ಬೆಂಗಳೂರು, ಆಗಸ್ಟ್ 12: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ ಅದರ ಮಜವೇ ಬೇರೆ ಇರುತ್ತೆ. ನನ್ನ ಅನುಭವ ಬಳಸಿಕೊಳ್ಳುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಮಾಜಿ ಸಚಿವ ವಿ.ಸೋಮಣ್ಣ (V Somanna) ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬೇಡಿಕೆ ಇಟ್ಟಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾದರಿಯಲ್ಲೇ ಬಿಜೆಪಿಯಲ್ಲೂ 2 ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಲಿ. ಆ ಮೂಲಕ ನಾವು ಹಾಗೇ ಕೆಲಸ ಮಾಡಬಹುದು. ನನಗೆ ಅವಕಾಶ ನೀಡಿದರೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗಿಂತ ವೇಗವಾಗಿ ಕೆಲಸ ಮಾಡುತ್ತೇನೆ. ಸದ್ಯ ಹೈಕಮಾಂಡ್ ಅಂಗಳದಲ್ಲಿ ಬಾಲ್ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನೂರಾರು ನಾಯಕರು ಇದ್ದಾರೆ. ಕಾರ್ಯಾಧ್ಯಕ್ಷರ ಮೂಲಕ ಕಾಂಗ್ರೆಸ್ನವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆಯಿಂದ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ನಾವು ಅನುಭವಿಸಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಂಪಣ್ಣ ಹೇಳಿರುವುದೆಲ್ಲಾ ಸತ್ಯ ಎನ್ನುತ್ತಿದ್ದರು. ಈಗ ಯಾಕೆ ಕೆಂಪಣ್ಣ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದರು.
ಇದನ್ನೂ ಓದಿ: ಬೊಮ್ಮಾಯಿ ಕಾಲದ ಬೇಕಾಬಿಟ್ಟಿ ಕಾಮಗಾರಿಗೆ ಹಣಕಾಸು ಇಲಾಖೆಯೇ ಒಪ್ಪಿರಲಿಲ್ಲ: ಜಗದೀಶ್ ಶೆಟ್ಟರ್ ಸಿಡಿಗುಂಡು!
ಈಗ ಕಮಿಷನ್ ಆರೋಪ ನಾವು ಮಾಡುತ್ತಿಲ್ಲ. ಗುತ್ತಿಗೆದಾರರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಚಲಿತರಾಗಬಾರದು. ಉಪಮುಖ್ಯಮಂತ್ರಿ ಸ್ಥಾನದಿಂದ ಇನ್ನೊಂದು ಹೆಜ್ಜೆ ಮುಂದೆ ಹೋಗೋದಿದೆ ಎಂದು ಹೇಳಿದರು.
ಗುತ್ತಿಗೆದಾರರ ಬಿಲ್ ಹಿಡಿದುಕೊಳ್ಳುವುದು ಬೇಡ. ಡಿ.ಕೆ.ಶಿವಕುಮಾರ್ ನನಗೆ ಬೇಕಾದಂತಹ ವ್ಯಕ್ತಿ. ಹಿಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತಾ ನಾನೇ ಹೇಳಿದ್ದೆ. ಆದರೆ ರಾಜಕೀಯ ಬೇರೆ, ಅವರನ್ನು ಬೇರೆಯವರಿಗೆ ಹೋಲಿಸಲ್ಲ. ಗುತ್ತಿಗೆದಾರರ ಕಾಮಗಾರಿ ಬಿಲ್ ತಡೆಹಿಡಿಯುವುದು ಬೇಡ ಎಂದರು.
ಇದನ್ನೂ ಓದಿ: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಬೆಂಕಿ ಪ್ರಕರಣ: ಬೆಂಜೀನ್ನಿಂದ ದುರಂತ ಸಂಭವಿಸಿರಬಹುದು: ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಬೆಂಕಿ ಪ್ರಕರಣವಾಗಿ ಪ್ರತಿಕ್ರಿಯೆ ನೀಡಿದ್ದು, ನನ್ನ ಪ್ರಕಾರ ಇದೊಂದು ಆಕಸ್ಮಿಕವಾಗಿ ನಡೆದಿರುವ ಘಟನೆ. ಆದರೆ ಡಿಕೆ ಶಿವಕುಮಾರ್ ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರ, ಅಧಿಕಾರ ಎಂದಿಗೂ ಶಾಶ್ವತವಲ್ಲ. ನಾನು ನಿಮಗೆ ನೀತಿ ಪಾಠ ಹೇಳೋದಕ್ಕೆ ಬಂದಿಲ್ಲ.
ಗುತ್ತಿಗೆದಾರರಿಗೆ ಯಾವ ಜಾತಿ, ಪಕ್ಷವೂ ಇಲ್ಲ. ಗುತ್ತಿಗೆದಾರರು ಎಲ್ಲರೂ ತಪ್ಪಿತಸ್ಥರು ಅಂದ್ದರೆ ನಾನು ಒಪ್ಪುವುದಿಲ್ಲ. ಗುತ್ತಿಗೆದಾರರ ಸಂಕಷ್ಟದ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು. ಗುತ್ತಿಗೆದಾರರನ್ನು ಒಂದೇ ಅಳತೆಗೋಲಿನಲ್ಲಿ ನೋಡಬೇಡಿ. ಅಧಿಕಾರ ಎಂದಿಗೂ ಶಾಶ್ವತ ಅಲ್ಲ. ಸದನದೊಳಗೆ ಮಾತಾಡಬೇಕಾದ ನಾನೀಗ ಹೊರಗೆ ಮಾತಾಡುತ್ತಿದ್ದೇನೆ. ಅದೆಲ್ಲ ಪ್ರಕೃತಿ ನಿಯಮ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:57 pm, Sat, 12 August 23