ಬ್ರೇಕ್ ಇಲ್ಲದ ಗಾಡಿಯಂತಾದ ಯತ್ನಾಳ್-ನಿರಾಣಿ ಟಾಕ್ ಫೈಟ್, ಇಂದು ಕೂಡ ಮುಂದುವರಿದ ಟೀಕಾ ಪ್ರಹಾರ

| Updated By: Rakesh Nayak Manchi

Updated on: Jan 15, 2023 | 8:51 PM

ವಿಜಯಪುರ ನಗರ ಶಾಸಕ ಯತ್ನಾಳ್ ಹಾಗೂ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಮಧ್ಯದ ಪೈಟ್ ಬ್ರೇಕ್ ಇಲ್ಲದ ವೆಹಿಕಲ್ ನಂತಾಗಿದೆ. ನಿರಾಣಿ ಯತ್ನಾಳ್ ಮಧ್ಯದ ಜಟಾಪಟಿ ಇಂದೂ ಸಹ ಮುಂದುವರೆದಿದೆ.

ಬ್ರೇಕ್ ಇಲ್ಲದ ಗಾಡಿಯಂತಾದ ಯತ್ನಾಳ್-ನಿರಾಣಿ ಟಾಕ್ ಫೈಟ್, ಇಂದು ಕೂಡ ಮುಂದುವರಿದ ಟೀಕಾ ಪ್ರಹಾರ
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ
Follow us on

ವಿಜಯಪುರ: ಸಾಮಾನ್ಯವಾಗಿ ರಾಜಕಾರಣದಲ್ಲಿ ಒಂದು ಪಕ್ಷ ನಾಯಕರನ್ನು ಮತ್ತೊಂದು ಪಕ್ಷದ ನಾಯಕರು ಪ್ರಶ್ನೆ ಮಾಡುವುದು, ಅವರ ಮೇಲೆ ಆರೋಪ ಮಾಡುವುದು ನಡೆಯತ್ತದೆ. ಆದರೆ ಪ್ರಸಕ್ತ ರಾಜಕರಾಣದಲ್ಲಿ ಅದರಲ್ಲೂ ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಒಂದೇ ಪಕ್ಷದ ಇಬ್ಬರು ನಾಯಕರು ಮದಗಜಗಳಂತೆ ಜಗಳ ಮಾಡುತ್ತಿರುವುದು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸಭ್ಯತೆಯ ರಾಜಕಾರಣಕ್ಕೆ ಕೆಸರು ಎರಚಿದಂತಾಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಹಾಗೂ ಕೈಗಾರಿಕಾ ಸಚಿವ ಮುರಗೇಶ ನಿರಾಣಿ (Murugesh Nirani) ಮಧ್ಯದ ಪೈಟ್ ಬ್ರೇಕ್ ಇಲ್ಲದ ವೆಹಿಕಲ್ ನಂತಾಗಿದೆ. ನಿರಾಣಿ ಯತ್ನಾಳ ಮಧ್ಯದ ಜಟಾಪಟಿ ಇಂದೂ ಸಹ ಮುಂದುವರೆದಿದೆ.

ಪಂಚಮಸಾಲಿ ಮೀಸಲಾತಿ ವಿಚಾರ ಇಬ್ಬರ ನಾಯಕರ ಬಿಗ್ ಪೈಟ್​​ಗೆ ವೇದಿಕೆಯಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ಯತ್ನಾಳ್, ಕಾಶಪ್ಪನವರ ಹಾಗೂ ಇತರ ನಾಯಕರು ದೊಡ್ಡ ಮಟ್ಟದ ಹೋರಾಟ ಮಾಡಿಕೊಂಡು ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮತ್ತೊಂದೆಡೆ ಹರಿಹರ ಪೀಠದ ಸ್ವಾಮೀಜಿ, ಸಚಿವರಾದ ನಿರಾಣಿ, ಸಿ.ಸಿ ಪಾಟೀಲ್ ಸೇರಿದಂತೆ ಇತರರು ಮತ್ತೊಂದು ಆಯಾಮದಲ್ಲಿ ಇದೇ ಮೀಸಲಾತಿಗಾಗಿ ಹೋರಾಟ ಮಾಡಿದ್ದಾರೆ.

ಯಾವಾಗ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಒಕ್ಕಲಿಗರಿಗೆ 2ಸಿ ಹಾಗೂ ವೀರಶೈವ ಲಿಂಗಾಯತರಿಗೆ 2ಡಿ ಮೀಸಲಾತಿ ನೀಡುವುದಾಗಿ ಘೋಷನೆ ಮಾಡಿತೋ ಆಗ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಕೂಡಲಸಂಗಮ ಸ್ವಾಮೀಜಿ ನಿರಾಣಿ ಹಾಗೂ ಕಾಶಪ್ಪನವರ ಸೇರಿದಂತೆ ಒಂದು ಭಾಗದ ನಾಯಕರಿಗೆ ಇರಿಸು ಮುರಿಸು ಉಂಟಾಗಿತ್ತು. ಜೊತೆಗೆ ವೀರಶೈವ ಲಿಂಗಾಯತ ಸಮುದಾಯದವರಿಗೆ 2ಡಿ ಮೀಸಲಾತಿ ಘೋಷಣೆ ವೇಳೆ ಮುಖ್ಯಮಂತ್ರಿ ಜೊತೆಗೆ ಸಚಿವ ಮುರುಗೇಶ ನಿರಾಣಿ, ಸಿ.ಸಿ ಪಾಟೀಲ್ ಜೊತೆಗಿದ್ದದ್ದು ತುಪ್ಪಕ್ಕೆ ಬೆಂಕಿ ಸುರಿದಂತಾಗಿತ್ತು. ಇದೇ ಸಿಟ್ಟಲ್ಲಿ ಶಾಸಕ ಯತ್ನಾಳ್ ಮತ್ತೇ ಇದೇ ಮೀಸಲಾತಿ ವಿಚಾರದಲ್ಲಿ ತೀವ್ರ ಹೋರಾಟ ಆರಂಭಿಸಿದರು. ಮುಖ್ಯಮಂತ್ರಿ ಆದಿಯಾಗಿ ಇತರೆ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ಶಾಸಕ ಯತ್ನಾಳ್​ ವಿರುದ್ಧ ಯತ್ನಾಳ್ ಭಾಷೆಯಲ್ಲೇ ವಾಗ್ದಾಳಿ ನಡೆಸಿದ ಸಚಿವ ಮುರುಗೇಶ್ ನಿರಾಣಿ ಸಹೋದರ

ಯಾವಾಗ ಯತ್ನಾಳ್ ತಮ್ಮ ವಿರುದ್ಧ ಮಾತನಾಡಲು ಆರಂಭಿಸಿದರೋ ಆಗ ಅಸಮಾಧಾನಗೊಂಡ ಸಚಿವ ಮುರುಗೇಶ ನಿರಾಣಿ ವಿಜಯಪುರ ನಗರದಲ್ಲಿ ಜನೇವರಿ 7ರಂದು ಸುದ್ದಿಗೋಷ್ಟಿ ನಡೆಸಿ ಯತ್ನಾಳ್ ವಿರುದ್ಧ ಕಿಡಿ ಕಾರಿದ್ದರು. ನನ್ನ ಬಗ್ಗೆ ಸಿಎಂ ಹಾಗೂ ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದರು. ಇಷ್ಟರ ಜೊತೆಗೆ ಸಿಡಿ ವಿಚಾರ ಪ್ರಸ್ತಾಪ ಮಾಡಿ ಯತ್ನಾಳ್ ಮೇಲೆ ಹರಿಹಾಯ್ದಿದ್ದರು.

ಇದಕ್ಕೆ ಅಂದೇ ತೀಕ್ಷ್ನವಾಗಿ ಪ್ರತಿಕ್ರಿಯೆ ನೀಡಿದ್ದ ಯತ್ನಾಳ್ ಅವರ ಅಪ್ಪಂಗೆ ಹುಟ್ಟಿದ್ದರೆ ಸಿಡಿ ಬಹಿರಂಗ ಮಾಡಲಿ ಎಂದು ಸವಾಲು ಹಾಕಿ ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದರ ಮುಂದುವರೆದ ಭಾಗವಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ಮತ್ತೆ ಮಾಧ್ಯಮದವರ ಮುಂದೆ ಮಾತನಾಡಿ ಯತ್ನಾಳ್ ವಿರುದ್ದ ಕಿಡಿಕಾರಿದ್ದರು. 2016 ರಲ್ಲಿ ಕಾಂತರಾಜ್ ವರದಿ ಪಂಚಮಸಾಲಿಗೆ 2ಎ ನೀಡಲು ಬರಲ್ಲ ಎಂದು ವರದಿ ನೀಡಿದ್ದರು. ಆಗ ಇವರು ಯಾರು ಮಾತಾಡಿಲ್ಲ, ಆಗ ಎಲ್ಲಿ ಮಲಗಿದ್ರಿ ನೀವು? ಎಂದು ಸ್ವಾಮಿಜಿ, ಯತ್ನಾಳ್ ಸೇರಿ ಹೋರಾಟಗಾರ ಮೇಲೆ ನಿರಾಣಿ ಹರಿಹಾಯ್ದಿದ್ದರು.

ಈಗ ಹೋರಾಟದಲ್ಲಿ ಪಕ್ಕಾ ರಾಜಕೀಯ ಮಾಡುತ್ತಿದ್ದಾರೆ. ಅಂದು ಏನು ಮಾತಾಡದವರು ಇಂದು ಹೋರಾಟ ಮಾಡುತ್ತಿದ್ದಾರೆ. ಆ ಮೂಲಕ ಲಿಂಗಾಯತರನ್ನು ಒಡೆಯುತ್ತಿದ್ದಾರೆ. ಅವನೊಬ್ಬ ಇದ್ದಾನೆ ಬಿಜಾಪುರದವನು, ಅವನು ಅಪ್ಪನಿಗೆ ಹುಟ್ಟಿದವನಲ್ಲ. ಅವನು ಪಿಂಪ್ ಆಗಿ ಕೆಲಸ ಮಾಡಿದ್ದಾನೆ. ನನಗೆ ಸಂಸ್ಕೃತಿ ಇದೆ. ಇನ್ನು ನಾಲಿಗೆ ಹರಿಬಿಟ್ಟರೆ ನಾಲಿಗೆ ಕತ್ತರಿಸ್ತೇನೆ. ಕುಮಾರ್ ಅಂತ ಡ್ರೈವರ್ ಇದ್ದ ಆತನ ಕೊಲೆ ಆಗಿದೆ. ಅದು ಯಾಕೆ ಆಯ್ತು ಹೇಗೆ ಆಯ್ತು? ಅದನ್ನು ಮಾಧ್ಯಮದವರು ಪತ್ತೆ ಹಚ್ಚಬೇಕೆಂದು ಹೇಳುವ ಮೂಲಕ ನಿರಾಣಿ ಇದಕ್ಕೆ ಯತ್ನಾಳ್ ಕಾರಣವೆಂದಿದ್ದರು. ಅಪ್ಪನಿಗೆ ಹುಟ್ಟಿದವಾದರೆ ಪಾರ್ಟಿ ಬಿಟ್ಟು ಮಾತಾಡು ಎಂಬತ್ಯಾದಿಯಾಗಿ ಯತ್ನಾಳ್​ಗೆ ನಿರಾಣಿ ಅವಾಜ್ ‌‌‌‌ಹಾಕಿದ್ದರು.

ಯಾವಾಗ ಸಚಿವ ಮುರಗೇಶ ನಿರಾಣಿ ತಮ್ಮ ಮೇಲೆ ವಾಗ್ದಾಳಿ ನಡೆಸಿದ್ದ ದಿನ ನಿನ್ನೆ ಯತ್ನಾಳ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲಾ. ಆದರೆ ಇಂದು ತಮ್ಮ ವಿರುದ್ಧ ಸಚಿವ ಮುರುಗೇಶ ನಿರಾಣಿ ಮಾತನಾಡಿದ್ದು, ಕಾರು ಚಾಲಕ ಸಾವಿನ ಬಗ್ಗೆ ಹಾಗೂ ಸಾವಿಗೆ ಯತ್ನಾಳ್ ಕಾರಣವೆಂದು ಹೇಳಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಿರಾಣಿ ಹೇಳಿಕೆ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ. ನಿರಾಣಿ ಹೇಳಿಕೆ ವಿಚಾರವನ್ನು ಚಾಲಕನ ಸಾವಿ ಕುರಿತು ಸಿಬಿಐ ತನಿಖೆ ನಡೆಸುವಂತೆ ಸಿಎಂ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ನಾಲಿಗೆ ಹರಿದು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸವಾಗುತ್ತದೆ : ಯತ್ನಾಳ್​ಗೆ, ಮುರುಗೇಶ್ ನಿರಾಣಿ ಖಡಕ್ ಎಚ್ಚರಿಕೆ

ವಿಜಯಪುರದ ಯಾವುದೋ ಕಾರು ಚಾಲಕನ ಬಗ್ಗೆ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಆರೋಪದಿಂದ ಸರ್ಕಾರದ ಬಗ್ಗೆ ತಪ್ಪು ಸಂದೇಶ ಬರುತ್ತದೆ. ದೇಶದ ಜನತೆಗೆ ಇದರ ಬಗ್ಗೆ ಸತ್ಯಾಸತ್ಯತೇ ಗೊತ್ತಾಗಬೇಕಿದೆ. 24 ಗಂಟೆಯ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಯತ್ನಾಳ್ ಪತ್ರದಲ್ಲಿ ಉಲ್ಲೇಖಿಸಿದ್ಧಾರೆ. ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆಯೂ ಪತ್ರದ ಮೂಲಕ ಯತ್ನಾಳ್ ಆಗ್ರಹ ಮಾಡಿದ್ದಾರೆ.

ನಗರದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ನಡೆದ ಫಲಪುಷ್ಟ ಪ್ರದರ್ಶನ ಉದ್ಘಾಟನೆ ಬಳಿಕ ಮಾತನಾಡಿದ ಯತ್ನಾಳ ನಿರಾಣಿ ವಿರುದ್ಧ ಸಮಾಧಾನದಿಂದಲೇ ಮಾತನಾಡಿ ಮದ್ದು ಅರೆದರು. ಕ್ಯಾಬಿನೆಟ್ ದರ್ಜೆಯ ಸಚಿವ ಯಾವುದೋ ಒಬ್ಬ ಕಾರ್ ಚಾಲಕನ ಕೊಲೆಯಾಗಿದೆ ಎಂದು ಮಾತನಾಡಿದ್ದಾರೆ. ಸಚಿವರ ಆರೋಪ ಕುರಿತು ಸಿಬಿಐ ತನಿಖೆ ಮಾಡಬೇಕೆಂದು ಸಿಎಂ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ. ಸಿಬಿಐ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕು. ಕ್ಯಾಬಿನೆಟ್ ದರ್ಜೆಯ ಸಚಿವ ಬೇಜವಾಬ್ದಾರಿಯಾಗಿ ಮಾಧ್ಯಮದ ಮುಂದೆ ಹೇಳಲು ಅವಕಾಶವಿಲ್ಲ ಕಾರಣ, ಈ ಕುರಿತು ಸಿಬಿಐ ತನಿಖೆ ನಡೆಸುವಂತೆ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಈ ಹಿಂದೆ ಬಿಜೆಪಿ ಪಕ್ಷದ ಸರ್ಕಾರದಲ್ಲಿ ಸಚಿವನಾಗಿದ್ದವನ ಕೊಲೆಗೆ ಯತ್ನಾಳ್ ಸುಪಾರಿ ನೀಡಿದ್ದಾರೆಂದು ಆರೋಪ ಮಾಡಿದ್ದರು. ನಗರದ ಶಾಪೇಟೆಯ ಯುವಕರಿಗೆ ಸುಪಾರಿ ನೀಡಿದ್ದಾಗಿ ಆರೋಪಿಸಿದ್ದರು. ಓರ್ವ ಪೊಲೀಸ್ ಅಧಿಕಾರಿಯ ಸಹಾಯದಿಂದ ಆ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದರು. ಸಚಿವರನ್ನ ಕೊಲೆ ಮಾಡಲು ಯತ್ನಾಳ್ ಸುಫಾರಿ ನೀಡಿದ್ದಾರೆಂದು ಹೇಳಿಕೆ ನೀಡಲು ಅವರನ್ನು ಒತ್ತಾಯಿಸಿ ಅವರ ಉಗುರುಗಳನ್ನು ಕಿತ್ತು ಹಿಂಸಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ನಂತರ ಇಡೀ ಪ್ರಕರಣವನ್ನು ಸಿಒಡಿಗೆ ತನಿಖೆಗೆ ನೀಡಲಾಗಿತ್ತು. ಸಿಒಡಿ ತನಿಖೆಯಲ್ಲಿ ನಾನು ನಿರಪರಾಧಿ ಎಂದು ಸಾಬೀತಾಗಿತ್ತು ಎಂದು ಹಿಂದಿನ ಘಟನೆ ನೆನಪಿಸಿಕೊಂಡರು. ಈಗ ಸಚಿವರು ಕಾರು ಚಾಲಕನ ಕೊಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಆರೋಪದ ಕುರಿತು ತಾಕತ್ತಿದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ಸವಾಲು ಹಾಕಿದ್ದಾರೆ. ಮುಂದಿನ 24 ಗಂಟೆ ಒಳಗೆ ಸಿಬಿಐ ತನಿಖೆಗೆ ವಹಿಸದಿದ್ದರೆ ಸಿಎಂ ಬೊಮ್ಮಾಯಿ ಅವರ ಸಚಿವ ಸಂಪುಟದ ಸಚಿವರು ಏನು ಮಾತನಾಡಿದರೂ ಗಂಭೀರ ಆರೋಪ ಮಾಡಿದರೂ ಏನೂ ಮಾಡಲ್ಲಾ ಅಂದರೆ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಹೇಳುವೆ ಎಂದು ಯತ್ನಾಳ್ ಗುಡುಗಿದರು.

ಇದೇ ವೇಳೆ ತಮ್ಮ ವಿರುದ್ಧ ಸಚಿವ ನಿರಾಣಿ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ್ ಸಮಾಧಾನದಿಂದಲೇ ಮಾತನಾಡಿದರು. ಈಗಾ ಎಲ್ಲೆಡೆ ಸಂಕ್ರಮಣ ಹಬ್ಬದ ಸಂಭ್ರಮ ಇದೆ. ಇಂದು ಒಳ್ಳೆಯ ಸುದ್ದಿಗಳನ್ನು ಮಾತನಾಡುವ ಸಂಕ್ರಮಣ. ನನಗೆ ಬಹಳ ಸಂತೋಷವಾಗಿದೆ. ನಮ್ಮ ಪಕ್ಷದ ಹೈಕಮಾಂಡ್ ಬೆಳಿಗ್ಗೆ ಕರೆ ಮಾಡಿ ಮೀಸಲಾತಿ ವಿಚಾರದಲ್ಲಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಆದ್ದರಿಂದ ನನಗೆ ಖುಷಿಯಾಗಿದೆ. ನಮ್ಮ ಬೇಡಿಕೆ ಈಡೇರಿಸಲು ಹೈಕಮಾಂಡ್ ಅಸ್ತು ಎಂದಿದೆ ಎಂದರು.

ಇದನ್ನೂ ಓದಿ: ಪಂಚಮಸಾಲಿ ಹೋರಾಟ: ಯತ್ನಾಳ್​ಗೆ ಕರೆ ಮಾಡಿ ಗುಡ್​ನ್ಯೂಸ್ ಕೊಟ್ಟ ಬಿಜೆಪಿ ಹೈಕಮಾಂಡ್

ಕಳೆದ ಎರಡು ವರ್ಷಗಳಿಂದ ಕೂಡಲಸಂಗಮ ಶ್ರೀಗಳ ತಪಸ್ಸು ಪಾದಯಾತ್ರೆಯ ಪ್ರತಿಫಲ ಇದಾಗಿದೆ. ಮಕರ ಸಂಕ್ರಮಣದ ಉತ್ತರಾಯಣದ ಶುಭ ಪ್ರಸಂಗದಲ್ಲಿ ಕೇಂದ್ರದ ನಮ್ಮ ನಾಯಕರು ನಿಲುವು ತೆಗೆದುಕೊಂಡಿದ್ದಾರೆ. ನಮಗೆ ಒಳ್ಳೆಯ ಸುದ್ದಿಯನ್ನು ಕೊಡಲಿದೆ ಎಂದಿದ್ದಾರೆ. ಇನ್ನು ನಿರಾಣಿ ವಾಗ್ದಾಳಿ ವಿಚಾರವಾಗಿ ಮಾತನಾಡಿ, ಕೆಲ ಚಿಲ್ಲರೆ ಹೇಳಿಕೆಗೆ ಚಿಲ್ಲರೆ ವ್ಯಕ್ತಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದು ಕೇಂದ್ರದ ನಾಯಕರು ಸೂಚನೆ ನೀಡಿದ್ದಾರೆ. ಎಲ್ಲ ಪಕ್ಷ ಗಮನಿಸಿದೆ ಎಂದು ಕೇಂದ್ರದ ನಾಯಕರು ಹೇಳಿದ್ದಾರೆ. ಚಿಲ್ಲರೆ ವ್ಯಕ್ತಿಗಳ ಬಗ್ಗೆ ಸಂಸ್ಕಾರ ಇಲ್ಲದ ವ್ಯಕ್ತಿಗಳ ಬಗ್ಗೆ ಇಂದು ಮಾತನಾಡಲ್ಲಾ ಎಂದು ಹೇಳಿದರು.

ಇಂದು ಹಬ್ಬವಿರುವ ಕಾರಣ‌ ಒಳ್ಳೆಯದನ್ನಾ ಮಾತನಾಡೋನಾ, ಮೀಸಲಾತಿ ವಿಚಾರದಲ್ಲಿ ಒಳ್ಳೆ ಸುದ್ದಿ ಬಂದಿದೆ. ಮೀಸಲಾತಿ ನೀಡಲು ಪಕ್ಷದ ಹೈಕಮಾಂಡ್ ಒಪ್ಪಿದೆ ಎಂದು ಯತ್ನಾಳ್ ಹೇಳಿದರು. ಆದಷ್ಟು ಬೇಗಾ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಕೇಂದ್ರ ನಾಯಕರ ಭೇಟಿಗಾಗಿ ಹೋಗುತ್ತಿದ್ದೇವೆ. ಇದೇ ಜನವರಿ 21ರಂದು ವಿಜಯಪುರಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ ಅವರು ಆಗಮಿಸುತ್ತಿದ್ದಾರೆ. ಮೀಸಲಾತಿ ವಿಚಾರವನ್ನ ಕೇಂದ್ರದ ವರಿಷ್ಠ ಮಂಡಳಿ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ದೊಡ್ಡ ಸಮುದಾಯಕ್ಕೆ ಚುನಾವಣೆ ಪೂರ್ವ ನ್ಯಾಯ ಕೊಡದಿದ್ದರೆ ಅದರ ಪರಿಣಾಮ ಏನಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಮಾಡುತ್ತಿದ್ದಾರೆ ಎಂದರು.

ಸದ್ಯ ನಿರಾಣಿ ಹೇಳಿಕೆಗೆ ತಲೆ ಕೆಡಿಸಿಕೊಳ್ಳಲ್ಲ. ಇಲ್ಲಿನ ಗ್ಯಾಂಗ್​ಗಳ ಬಗ್ಗೆ ಕೇಂದ್ರದ ನಾಯಕರಿಗೇನು ಗೊತ್ತಿಲ್ಲಾ. ಚಿಲ್ಲರಿಗಳಿಗೆ ಯತ್ನಾಳರನ್ನು ತುಳಿಯುವುದನ್ನು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಯತ್ನಾಳರನ್ನು ಯಾರು ತುಳಿಯಲಾಗಲ್ಲ, ನನ್ನ ಬೇರು ಬಹಳ ಆಳವಾಗಿವೆ, ಬಿಜೆಪಿಯ ಸಂಘಟನೆಯ ಮೂಲದಲ್ಲಿ ಯತ್ನಾಳ್ ಶಕ್ತಿ ಅಡಗಿದೆ. ಜನರಲ್ಲಿ ನಮ್ಮ ಬೇರುಗಳಿವೆ ಎಂದು ಮಾರ್ಮಿಕವಾಗಿ ನಿರಾಣಿಗೆ ಕುಟುಕಿದರು.

ನನ್ನನ್ನು ಜನರು ಬಿಡಲ್ಲ ಜನರಿದ್ದವರಿಗೆ ಲೀಡರ್ ಎಂದು ಕರೆಯುತ್ತಾರೆ. ನಿರಾಣಿ ನನ್ನ ವಿರುದ್ಧ ಮಾತನಾಡಿದ್ದರ ಕುರಿತು ಜನರು ಕಮೆಂಟ್ಸ್ ಹಾಕಿದ್ದಾರೆ. 420, ಲೂಟಿಕೋರ, ಸಮಾಜಘಾತುಕ ಎಂಬಿತ್ಯಾದಿ ಕಮೆಂಟ್ ಹಾಕಿದ್ದಾರೆ. 72 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾಗಿ ಹೇಳಿರುವ ನಿರಾಣಿಗೆ 72 ಸಾವಿರ ಜನರ ಪೈಕಿ‌ ಓರ್ವರಾದರೂ ಜನ ನಾಯಕ, ಧೀಮಂತ ನಾಯಕ‌ ಎಂದು ಕಮೆಂಟ್ ಹಾಕಿದ್ದಾರಾ ಎಂದು ಪ್ರಶ್ನಿಸಿದರು.

ಯತ್ನಾಳ್ ಪಕ್ಷ ಬಿಟ್ಟು ಹೋಗಬೇಕು ಯತ್ನಾಳಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ನಿರಾಣಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಯಾರಪ್ಪಂದು? ವಿಜಯಪುರದಲ್ಲಿ ಪಕ್ಷ ಕಟ್ಟಿದವರು ನಾವು. ಹಳ್ಳಿಯಲ್ಲಿ ಹೋಗಿ ಓರ್ವ ರೈತರನ್ನು ಕೇಳಿದರೂ ಬಿಜೆಪಿ ಕಟ್ಟಿದವರು ಯತ್ನಾಳ್ ಎಂದು ಹೇಳುತ್ತಾರೆ. ನಮ್ಮ ಯತ್ನಾಳ್ ಗೌಡಪ್ಪಾ ಪಾರ್ಟಿ ಕಟ್ಯಾನ್. ಅಂವಾ‌ ಕಮಲ ಹೂ ನಮ್ಮೂರಿಗೆ ತಂದಾವಾ ಎನ್ನುತ್ತಾರೆ. ನನಗೆ ಪಕ್ಷದಿಂದ ಹೊರ ಹಾಕುವ ತಾಕತ್ತು ಯಾರಿಗಿಲ್ಲ. ಟಿಕೆಟ್ ಸಿಗಲ್ಲಾ ಎಂಬುದಲ್ಲಾ. ನೀವು ನೋಡುವಂತಿರಿ, ಉತ್ತರಾಯನ ಇಂದು ಆರಂಭವಾಗಿದೆ. ಇನ್ನು ನಮ್ಮದು ಏರುತ್ತಾ ಹೋಗುವುದಿದೆ. ಟಿಕೆಟ್ ಬಿಡಿ ಟಿಕೆಟ್ ಕೊಡಲು ನಾವೇ ಬಂದರೂ‌ ಆಶ್ಚರ್ಯವಿಲ್ಲಾ ಎಂದು ಯತ್ನಾಳ್ ಹೇಳಿದ್ದಾರೆ.

ಇಷ್ಟರ ಮಧ್ಯೆ ಸಚಿವ ಮುರಗೇಶ ನಿರಾಣಿ ಸಹೋದರ ತಮ್ಮ ಸಂಗಮೇಶ್ ನಿರಾಣಿ ಅಣ್ಣ ಮುರುಗೇಶ್ ನಿರಾಣಿ ಪರಾವಾಗಿ ನಿಂತು ಯತ್ನಾಳಗೆ ಎಚ್ಚರಿಕೆ ನೀಡಿದ್ದಾರೆ. ಶಿಖಂಡಿ ಬಸ್ಯಾ ನಡುಬೀದಿಯಲ್ಲಿ ಬೆತ್ತಲಾಗುವ ಕಾಲ ಬಂದಿದೆ. ಬಾಯಿ ಹರುಕನಂತೆ ಮಾತನಾಡುವ ನಾಮರ್ಧ, ನಿನ್ನದೇ ಭಾಷೆಯಲ್ಲಿಯೇ ಉತ್ತರ ನೀಡುತ್ತೇನೆ. ಒಬ್ಬ ಅಪ್ಪನಿಗೆ ಹುಟ್ಟಿದ ನಿನಗೆ ಅಂತ್ಯ ಹಾಡುವ ಕಾಲ ಬಂದಿದೆ. ನೇರ ಕಾದಾಟಕ್ಕೆ ಬಂದರೆ ನಿನ್ನ ತಾಕತ್ತು ತಿಳಿಯುತ್ತದೆ. ರಾಜಕೀಯ ಮರುಜನ್ಮ ಕೊಟ್ಟವರಿಗೆ ರಾಜಕೀಯ ಮರಣ ಶಾಸನ ಬರೆಯುವುದು ಗೊತ್ತಿದೆ. ಮುರುಗೇಶ್ ನಿರಾಣಿ ತೇಜೋವಧೆಗೆ ನಿಂತ ಮುಠ್ಠಾಳರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಸಂಗಮೇಶ ನಿರಾಣಿ ಟ್ವೀಟ್ ಮಾಡಿದ್ದಾರೆ. ಇದು ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಟ್ವಿಟ್ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ವೈರಲ್ ಆಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ