ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನಿಂತರೂ ಜನರು ಸೋಲಿಸುತ್ತಾರೆ: ಬಸವರಾಜ ರಾಯರೆಡ್ಡಿ

ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಪತ್ರ ಸಮರ ಸಾರಿದ್ದ ಸ್ವಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ, ಔತಣಕೂಟ ಏರ್ಪಡಿಸಿದ್ದರು. ಆ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ನಡುವೆ, ತಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ನಿಂತರೂ ಜನರು ಸೋಲಿಸುತ್ತಾರೆ: ಬಸವರಾಜ ರಾಯರೆಡ್ಡಿ
ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: Rakesh Nayak Manchi

Updated on:Aug 12, 2023 | 5:07 PM

ಕೊಪ್ಪಳ, ಆಗಸ್ಟ್ 12: ರಾಜ್ಯ ಸರ್ಕಾರದ ವಿರುದ್ಧವೇ ಪತ್ರ ಸಮರ ಸಾರಿದ್ದ ಯಲಬುರ್ಗಾ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy), ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ತಾಲೂಕಿನಲ್ಲಿ ಔತಣಕೂಟ ಏರ್ಪಡಿಸಿದ್ದರು. ಆ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ರಾಯರೆಡ್ಡಿ, ತಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಸ್ಪರ್ಧಿಸಿದರೂ ಜನರು ನನ್ನನ್ನು ಸೋಲಿಸುತ್ತಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನಾನು ಆಯೋಜಿಸಿದ ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಈ ಹಿಂದೆಯೂ ಔತಣಕೂಟ ಆಯೋಜನೆ, ಇದರಲ್ಲೇನು ವಿಶೇಷತೆ ಇಲ್ಲ ಎಂದು ಹೇಳಿದ ರಾಯರೆಡ್ಡಿ, ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಬಹುಶಃ ಇದೇ ನನ್ನ ಕೊನೆ ಚುನಾವಣೆಯಾಗಬಹುದು. ಇಂದಿನ ರಾಜಕಾರಣ ನನಗೆ ಒಗ್ಗುವುದಿಲ್ಲ, ಚುನಾವಣೆ ವ್ಯವಸ್ಥೆ ಸರಿ ಇಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ಜನರು ನನ್ನನ್ನು ಸೋಲಿಸುತ್ತಾರೆ ಎಂದರು.

ಇದನ್ನೂ ಓದಿ: ನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ, ಅವರಪ್ಪಂದಿರ ಜೊತೆ ಕೆಲಸ ಮಾಡಿದವ ನಾನು; ಬಸವರಾಜ ರಾಯರೆಡ್ಡಿ ಕಿಡಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್​ಡಿಬಿ) ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಬಗ್ಗೆ ಮಾತನಾಡಿದ ರಾಯರೆಡ್ಡಿ, ಕೆಕೆಆರ್​ಡಿಬಿ ಅಧ್ಯಕ್ಷ ಆಗಲು ನನಗೆ ಆಸಕ್ತಿ ಇರಲಿಲ್ಲ. ಅಜಯ್ ಸಿಂಗ್ ಅಧ್ಯಕ್ಷರಾಗಲಿ ಎಂದು ನಾನೇ ಬರೆದುಕೊಟ್ಟಿದ್ದೆ. ಅಲ್ಲದೆ, ಸಮಿತಿಯ ಎಲ್ಲಾ ಸದಸ್ಯರ ಹೆಸರನ್ನು ನಾನೇ ಶಿಫಾರಸು ಮಾಡಿದ್ದೇನೆ. ಅಜಯ್ ಸಿಂಗ್ ಒಳ್ಳೆಯ ವ್ಯಕ್ತಿ, ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಒಳ್ಳೆಯದಾಗಿದೆ ಎಂದರು.

ಕರ್ನಾಟಕ ಭ್ರಷ್ಟ ರಾಜ್ಯವಾಗುತ್ತಿದೆ: ಬಸವರಾಜ ರಾಯರೆಡ್ಡಿ

ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪ ಮಾಡಿದ ವಿಚಾರವಾಗಿ ಮಾತನಾಡಿದ ರಾಯರೆಡ್ಡಿ, ಈ ಹಿಂದೆ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆಂದು ಆರೋಪ ಮಾಡಿದ್ದರು. ಇವಾಗ 15 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕರ್ನಾಟಕ ಭ್ರಷ್ಟ ರಾಜ್ಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯದ ಮಾನ ಮರ್ಯಾದೆ ಹಾಳಾಗುತ್ತಿದೆ. ಇದರ ಬಗ್ಗೆ ನನಗೂ ನೋವಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಕೆಲಸ ಮಾಡಬೇಕು‌. ಮುಖ್ಯಮಂತ್ರಿ ಅವರು ವಿರೋಧ ಪಕ್ಷದವರನ್ನು ಕರೆದು ಮಾತಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Sat, 12 August 23