ಈಗ ಉತ್ತರ ಪ್ರದೇಶದತ್ತ ನೋಡಿ: ಬಿಜೆಪಿ ನಾಯಕರ ಪಕ್ಷಾಂತರಕ್ಕೆ ಶರದ್​ ಪವಾರ್ ವ್ಯಂಗ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 13, 2022 | 10:19 PM

ಮುಂದಿನ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿಯ ಹಲವು ಸಚಿವರು ಮತ್ತು ಶಾಸಕರು ಹೊರಹೋಗುತ್ತಿದ್ದಾರೆ.

ಈಗ ಉತ್ತರ ಪ್ರದೇಶದತ್ತ ನೋಡಿ: ಬಿಜೆಪಿ ನಾಯಕರ ಪಕ್ಷಾಂತರಕ್ಕೆ ಶರದ್​ ಪವಾರ್ ವ್ಯಂಗ್ಯ
ಎನ್​ಸಿಪಿ ನಾಯಕ ಶರದ್ ಪವಾರ್
Follow us on

ಮುಂಬೈ: ಕೇವಲ 15 ದಿನಗಳ ಮೊದಲಿನವರೆಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದೇ ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಪರಿಸ್ಥಿತಿ ಬದಲಾಗಿದೆ. ಪ್ರತಿದಿನ ಒಬ್ಬರಲ್ಲ ಒಬ್ಬ ನಾಯಕ ಕೇಸರಿ ಪಾಳಯದಿಂದ ದೂರವಾಗುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮೊದಲು ಬಿಜೆಪಿಯ ಹಲವು ಸಚಿವರು ಮತ್ತು ಶಾಸಕರು ಹೊರಹೋಗುತ್ತಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರ ಹೇಳಿಕೆ ಮಹತ್ವ ಪಡೆದಿದೆ.

ಮೂವರು ಸಚಿವರೂ ಸೇರಿ, ಬಿಜೆಪಿಯ ಎಂಟು ಬಿಜೆಪಿ ಶಾಸಕರು ಕಳೆದ ಮೂರು ದಿನಗಳಲ್ಲಿ ರಾಜೀನಾಮೆ ನೀಡಿದ್ದಾರೆ. ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು 15 ದಿನಗಳ ಹಿಂದೆ ಬಿಜೆಪಿ ನಾಯಕರು ಘಂಟಾಘೋಷವಾಗಿ ಹೇಳುತ್ತಿದ್ದರು. ಆದರೆ ಪರಿಸ್ಥಿತಿ ಈಗ ಹೇಗಿದೆ ಎಂದು ಪ್ರಶ್ನಿಸಿದರು. ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದವರೂ ಈಗ ಬಿಜೆಪಿ ಬಿಡುತ್ತಿದ್ದಾರೆ. ಇದು ಉತ್ತರ ಪ್ರದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಇದೇ ವಿದ್ಯಮಾನ ಕಂಡು ಬರುತ್ತಿದೆ ಎಂದು ಪವಾರ್ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಶರದ್ ಪವಾರ್ ಬೆಂಬಲಿಸಿದ್ದಾರೆ. ಗೋವಾ ಸೇರಿದಂತೆ ಭಾರತದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಇದೇ ಚಿತ್ರಣ ಕಂಡುಬರುತ್ತಿದೆ ಎಂದು ಹೇಳಿದರು. ದೇಶದಲ್ಲಿ ಇಂಥ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಮೂಲಕ ಬಿಜೆಪಿಗೆ ಆಗಬಹುದಾದ ಸಂಭಾವ್ಯ ಹಿನ್ನಡೆಯನ್ನು ಸೂಚಿಸಿದರು.

ಬಿಜೆಪಿಗೆ ಜನಸಾಮಾನ್ಯರ ಬಗ್ಗೆ ಯಾವುದೇ ಆಲೋಚನೆಯಿಲ್ಲ. ಅದರ ಆಲೋಚನೆಯೇ ಬೇರೆ. ರಾಜಕಾರಣದಲ್ಲಿ ಏರಿಳಿತ ಸಹಜ. ಒಮ್ಮೊಮ್ಮೆ ಇಂಥ ಏರಿಳಿತಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತವೆ. ಆದರೆ ಒಮ್ಮೆ ಸಾಮಾನ್ಯ ಜನರು ತೀರ್ಮಾನ ಮಾಡಿದರೆ ಉನ್ನತ ಹಂತದಲ್ಲಿರುವ ವ್ಯಕ್ತಿ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕೆಳಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಉತ್ತರ ಪ್ರದೇಶ ವಿಧಾನಸಭೆಯ 13 ಸದಸ್ಯರು ಸಮಾಜವಾದಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಈ ವಾರದ ಆರಂಭದಲ್ಲಿ ಶರದ್ ಪವಾರ್ ಹೇಳಿದ್ದರು.

ಉತ್ತರ ಪ್ರದೇಶದ ಪ್ರಮುಖ ಒಬಿಸಿ ನಾಯಕರಾದ ದಾರಾ ಸಿಂಗ್ ಚೌಹಾನ್, ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಮ್ ಸಿಂಗ್ ಸೈನಿ ಸಹ ಇತ್ತೀಚೆಗೆ ಬಿಜೆಪಿ ತೊರೆದಿದ್ದರು. ಗೋವಾ ಸಚಿವರಾದ ಮೈಕೆಲ್ ಲೊಬೊ ಮತ್ತು ಬಿಜೆಪಿ ಶಾಸಕ ಪ್ರವೀಣ್ ಝಂಟ್ಯಾ ಸಹ ಇತ್ತೀಚೆಗೆ ಪಕ್ಷವನ್ನು ತೊರೆದಿದ್ದರು. ಕಳೆದ ತಿಂಗಳು ಬಿಜೆಪಿ ಶಾಸಕ ಅಲಿನಾ ಸಲ್ಡಾನಾ ಆಮ್ ಆದ್ಮಿ ಪಾರ್ಟಿಗೆ ಸೇರಿದ್ದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಮುಂದಿನ ಎರಡು ತಿಂಗಳ ಅವಧಿಯಲ್ಲಿ ಏಳು ಹಂತಗಳಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಗೋವಾ ಚುನಾವಣೆಯು ಫೆಬ್ರುವರಿ 14ರಂದು ನಡೆಯಲಿದೆ.