ನವದೆಹಲಿ, ಸೆಪ್ಟೆಂಬರ್ 26: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು I.N.D.I.A ಮೈತ್ರಿಕೂಟದ ಒತ್ತಡಕ್ಕೆ ಮಣಿದು ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಮಂಗಳವಾರ ಆರೋಪಿಸಿದ್ದಾರೆ. ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (DMK) ಇಲ್ಲದೆ ಕಾಂಗ್ರೆಸ್ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ತಿಳಿದಿದ್ದರಿಂದ ಸಿದ್ದರಾಮಯ್ಯ ಸರ್ಕಾರ ನೀರು ಬಿಡುಗಡೆ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.
ರೋಜ್‌ಗಾರ್ ಮೇಳ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, ‘ಕಾಂಗ್ರೆಸ್ ಯಾವ ರಾಜಕೀಯ ಒತ್ತಡಕ್ಕೆ ಮಣಿದಿದೆಯೋ ಆ ರಾಜಕೀಯ ಒತ್ತಡ ಕರ್ನಾಟಕದ ಜನರ ಮೇಲೆ ಪರಿಣಾಮ ಬೀರಲು ಬಿಜೆಪಿ ಬಿಡುವುದಿಲ್ಲ ಮತ್ತು ಪ್ರಬಲ ಹೋರಾಟ ನಡೆಸಲಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಯಾವುದೇ ರಾಜಕೀಯ ಪಕ್ಷದ ಜತೆ ಸಮಾಲೋಚನೆ ನಡೆಸದೆ ಕಾವೇರಿ ನೀರು ಬಿಡುಗಡೆ ಮಾಡಿದೆ. ಸರ್ಕಾರವು ಈ ವಿಷಯದ ಬಗ್ಗೆ ಸರ್ವಪಕ್ಷ ಸಮಾಲೋಚನೆ ನಡೆಸಲಿಲ್ಲ ಎಂದು ಚಂದ್ರಶೇಖರ್ ದೂರಿದ್ದಾರೆ.
ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ, ಯಾರು ಏನಂದ್ರು?
ನಮ್ಮ ರೈತರು ಮತ್ತು ನಾಗರೀಕರ ಹಕ್ಕುಗಳಿಗಾಗಿ ನಾವು ಹೋರಾಟ ನಡೆಸಲಿದ್ದೇವೆ ಎಂದು ಕರ್ನಾಟಕದ ಬಿಜೆಪಿ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕದ ಜನರ ಹಿತಾಸಕ್ತಿಗೆ ಅಡ್ಡಿಯಾಗಲು ಅವಕಾಶವಾದಿ ರಾಜಕಾರಣಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆಕೊಟ್ಟಿದ್ದ ಬೆಂಗಳೂರು ಬಂದ್ ಶಾಂತಿಯುತವಾಗಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ