ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ: ಸಿದ್ದುಗೆ ಟಾಂಗ್ ಕೊಟ್ಟ ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಇತ್ತೀಚಿಗೆ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಅದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ. ಅದಕ್ಕೆ ನಾನು ಸಿದ್ದರಾಮಯ್ಯ ಅವರ ವೈಯಕ್ತಿಕ ಟೀಕೆಗಳಿಗೆ ಉತ್ತರಿಸಬಾರದೆಂದು ಅಂದು ಕೊಂಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೈಸೂರು: ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ಟಾಂಗ್ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಅವರು ಸಾಧ್ಯವಾಗದ ಭರವಸೆ ನೀಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿದೆ ಎಂದರು. ಮೈಸೂರಿನ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಆಡಳಿತದಿಂದ ಇಂಧನ ಇಲಾಖೆ ದುಸ್ಥಿತಿಯಲ್ಲಿತ್ತು. ನಮ್ಮ ಸರ್ಕಾರ ಬಂದ ಮೇಲೆ ಸುಧಾರಿಸಿದೆ. ನಾವು SC, ST ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ಅಸಾಧ್ಯವಾದ ಭರವಸೆಯನ್ನು ಕೊಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಇತ್ತೀಚಿಗೆ ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಅದು ಎಷ್ಟು ಸರಿ ಅಂತಾ ಅವರೇ ಯೋಚನೆ ಮಾಡಲಿ. ಹೀಗಾಗಿ ನಾನು ಸಿದ್ದರಾಮಯ್ಯ ಅವರ ವೈಯಕ್ತಿಕ ಟೀಕೆಗಳಿಗೆ ಉತ್ತರಿಸಬಾರದೆಂದು ಅಂದು ಕೊಂಡಿದ್ದೇನೆ. ನಾವು ಕೂಡ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಟೀಕೆಸಿದ್ದೇವೆ. ಆದರೆ ವೈಯಕ್ತಿಕ ಟೀಕೆ ಮಾಡಿರಲಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ಎಂಬ ಸಿದ್ದರಾಮಯ್ಯ ಹೇಳಿಕೆಗೂ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಮೋದಿ ಅವರನ್ನು ಗುಜರಾತ್ ಚುನಾವಣೆ ವೇಳೆ ಬಾಯಿಗೆ ಬಂದ ರೀತಿ ಮಾತಾಡಿದ ಪರಿಣಾಮ ಅಲ್ಲಿನ ಫಲಿತಾಂಶ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಈಗಲೂ ಅದೇ ಆಗುತ್ತದೆ. ಯಾರೋ ಹೇಳಿದರು ಅನ್ನೋ ಕಾರಣಕ್ಕೆ ಅವರ ಘನತೆ ಬದಲಾಗುವುದಿಲ್ಲ ಎಂದು ಹೇಳಿದರು.
ಎಚ್ಚರಿಕೆಯಿಂದ ಯಾರ ಮನಸ್ಸಿಗೂ ನೋವಾಗದಂತೆ ಮಾತಾಡಬೇಕು: ಸಿಎಂ
ಬೊಮ್ಮಾಯಿ ಮನೆ ಹಾಳಾಗ ಎಲ್ಲಾ ಯೋಜನೆ ನಿಲ್ಲಿಸಿಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಸುತ್ತೂರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಸಿಎಂ, ನಾನು ಆ ಬಗ್ಗೆ ಮಾತನಾಡಿದರೆ ಅವರ ಮಟ್ಟಕ್ಕೆ ಇಳಿಯಬೇಕು. ಅಷ್ಟು ದೊಡ್ಡ ಸ್ಥಾನ ಅಲಂಕರಿಸಿದವರು ಸಣ್ಣ ಮಾತನಾಡುತ್ತಾರೆ. ಇದು ದೊಡ್ಡವರ ಸಣ್ಣತನ ಅಷ್ಟೇ. ಎಲ್ಲಾ ಇದ್ದು ಸಣ್ಣವರಾಗುವುದು ನಮ್ಮ ಸಂಸ್ಕೃತಿ ಅಲ್ಲ. ಸಾರ್ವಜನಿಕ ಜೀವನದಲ್ಲಿರೋರು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ತಮ್ಮ ಸ್ಥಾನಕ್ಕಿರುವ ಗೌರವವನ್ನು ಉಳಿಸಿಕೊಂಡು ಹೋಗಬೇಕು. ಕೆಲವರು ತಮ್ಮಷ್ಟಕ್ಕೆ ತಾವು ಪ್ರಭಾವಿಗಳು ಅಂದುಕೊಂಡಿದ್ದಾರೆ. ಎಚ್ಚರಿಕೆಯಿಂದ ಯಾರ ಮನಸ್ಸಿಗೂ ನೋವಾಗದಂತೆ ಮಾತಾಡಬೇಕು ಎಂದರು.
ಇದನ್ನೂ ಓದಿ: ತ್ರಿಶೂಲ ಹಿಡ್ಕೊಂಡು ಬಿಜೆಪಿ ಕಾರ್ಯಕರ್ತರು ಸಾಯ್ತವ್ರೆ, ಯಾವ ಮಂತ್ರಿ ಮಗನೂ ಬಲಿಯಾಗಲ್ಲ: ಡಿ.ಕೆ.ಶಿವಕುಮಾರ್
ಹೊಗಳಿಕೆ ಅಂದ್ರೆ ನನಗೆ ಭಯ ಎಂದ ಸಿಎಂ ಬೊಮ್ಮಾಯಿ
ಕಾರ್ಯಕ್ರಮದಲ್ಲಿ ಸಿಎಂ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ನಿರೂಪಕಿಗೆ ಟಾಂಗ್ ಕೊಟ್ಟ ಸಿಎಂ, ಹೊಗಳಿ ಹೊನ್ನಶೂಲಕ್ಕೆ ಏರಿಸದಿರಯ್ಯ ಎಂದರು. ಹೊಗಳಿಕೆ, ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಅದಾಗ್ಯೂ ಹೊಗಳಿಕೆ ಅಂದರೆ ನನಗೆ ಭಯ, ತೆಗಳಿದರೆ ಮೆಟ್ಟಿಲು ಮಾಡಿ ಯಶಸ್ಸು ಮಾಡಿಕೊಳ್ಳುವುದು ಗೊತ್ತಿದೆ ಎಂದರು. ಜಾತ್ರೆಯಲ್ಲಿ ಒಬ್ಬರು, ಇಬ್ಬರಿಂದ ರಥವನ್ನು ಎಳೆಯಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದವರು, ಸಾವಿರಾರು ಜನ ಸೇರಿ ಎಳೆಯಬೇಕು. ಎಲ್ಲ ಸಮುದಾಯದವರು ಸಾವಿರಾರು ಜನ ಸೇರಿ ಎಳೆಯಲಿ ಅನ್ನೋ ಕಾರಣಕ್ಕೆ ದೊಡ್ಡ ತೇರು ಮಾಡಲಾಗಿದೆ. ಸಮಾನತೆಯ ಸದುದ್ದೇಶಕ್ಕಾಗಿ ಹಿರಿಯರು ಈ ರೀತಿ ಮಾಡಿದ್ದರು ಎಂದರು.
ಚಿರತೆ ದಾಳಿಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ
ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ ಬಾಲಕ ಜಯಂತ್(11) ಸಾವನ್ನಪ್ಪಿದ್ದಾನೆ. ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಚಿರತೆ ದಾಳಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಚಿರತೆ ಸೆರೆ ಹಿಡಿಯಲು ವಿಶೇಷ ತಂಡ ರಚಿಸಲು ಸೂಚಿಸಿದ್ದೇನೆ. ಚಿರತೆ ಹಾವಳಿ ಹೆಚ್ಚಾಗಿರುವ ಕಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Sun, 22 January 23