ಬೆಂಗಳೂರು, ಜೂನ್ 22: ರಾಜ್ಯದಲ್ಲಿ ಅಪಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ (NDA) 19 ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಮೂಲಕ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) , ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಹಂಕಾರಕ್ಕೆ ಜನ ಕಪಾಳ ಮೋಕ್ಷ ಮಾಡಿದ್ದಾರೆ. ಇವರು ಗ್ಯಾರಂಟಿ ನೀಡಿ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ಮಾಡಿದರು.
ರಾಜ್ಯದಿಂದ ಆಯ್ಕೆಯಾದ ನೂತನ ಬಿಜೆಪಿ ಹಾಗೂ ಜೆಡಿಎಸ್ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಲ್ಹಾದ್ ಜೋದಿ, ಮೂರನೇ ಬಾರಿ ಮೋದಿ ಪ್ರಧಾನಿ ಆಗಿದ್ದಕ್ಕೆ ಕಾಂಗ್ರೆಸ್ಗೆ ಹೊಟ್ಟೆಕಿಚ್ಚು ಶುರುವಾಗಿದೆ ಎಂದರು.
ಬಿಜೆಪಿಯನ್ನು ವಿರೋಧಿಸಲೆಂದೇ ಸೋ ಕಾಲ್ಡ್ ಇಂಡಿಯಾ ಮೈತ್ರಿಕೂಟ ಹುಟ್ಟಿಕೊಂಡಿದೆ. ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಅರ್ಥವೇ ಇಲ್ಲ. ಕಾಂಗ್ರೆಸ್ ಪಕ್ಷ ದೇಶದ ಜನರಲ್ಲಿ ಭ್ರಮೆಯನ್ನು ಬಿತ್ತುವ ಕೆಲಸ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ವಿಚಾರದಲ್ಲಿ ಒಬ್ಬ ಸಚಿವನಿಂದ ರಾಜೀನಾಮೆ ಕೊಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾನು ಸಾಚಾ ಎಂದು ಹೇಳುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷಗಳಿಗೆ ಶೇ.56 ರಷ್ಟು ಮತ ಜನ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸೋತ ತಕ್ಷಣ ಸಿದ್ದರಾಮಯ್ಯ ಬೆಲೆ ಏರಿಕೆ ಮಾಡಿದ್ದಾರೆ. ಜನರ ವಿರುದ್ಧ ದ್ವೇಷದ ನಿರ್ಧಾರ ತೆಗೆದುಕೊಂಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳದ್ದೂ ಜವಾಬ್ದಾರಿ ಇದೆ ಎಂದರು.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ಕಿಡಿ
ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಹೆಚ್ಡಿ ಕುಮಾರಸ್ವಾಮಿ, ವಿ ಸೋಮಣ್ಣ ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಭಾಗಿಯಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ನ ಎಲ್ಲ ಸಂಸದರು, ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Sat, 22 June 24