ಬೆಂಗಳೂರು: ಕರ್ನಾಟಕದಲ್ಲಿ ವೀರಶೈವ ಲಿಂಗಾಯತ (Veerashaiva Lingayat) ಪ್ರಬಲ ಸಮುದಾಯವಾಗಿದ್ದು, ಟಿಕೆಟ್ ಹಂಚಿಕೆ ವಿಚಾರವಾಗಿ ಸಾಕಷ್ಟು ಲಾಬಿ ನಡೆಯುತ್ತಿದೆ. ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದು, ಇನ್ನೇನು ಕೆಲವೆ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಿದೆ. ಆದರೆ ಈ ಬಾರಿ ಟಿಕೆಟ್ ಹಂಚಿಕೆ ಕಾಂಗ್ರೆಸ್ಗೆ ತೆಲೆನೋವಾಗಿ ಪರಿಣಮಿಸಿದೆ. ಕಳೆದ ಬಾರಿಗಿಂತ ಈ ಬಾರಿ ಜಾತಿವಾರು ಟಿಕೆಟ್ ಹಂಚಿಕೆಗೆ ಭಾರಿ ಬೇಡಿಕೆ ಇದೆ. ಒಕ್ಕಲಿಗರು, ವೀರಶೈವ ಲಿಂಗಾಯತರು, ದಲಿತರು, ಹಿಂದುಳಿದ ವರ್ಗದವರು ಹೀಗೆ ಎಲ್ಲ ಪ್ರಬಲ ಸಮುದಾಯದವರು ನಮ್ಮ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಇದೇ ಟಿಕೆಟ್ ವಿಚಾರವಾಗಿ ವೀರಶೈವ ಲಿಂಗಾಯತ ಯುವ ವೇದಿಕೆ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲು ರೆಡಿಯಾಗುತ್ತಿದ್ದು, ಪ್ರಜಾಧ್ವನಿ ಯಾತ್ರೆ ಮಾಡಲು ತೀರ್ಮಾನ ಮಾಡಿಕೊಂಡಿದೆ.
ಹೌದು ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಟಿಕೆಟ್ ಬೇಡಿಕೆ ಇಟ್ಟಿರುವ ಲಿಂಗಾಯತ ಸಮುದಾಯ, ಬೇಡಿಕೆ ಈಡೇರುವ ಸ್ಪಷ್ಟ ಭರವಸೆ ಸಿಗದ ಹಿನ್ನಲೆ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಕಾಂಗ್ರೆಸ್ ವಿರುದ್ಧ ಪ್ರಜಾಧ್ವನಿ ಮಾದರಿಯಲ್ಲೇ ಪ್ರತಿಧ್ವನಿ ಯಾತ್ರೆ ಮಾಡಲು ತೀರ್ಮಾನ ಮಾಡಿಕೊಂಡಿದೆ. ಅಲ್ಲದೇ ಟಿಕೆಟ್ ಕೊಡದ ಜಿಲ್ಲೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಧ್ವನಿ ಯಾತ್ರೆ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್ಗೆ ತೆಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಜಾತಿವಾರು ಟಿಕೆಟ್ ಲಾಬಿ ಶುರು, ಯಾವ ಸಮುದಾಯ ಎಷ್ಟು ಟಿಕೆಟ್ಗೆ ಬೇಡಿಕೆ?
ಈ ಸಂಬಂಧ ಜಯನಗರದಲ್ಲಿ ಈಗಾಗಲೇ ಬಸ್‌ವೊಂದನ್ನ ರೆಡಿ ಮಾಡಿಸಲಾಗುತ್ತಿದ್ದು, ಚಾಮರಾಜನಗರ, ಮೈಸೂರು, ಬೆಂಗಳೂರು, ಹಾಸನ ಭಾಗದಲ್ಲಿ ಲಿಂಗಾಯತರಿಗೆ ಟಿಕೆಟ್ ಬೇಕು ಎಂದು ಸಮುದಾಯ ಒತ್ತಾಯ ಮಾಡುತ್ತಿದ್ದು, ಇಲ್ಲದಿದ್ದರೆ ಪಕ್ಷದ ವಿರುದ್ಧವಾಗಿ ರಣಕಹಳೆ ಊದಲು ತಯಾರಿ ನಡೆಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಎಂಎಲ್ಸಿ ಪುಟ್ಟಣ್ಣ ರಾಜಾಜಿನಗರದ ಕ್ಷೇತ್ರದ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಪುಟ್ಟಣ ಕಾಂಗ್ರೆಸ್ ಸೇರ್ಪಡೆಯಿಂದ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿದೆ. ಇನ್ನು ಚಿಕ್ಕಪೇಟೆ ಕ್ಷೇತ್ರಲ್ಲದಲ್ಲಿಯೂ ಗಂಗಾಬಿಕೆ ಮಲ್ಲಿಕಾರ್ಜುನ್ ಲಿಂಗಾಯತ ಸಮುದಾಯದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಟಿಕೆಟ್ ನೀಡುವ ಬಗ್ಗೆ ರಾಜ್ಯ ನಾಯಕರು ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಹೀಗಾಗಿ ಕೈ ನಾಯಕರ ವರ್ತನೆಗೆ ಬೇಸತ್ತು, ಕಾಂಗ್ರೆಸ್ ವಿರೋಧಿ ಪ್ರಚಾರಕ್ಕೆ ವೀರಶೈವ ಸಮುದಾಯ ಅಣಿಯಾಗುವ ಸಾಧ್ಯತೆ ಇದೆ.
ವೀರಶೈವ ಲಿಂಗಾಯತ ಕರ್ನಾಟಕದಲ್ಲಿ ಪ್ರಬಲ ಸಮುದಾಯ ಎನಿಸಿಕೊಂಡಿದೆ. ಕೆಲ ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ 70 ಟಿಕೆಟ್ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮನವಿ ಮಾಡಿದೆ. ಕಳೆದ ಅಂದರೆ 2028ರ ವಿಧಾನಸಭೆ ಚುನಾವಣೆಯಲ್ಲಿ 40ಕ್ಕೂ ಹೆಚ್ಚು ಟಿಕೆಟ್ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಇದೀಗ ಮಹಾಸಭೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾಗಿ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯದ ನಾಯಕರು ಬೆಂಗಳೂರಿನಲ್ಲಿ ಸಭೆ ಮಾಡಿದ್ದು, ಈ ಬಾರಿ ಕನಿಷ್ಠ 70 ಟಿಕೆಟ್ ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಬಗ್ಗೆ ಲಿಂಗಾಯತ ನಾಯಕರು ರಾಜ್ಯ ಚುನಾವಣೆ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿದ್ದಾರೆ. ಇನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕ್ರಪ್ಪ ಕಾಂಗ್ರೆಸ್ ಶಾಸಕ ಮತ್ತು ಪ್ರಬಲ ನಾಯಕರಾಗಿದ್ದು ಮೌನ ಮುರಿಯುತ್ತಿಲ್ಲ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:39 pm, Mon, 13 March 23