ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮತ್ತೆ ಹೆಚ್ಚಳ; ‘ನಾ ನಾಯಕಿ ಸಮಾವೇಶ’ದಲ್ಲಿ ಸಿದ್ದರಾಮಯ್ಯ
ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮಹಿಳೆಯರಿಗೆ ರಾಜಕೀಯದಲ್ಲಿ ಶೇ 33 ಮೀಸಲಾತಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಬೆಂಗಳೂರು: ಬಿಜೆಪಿಯವರು (BJP) ಮಹಿಳೆಯರ ಪರವಾಗಿಲ್ಲ. ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಮಹಿಳೆಯರ ಪರವಾಗಿ ಯೋಜನೆಗಳನ್ನು ನೀಡಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದರು. ಬೆಂಗಳೂರಿನ ಅರಮನೆ ಮೈದಾನದ ಮುಖ್ಯದ್ವಾರ ಬಳಿ ಕಾಂಗ್ರೆಸ್ ಆಯೋಜಿಸಿರುವ ‘ನಾ ನಾಯಕಿ’ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಇವತ್ತು ದೊಡ್ಡದಾಗಿ ಜಾಹೀರಾತು ನೀಡಿದೆ. ಇವರು ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಲ್ಲಿ ಮಹಿಳಾ ಪರ ಯೋಜನೆಗಳನ್ನು ನೀಡಿಲ್ಲ. ನಾವು ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದೇವೆ. ನಾವು ಈ ಭರವಸೆ ನೀಡಿದ ಬಳಿಕ ಬಿಜೆಪಿಯವರಿಗೆ ಈಗ ಎಚ್ಚರವಾಗಿದೆ. ಅವರು ನೀಡಿದ ಭರವಸೆಗಳ ಪೈಕಿ ಈವರೆಗೆ ಕೇವಲ 50-60ರಷ್ಟು ಮಾತ್ರ ಈಡೇರಿವೆ. ಉಳಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಬಿಜೆಪಿ ಪಕ್ಷ ಮಹಿಳೆಯರ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸುತ್ತೇವೆ; ಸಿದ್ದರಾಮಯ್ಯ
ಎಲ್ಲಿಯವರೆಗೆ ದೇಶದ ಮಹಿಳೆಯರ ಅಭಿವೃದ್ಧಿ ಆಗುವುದಿಲ್ಲವೋ, ಅಲ್ಲಿಯವರೆಗೂ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಉದ್ಯೋಗದಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿಯನ್ನು ಶೇ 30ರಿಂದ 33 ಹೆಚ್ಚಳ ಮಾಡಿದ್ದೇವೆ. ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತೇವೆ. ಮಹಿಳೆಯರಿಗೆ ರಾಜಕೀಯದಲ್ಲಿ ಶೇ 33 ಮೀಸಲಾತಿ ನೀಡುತ್ತೇವೆ. ವಿಧಾನಸಭೆ, ಪರಿಷತ್, ಲೋಕಸಭೆಯಲ್ಲಿ ಕೂಡ ಮೀಸಲಾತಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ನಾ ನಾಯಕಿ’ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮೋಟಮ್ಮ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್ ಭಾಗಿಯಾಗಿದ್ದಾರೆ. ವೇದಿಕೆ ಮುಂಭಾಗ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ.ಪಾಟೀಲ್ ಭಾಗವಹಿಸಿದ್ದಾರೆ.
ಬಿಜೆಪಿ ಟೀಕೆಗೆ ತಿರುಗೇಟು
ಪ್ರಿಯಾಂಕಾ ಗಾಂಧಿ ಅವರು ಸ್ವಯಂಪ್ರೇರಿತವಾಗಿ ನಾಯಕಿ ಎಂದು ಘೋಷಿಸಿಕೊಂಡಿಲ್ಲ. ಪ್ರತಿಯೊಬ್ಬರೂ ಮಹಿಳಾ ನಾಯಕಿಯರೇ ಎಂದು ಅವರು ಹೇಳಿದ್ದಾರೆ ಎಂದು ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ತಿಪ್ಪಾರೆಡ್ಡಿ ವಿರುದ್ಧದ ಕಮಿಷನ್ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಚಿವರು, ಶಾಸಕರು ಕಮಿಷನ್ ಪಡೆಯುವುದು ಜಗತ್ತಿಗೇ ಗೊತ್ತಿದೆ ಎಂದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Mon, 16 January 23