ದೆಹಲಿ: ಕೊರೊನಾ ಪಿಡುಗು ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಬಿಜೆಪಿಯ ಪರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು. ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರದಲ್ಲಿ ಸಂಕಷ್ಟ ಅನುಭವಿಸಿದವರಿಗೆ ನ್ಯಾಯ ಸಿಗಬೇಕು ಎಂಬ ಪಕ್ಷದ ನಿಲುವನ್ನು ಅವರು ಪುನರುಚ್ಚರಿಸಿದರು. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ವಿರೋಧ ಪಕ್ಷಗಳು ಆರಂಭ ದಿನಗಳಲ್ಲಿ ಲಸಿಕೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಇದರಿಂದ ಕೆಲದಿನಗಳು ಗೊಂದಲ ಮುಂದುವರಿಯಿತು. ಆದರೆ ಜನರ ಸಕಾರಾತ್ಮಕ ಸ್ಪಂದನೆಯಿಂದ ಉತ್ತಮ ಪ್ರಗತಿ ಸಾಧ್ಯವಾಯಿತು’ ಎಂದು ತಿಳಿಸಿದರು.
‘ಲಾಕ್ಡೌನ್ ಘೋಷಣೆಯಾದ 48 ಗಂಟೆಗಳ ಒಳಗೆ ನಾವು ಜನರಿಗೆ ಉಚಿತ ಆಹಾರ ಧಾನ್ಯ ನೀಡುವ ಘೋಷಣೆ ಮಾಡಿದೆವು. ಒಟ್ಟು 80 ಕೋಟಿ ಜನರಿಗೆ 8 ತಿಂಗಳು ಆಹಾರ ಧಾನ್ಯಗಳನ್ನು ನೀಡಿದ್ದೇವೆ. ಪಿಎಂ-ಕೇರ್ಸ್ ಫಾರ್ ಚಿಲ್ಡರ್ನ್ ಮೂಲಕ ಮುಂದಿನ ತಲೆಮಾರಿನ ಕಾಳಜಿ ಮಾಡಿದೆವು. ಕೊವಿಡ್ನಿಂದ ಅನಾಥರಾದ ಮಕ್ಕಳಿಗೆ ಆಸರೆ ಒದಗಿಸಲು ಪ್ರಯತ್ನಿಸಿದೆವು. ಒನ್ ನೇಷನ್, ಒನ್ ರೇಷನ್ ಕಾರ್ಡ್ ಮೂಲಕ ದೇಶದ ಜನರಿಗೆ ಅವರು ಯಾವುದೇ ಊರಿನಲ್ಲಿದ್ದರೂ ಉಚಿತ ಆಹಾರ ಧಾನ್ಯ ಸಿಗುವಂತೆ ಮಾಡಿದೆವು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಗ್ಗೆಯೂ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು. ಜಮ್ಮು ಕಾಶ್ಮೀರದಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಮತ್ತು ಡಿಸ್ಟ್ರಿಕ್ಟ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಗಳನ್ನೂ ಯಶಸ್ವಿಯಾಗಿ ನಿರ್ವಹಿಸಲಾಯಿತು. ಅಲ್ಲಿನ ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಅಂಶವನ್ನೂ ಸಭೆ ಗಮನಿಸಿತು ಎಂದು ನುಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯಮ ಪ್ರೋತ್ಸಾಹಕ್ಕಾಗಿ ₹ 28,400 ಕೋಟಿ ಮೊತ್ತದ ಯೋಜನೆಯನ್ನು ಜನವರಿ 2021ರಂದು ಘೋಷಿಸಲಾಯಿತು. ಇದರ ಜೊತೆಗೆ ₹ 56,201 ಕೋಟಿ ಮೊತ್ತದ 54 ಯೋಜನೆಗಳನ್ನೂ ಆರಂಭಿಸಲಾಯಿತು ಎಂದು ನೆನಪಿಸಿಕೊಂಡರು. ಜನ ಔಷಧಿ ಯೋಜನೆ ಆರಂಭಿಸಿದ್ದರಿಂದ ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ಸುಲಭವಾಗಿ ಔಷಧಿಗಳು ದೊರೆಯುತ್ತಿವೆ. ದೇಶದ ಹಲವೆಡೆ ಸುಮಾರು 75,000 ಆರೋಗ್ಯ ಮತ್ತು ವೆಲ್ನೆಸ್ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರವನ್ನು ಬಿಜೆಪಿ ಕಟುವಾಗಿ ಖಂಡಿಸುತ್ತದೆ. ಸಂಕಷ್ಟದಲ್ಲಿರುವ ಪ್ರತಿ ಕಾರ್ಯಕರ್ತನೊಂದಿಗೆ ಪಕ್ಷ ನಿಲ್ಲುತ್ತದೆ. ಅವರ ಕಾನೂನು ಹೋರಾಟಕ್ಕೆ ಬಂಬಲಿಸುತ್ತದೆ ಎಂದು ತಿಳಿಸಿದರು. ಭಾರತವು ಸಾಕಷ್ಟು ಬದಲಾವಣೆಗಳನ್ನು ಎದುರು ನೋಡುತ್ತಿದೆ. ಡಿಜಿಟಲ್ ಇಂಡಿಯಾ ಮಿಷನ್ ಈ ಬದಲಾವಣೆಗೆ ಹೊಸ ವೇಗ ನೀಡಿದೆ. ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಮಿಷನ್ ಯೋಜನೆಗಳು ದೇಶದ ಆರ್ಥಿಕ ಸುಧಾರಣೆಗೆ ಸಹಕರಿಸಿದವು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಒಂದೂವರೆ ವರ್ಷಗಳ ಅಂತರದಲ್ಲಿ ಪುನಃ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನವೆಂಬರ್ 19ರಿಂದ 21ರವರೆಗೆ ಬಿಜೆಪಿಯ ಜನಸ್ವರಾಜ್ ಸಮಾವೇಶ; ಎಂಎಲ್ಸಿ ಎನ್ ರವಿಕುಮಾರ್ ಮಾಹಿತಿ
ಇದನ್ನೂ ಓದಿ: ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ಪ್ರಧಾನಿ ನರೇಂದ್ರ ಮೋದಿ ನೇತೃತ್ವ
Published On - 4:01 pm, Sun, 7 November 21