ಬಿಎಸ್​ಪಿಯಿಂದ ಅಮಾನತಾಗಿದ್ದ 6 ರೆಬೆಲ್ ಶಾಸಕರು, ಓರ್ವ ಬಿಜೆಪಿ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

| Updated By: ಸುಷ್ಮಾ ಚಕ್ರೆ

Updated on: Oct 30, 2021 | 4:41 PM

2020ರ ಅಕ್ಟೋಬರ್‌ನಲ್ಲಿ ರಾಜ್ಯಸಭೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ರಾಮ್‌ಜಿ ಗೌತಮ್ ಅವರನ್ನು ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದ ನಂತರ 6 ಬಂಡಾಯ ಶಾಸಕರನ್ನು ಬಿಎಸ್​ಪಿಯಿಂದ ಮಾಯಾವತಿ ಅಮಾನತು ಮಾಡಿದ್ದರು. ಆ 6 ಶಾಸಕರು ಮತ್ತು ಓರ್ವ ಬಿಜೆಪಿ ಶಾಸಕ ಎಸ್​ಪಿಗೆ ಸೇರ್ಪಡೆಗೊಂಡಿದ್ದಾರೆ.

ಬಿಎಸ್​ಪಿಯಿಂದ ಅಮಾನತಾಗಿದ್ದ 6 ರೆಬೆಲ್ ಶಾಸಕರು, ಓರ್ವ ಬಿಜೆಪಿ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಸಮಾಜವಾದಿ ಪಕ್ಷಕ್ಕೆ ಸೇರಿದ ಬಿಎಸ್​ಪಿ, ಬಿಜೆಪಿಯ 7 ಶಾಸಕರು
Follow us on

ಲಕ್ನೋ: ಬಿಎಸ್​ಪಿಯಿಂದ ಅಮಾನತಾಗಿದ್ದ 6 ರೆಬೆಲ್ ಶಾಸಕರು ಹಾಗೂ ಓರ್ವ ಬಿಜೆಪಿ ಶಾಸಕ ಇಂದು ಸಮಾಜವಾದಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಖಿಲೇಶ್ ಯಾದವ್ ಹರಿಹಾಯ್ದ ಬೆನ್ನಲ್ಲೇ 7 ರೆಬೆಲ್ ಶಾಸಕರು ಸಮಾಜವಾದಿ ಪಕ್ಷ (ಎಸ್​ಪಿ)ಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಅಧಿಕಾರದಿಂದ ಜನರು ಎಷ್ಟು ಬೇಸತ್ತು ಹೋಗಿದ್ದಾರೆಂದರೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಹೇಳ ಹೆಸರಿಲ್ಲದಂತೆ ಅಳಿಸಿ ಹಾಕಲಿದ್ದಾರೆ. ಹಾಗೇ, ಬಿಜೆಪಿ ಪರಿವಾರ ಸದ್ಯದಲ್ಲೇ ಬಾಗ್ತಾ ಪರಿವಾರ (ಓಡಿಹೋದ ಕುಟುಂಬ)ವಾಗಲಿದೆ ಎಂದು ಅಖಿಲೇಶ್ ಯಾದವ್ ಲೇವಡಿ ಮಾಡಿದ್ದಾರೆ.

ಸೀತಾಪುರದ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗೇ, ಬಿಎಸ್​ಪಿಯಿಂದ ಅಮಾನತಾಗಿದ್ದ ರೆಬೆಲ್ ಶಾಸಕರಾದ ಅಸ್ಲಂ ರೈನಿ (ಶ್ರಾವತಿ), ಸುಷ್ಮಾ ಪಟೇಲ್ (ಮದಿಯಾಹೊನ್), ಅಸ್ಲಾಂ ಅಲಿ (ಹಾಪುರ್), ಹಕೀಮ್ ಲಾಲ್ ಬಿಂದ್ (ಹಂಡಿಯಾ), ಮುಜ್ತಾಬಾ ಸಿದ್ದಿಕಿ (ಫೂಲ್‌ಪುರ್) ಮತ್ತು ಹರಗೋವಿಂದ್ ಭಾರ್ಗವ (ಸಿಧೌಲಿ) ಇಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರೆಲ್ಲರೂ ಮುಂಬರುವ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ರಾಜ್ಯಸಭೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ರಾಮ್‌ಜಿ ಗೌತಮ್ ಅವರನ್ನು ನಾಮನಿರ್ದೇಶನ ಮಾಡುವುದನ್ನು ವಿರೋಧಿಸಿದ ನಂತರ 6 ಬಂಡಾಯ ಶಾಸಕರನ್ನು ಬಿಎಸ್​ಪಿಯಿಂದ ಮಾಯಾವತಿ ಅಮಾನತು ಮಾಡಿದ್ದರು. ಆ ರೆಬೆಲ್ ಶಾಸಕರು ಇಂದು ಎಸ್‌ಪಿಗೆ ಸೇರ್ಪಡೆಗೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದ ಅವರು ಎಸ್​ಪಿಗೆ ಸೇರ್ಪಡೆಯಾಗುವ ಸುಳಿವು ನೀಡಿದ್ದರು.

ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಬಿರುಸಿನಿಂದ ಸಾಗುತ್ತಿರುವ ಮತದಾನ

Hangal, Sindgi Bypoll Voting: ಇಂದು ಹಾನಗಲ್, ಸಿಂದಗಿ ಉಪಚುನಾವಣೆಗೆ ಮತದಾನ