ದೇಶಕ್ಕೂ ಸೋನಿಯಾ, ರಾಹುಲ್ ಗಾಂಧಿಗೂ ಏನು ಸಂಬಂಧ? ಡಿಕೆಶಿಗೆ ತಿರುಗೇಟು ನೀಡಿದ ಈಶ್ವರಪ್ಪ
ಸಾವರ್ಕರ್ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ದೇಶಕ್ಕೂ ಸೋನಿಯಾ, ರಾಹುಲ್ ಗಾಂಧಿಗೂ ಏನು ಸಂಬಂಧ ಎಂದು ಕೆ.ಎಸ್.ಈಶ್ವರಪ್ಪ ಅವರು ಪ್ರಶ್ನಿಸಿದ್ದಾರೆ.
ಬಾಗಲಕೋಟೆ: ಬೆಳಗಾವಿ ಸುವರ್ಣ ವಿಧಾನಸೌಧ (Belagavi Suvarna Vidhana Soudha)ದಲ್ಲಿ ವೀರ ಸಾವರ್ಕರ್ (Veer Savarkar) ಭಾವಚಿತ್ರ ಹಾಕುವ ವಿಚಾರದಲ್ಲಿ ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ವೀರ ಸಾವರ್ಕರ್ ಮತ್ತು ಕರ್ನಾಟಕಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ದೇಶಕ್ಕೂ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi)ಗೂ ಏನು ಸಂಬಂಧ ಎಂದು ಡಿಕೆಶಿಯವರನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಸೋನಿಯಾಗಾಂಧಿ ವಿದೇಶದಿಂದ ಬಂದವರು ಎಂದು ಹೇಳಿದರು.
ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಸೋನಿಯಾ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ರಾಹುಲ್ ಗಾಂಧಿ ಅನುಭವಿಸಿದ್ದಾರಾ? ಡಿ.ಕೆ.ಶಿವಕುಮಾರ್ ಮತ್ತು ಅವರ ಶಿಷ್ಯಂದಿರಿಗೆ ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲು ಗೊತ್ತು. ಇವರೆಲ್ಲಾ ವ್ಯಯಕ್ತಿಕವಾಗಿ ಮಾಡಿದಂತರ ರಾಷ್ಟದ್ರೋಹಿ ಚಟುವಟಿಕೆಗಳಿಗಾಗಿ ಜೈಲು ಸೇರಿದರು. ಆದರೆ ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಸೇರಿದರು ಎಂದರು.
ಇದನ್ನೂ ಓದಿ: ನನ್ನನ್ನು ಸಂಪುಟಕ್ಕೆ ಯಾಕೆ ತೆಗೆದುಕೊಂಡಿಲ್ಲ ಅಂತ ರಾಜ್ಯದ ಜನತೆಗೆ ಸಿಎಂ ಉತ್ತರಿಸಲಿ: ಕೆ.ಎಸ್.ಈಶ್ವರಪ್ಪ
ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಇತಿಹಾಸ ತಿಳಿದುಕೊಳ್ಳುವ ಪ್ರಯತ್ನ ಮಾಡಲಿ. ಏಕೆಂದರೆ ವೀರ ಸಾವರ್ಕರ್ ಅವರು ಅಂಡಮಾನ್ನ ಜೈಲಿನಲ್ಲಿ ಹಲವು ವರ್ಷಗಳ ಕಾಲ ಕಠಿಣ ಶಿಕ್ಷೆ ಅನುಭಿವಿಸಿದರು. ಅವರ ಇತಿಹಾಸ ತಿಳಿದುಕೊಳ್ಳುವ ಪ್ರಯತ್ನ ಡಿಕೆಶಿ ಹಾಗೂ ಸ್ನೇಹಿತರು ಮಾಡಲಿ ಎಂದರು.
ವೀರ ಸಾವರ್ಕರ್ ಬಗ್ಗೆ ಮಾತಾಡಿರುವುದು ಇಡೀ ರಾಜ್ಯ ಮತ್ತು ದೇಶದ ಜನರಿಗೆ ಕಾಂಗ್ರೆಸ್ ಮೇಲೆ ಅಸಹ್ಯ ಹುಟ್ಟುತ್ತಿದೆ. ಆ ರೀತಿ ಅವರು ನಡೆದುಕೊಳ್ಳುತ್ತಿದ್ದಾರೆ. ನಾನು ಕೇಳಲಾ ವಾಪಸ್? ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇವರೆಲ್ಲರಿಗೆ ಈ ದೇಶಕ್ಕೂ ಏನು ಸಂಬಂಧ? ಅವರಿಗೂ ಈ ದೇಶಕ್ಕೆ ಸಂಬಧವೇ ಇಲ್ಲ. ಸೋನಿಯಾಗಾಂಧಿ ವಿದೇಶದಿಂದ ಬಂದ ವ್ಯಕ್ತಿ. ನಾನು ವ್ಯಯಕ್ತಿಕವಾಗಿ ಅವರನ್ನು ಟೀಕೆ ಮಾಡಲು ಇಷ್ಟವಿಲ್ಲ ಎಂದರು.
ಇದನ್ನೂ ಓದಿ: ಬಿರಿಯಾನಿ ಮಾಡೋಕೆ ಕುಕ್ಕರ್ ಕೊಂಡೊಯ್ಯುತ್ತಿದ್ದನೆಂದು ಭಾವಿಸಿದ್ರಾ ನೀವು: ಡಿಕೆಶಿಗೆ ಸಿ.ಟಿ.ರವಿ ಪ್ರಶ್ನೆ
ಇತಿಹಾಸ ನೋಡಿಕೊಂಡು ಡಿಕೆ ಶಿವಕುಮಾರ್ ಅವರು ಮಾತಾಡಲಿ. ಎಲ್ಲದಕ್ಕೂ ರಾಜಕಾರಣ ಮಾಡುವುದು ಸರಿಯಲ್ಲ, ಇದು ತುಂಬಾ ನೋವಾಗುತ್ತದೆ ನನಗೆ. ರಾಜಕಾರಣ ಮಾಡಲಿ ನಾವು ಕೂಡ ಮಾಡುತ್ತೇವೆ, ಇಲ್ಲ ಅಂತಲ್ಲ. ಇಂದಿರಾ ಗಾಂಧಿಯವರನ್ನು ಪಾಕಿಸ್ತಾನ ಭಾರತ ಯುದ್ದ ಸಮಯದಲ್ಲಿ ವಾಜಪೇಯಿಯವರು ದುರ್ಗೆ ಅಂತ ಕರೆದರು. ದೇಶದ ಸಂಕಷ್ಟದ ಸಮಯದಲ್ಲೂ ಇಂದಿರಾ ಗಾಂಧಿಯನ್ನು ಹೊಗಳಿದ್ದರು. ಅದೇ ಇಂದಿರಾ ಗಾಂಧಿಯವರು ವಾಜಪೇಯಿ, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ ನಾಯಕರನ್ನು ತುರ್ತು ಪರಿಸ್ಥಿತಿ ತಂದು ಜೈಲು ಸೇರಿಸಿದರು, ಅದನ್ನು ಬಿಜೆಪಿ ವಿರೋಧಿಸಿತು. ಯಾವ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು ಎಂಬ ಕಲ್ಪನೆ ಕಾಂಗ್ರೆಸ್ಗೆ ಇಲ್ಲ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ