದರೆ ಕುರ್ಚಿ ಆಸೆಯನ್ನು ಬಿಟ್ಟುಬಿಡಿ. ಮಗನನ್ನು ತೆಗೆದುಕೊಂಡು ಹೋಗಿ ಬಿಜೆಪಿ ಅಧ್ಯಕ್ಷರಾಗಿ ಮಾಡಿದ್ದೀರಿ, ಕಾರ್ಯದರ್ಶಿಯಾಗಿ ಮಾಡಿದ್ದೀರಿ. ಈಗ ನಮಗೆ ಕುರ್ಚಿ ಮೇಲೆ ಆಸೆ ಅಂತ ಹೇಳುತ್ತೀರಿ. ಹಾಗಾದರೆ ಇವರಿಗೆ ಯಾವುದರ ಮೇಲೆ ಆಸೆ ಇದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕಿಳಿದ ಸಂಘಟನಾ ಚತುರ, ಕೋಲಾರದಲ್ಲಿ ಬಿಜೆಪಿ ಗೆಲುವಿಗೆ ಸಂತೋಷ್ ‘ಸೂತ್ರ’
ಎಸ್ ಪಾರ್ಟಿ ಡಿ ಪಾರ್ಟಿ ಸುಮ್ಮನೆ ಹುಟ್ಟು ಹಾಕಿರುವ ಸುಳ್ಳು
ಡಿ ಪಾರ್ಟಿ ಎಸ್ ಪಾರ್ಟಿ ಎಂದು ಸಚಿವ ಆರ್.ಅಶೋಕ್ ಅವರು ಸುಮ್ಮನೆ ಹುಟ್ಟು ಹಾಕಿರುವ ಸುಳ್ಳಾಗಿದೆ. ಶಾಸಕರಿಗೆ 500, 600 ಕೋಟಿ ಕೊಡುತ್ತಾರೆ ಅಂದರೆ ನಂಬಲು ಆಗುತ್ತಾ? ಆರ್.ಅಶೋಕ್ ಹೇಳಿದ ತಕ್ಷಣ ಗುಂಪುಗಾರಿಕೆ ಆಗಲು ಸಾಧ್ಯವೇ? ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕಾರ್ಯಕ್ರಮಕ್ಕೆ ಶಾಸಕ ಯತ್ನಾಳ್ ಯಾಕೆ ಹೋಗಿಲ್ಲ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ನಾವು ಕನಿಷ್ಠ 130 ಹಾಗೂ ಗರಿಷ್ಠ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಜನರ ಹಾದಿ ತಪ್ಪಿಸಲು ಅಶೋಕ್ ಹೇಳಿರುವ ಸುಳ್ಳು ಇದು: ಖಾದರ್
ಡಿ ಕಾಂಗ್ರೆಸ್ ಸೋಲಿಸಲು 500 ಕೋಟಿ ಆಫರ್ ಎಂದ ಸಚಿವ ಆರ್.ಅಶೋಕ್ ಹೇಳಿಕೆಗೆ ಉಡುಪಿಯಲ್ಲಿ ತಿರುಗೇಟು ನೀಡಿದ ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಜನರ ಹಾದಿ ತಪ್ಪಿಸಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಶೋಕ್ ಅವರ ಹೇಳಿಕೆಗೆ ಮಾನ್ಯತೆ ಕೊಡದೆ ನಿರ್ಲಕ್ಷಿಸಬೇಕು ಎಂದರು. ಬಿಜೆಪಿ ನಾಯಕರು ಏನೇನು ಹೇಳಿಕೆ ನೀಡಿದ್ದಾರೆಂದು ಗೊತ್ತಿದೆ. ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರೇ ಆರೋಪ ಮಾಡಿದ್ದಾರೆ. ಬಿಜೆಪಿಯವರು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಮೊದಲು ಹೇಳಲಿ. ಈಗ ಇರುವ ಮುಖ್ಯಮಂತ್ರಿಯೇ ನಮ್ಮ ಅಭ್ಯರ್ಥಿ ಎಂದು ಹೇಳುವ ದಮ್ಮು ತಾಕತ್ತು ಇಲ್ಲ. ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರ ಹಾದಿ ತಪ್ಪಿಸಬೇಡಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sun, 22 January 23