
ಭಾರತದ ಮುಂದಿನ ಉಪರಾಷ್ಟ್ರಪತಿಯನ್ನು(Vice-President) ಆಯ್ಕೆ ಮಾಡಲು ಚುನಾವಣೆ ಅಗತ್ಯವಿದ್ದಲ್ಲಿ ಆಗಸ್ಟ್ 6 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ದಿನಾಂಕ ಪ್ರಕಟಿಸಿದೆ. 2022 ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಅದೇ ದಿನ ಮತ ಎಣಿಕೆ ಕೂಡ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನಾಮನಿರ್ದೇಶನಕ್ಕೆ ಜುಲೈ 17 ಕೊನೆಯ ದಿನಾಂಕ ಎಂದು ಆಯೋಗ ತಿಳಿಸಿದೆ.ಎರಡೂ ಸದನಗಳ ಸಂಸದರು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು(M. Venkaiah Naidu)ಅವರ ಅಧಿಕಾರಾವಧಿಯು ಆಗಸ್ಟ್ 10, 2022 ರಂದು ಕೊನೆಗೊಳ್ಳುತ್ತಿದೆ. “ಭಾರತದ ಸಂವಿಧಾನದ 68 ನೇ ವಿಧಿಯ ಪ್ರಕಾರ, ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿಯ ಅಧಿಕಾರದ ಅವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿ ಸ್ಥಾನವನ್ನು ತುಂಬುವುದಕ್ಕಾಗಿ ಉಪರಾಷ್ಟ್ರಪತಿಯವರ ಅವಧಿ ಮುಗಿಯುವ ಮೊದಲು ಚುನಾವಣೆ ಅಗತ್ಯವಿದೆ” ಎಂದು ಆಯೋಗ ಹೇಳಿದೆ.
ಪ್ರಮುಖ ದಿನಾಂಕಗಳು
ಚುನಾವಣಾ ಆಯೋಗ ಅಧಿಸೂಚನೆ ಪ್ರಕಟ: ಜುಲೈ 5,2022
ನಾಮಪತ್ರ ಸಲ್ಲಿಕೆ: ಜುಲೈ 19 2022
ನಾಮಪತ್ರ ಪರಿಶೀಲನೆ: ಜುಲೈ 20 2022
ನಾಮಪತ್ರ ಹಿಂಪಡೆಯಲಿರುವ ದಿನಾಂಕ: ಜುಲೈ 22, 2022
ಚುನಾವಣಾ ದಿನಾಂಕ: ಆಗಸ್ಟ್ 6, 2022
ಮತದಾನ – ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಗೆ
ಮತ ಎಣಿಕೆ: ಆಗಸ್ಟ್ 6, 2022
Published On - 4:21 pm, Wed, 29 June 22