ಜಗತ್ತಿನೆಲ್ಲೆಡೆ ಓಮಿಕ್ರೋನ್ ವೈರಸ್ ಆತಂಕ ನಿವಾರಣೆಗೆ ದೇವರಲ್ಲಿ ಪ್ರಾರ್ಥಿಸಬೇಕು ಅಷ್ಟೇ: ಬಿವೈ ವಿಜಯೇಂದ್ರ
ಕಾಂಗ್ರೆಸ್ ಪಕ್ಷವು ಈಗಾಗಲೇ ಮುಳುಗುತ್ತಿರುವ ಹಡಗಿನ ಸ್ಥಿತಿಗೆ ಬಂದಿದೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯು ಸ್ವಂತ ಬಲದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಚಿತ್ರದುರ್ಗ: ರಾಜ್ಯ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಇದೀಗ ಸುಧಾರಿಸಿಕೊಳ್ಳುತ್ತಿದೆ. ಆರ್ಥಿಕ ಸಂಕಷ್ಟದಿಂದ ಹೊರಬರುವ ವೇಳೆಗೆ ಜಗತ್ತಿನೆಲ್ಲೆಡೆ ಓಮಿಕ್ರೋನ್ ವೈರಸ್ ಆತಂಕ ಸೃಷ್ಟಿಯಾಗಿದೆ. ಪರಿಸ್ಥಿತಿ ಬಿಗಡಾಯಿಸದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಬೇಕು ಅಷ್ಟೇ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಕಾಂಗ್ರೆಸ್ ಪಕ್ಷವು ಈಗಾಗಲೇ ಮುಳುಗುತ್ತಿರುವ ಹಡಗಿನ ಸ್ಥಿತಿಗೆ ಬಂದಿದೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯು ಸ್ವಂತ ಬಲದಿಂದ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ಗೆಲುವಿನ ಬಗ್ಗೆ ಬಿಜೆಪಿಗೆ ಆತ್ಮವಿಶ್ವಾಸವಿದೆ. ಗೆಲುವಿನ ಅಂತರ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ಯಡಿಯೂರಪ್ಪ ಅವರು ಜೆಡಿಎಸ್ ಸಹಕಾರ ಕೇಳಿದ್ದಾರೆ ಎಂದು ವಿಶ್ಲೇಷಿಸಿದರು. ಕನಿಷ್ಠ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ನಾನು ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಪಕ್ಷವು ತೀರ್ಮಾನಿಸುತ್ತದೆ. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಈ ಕೆಲಸ ತೃಪ್ತಿಕೊಟ್ಟಿದೆ ಎಂದು ಹೇಳಿದರು.
ಬಿಜೆಪಿ ಜೊತೆ ಒಪ್ಪಂದ ಇಲ್ಲ: ಎಚ್ಡಿಕೆ ಜಾತ್ಯತೀತ ಜನತಾದಳವು (ಜೆಡಿಎಸ್) ವಿಧಾನ ಪರಿಷತ್ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಆದರೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ನಮ್ಮ ಬೆಂಬಲ ಕೇಳಿರುವುದು ನಿಜ. ಕಾಂಗ್ರೆಸ್ ಈವರೆಗೆ ನಮ್ಮ ಬೆಂಬಲ ಕೋರಿಲ್ಲ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾತಿನ ಮೋಡಿ ಮಾಡಿ ದಾರಿ ತಪ್ಪಿಸುತ್ತಿದೆ. ನಮ್ಮನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಹೇಳುತ್ತಿದೆ. ಸಂಸತ್ ಚುನಾವಣೆ ವೇಳೆ ಎಂಪಿ ಚುನಾವಣೆಯಲ್ಲಿ ಯಾರು ಯಾರನ್ನು ಗೆಲ್ಲಿಸಿದರು? ಹಾಗಾದ್ರೆ ಕಾಂಗ್ರೆಸ್ ಪಕ್ಷವನ್ನು ಯಾವ ಟೀಂ ಎಂದು ಕರೆಯಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ಜೊತೆಗೆ ಜೆಡಿಎಸ್ ಒಳಒಪ್ಪಂದ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮ ಅಭ್ಯರ್ಥಿಗಳು ಆರು ಕಡೆ ಮಾತ್ರ ನಿಂತಿದ್ದಾರೆ. ಉಳಿದ 19 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ನಿಂತಿಲ್ಲ. ನಮ್ಮ ಬೆಂಬಲ ಕೋರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಸಹಕಾರ ಕೊಡಿ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದವರು ನಮ್ಮ ಬೆಂಬಲ ಕೋರಿಲ್ಲ. ಹೀಗಾಗಿ ನೀವು ಬಿಜೆಪಿಗೆ ಬೆಂಬಲ ಕೊಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಮ್ಮನ್ನು ತುಳಿಯಲು ಹೋಗಿ ಕಾಂಗ್ರೆಸ್‌ನವರೇ ಬೀಳುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವ ವಿಚಾರದ ಬಗ್ಗೆ ಇನ್ನೆರೆಡು ದಿನಗಳಲ್ಲಿ ನಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮುಂದಿನ ಚುನಾವಣೆಗೆ ರಾಜ್ಯದ ಎಲ್ಲಾ ಕ್ಷೇತ್ರದಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಸ್ವತಂತ್ರ ಸರ್ಕಾರ ತರುವ ಗುರಿ ಇರಿಸಿಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿಲ್ಲ, ಕಾಂಗ್ರೆಸ್ ನಮ್ಮ ಬೆಂಬಲ ಕೇಳಿಲ್ಲ: ಎಚ್ಡಿ ಕುಮಾರಸ್ವಾಮಿ ಇದನ್ನೂ ಓದಿ: Tripura civic polls ತ್ರಿಪುರಾದ 8 ಮುನ್ಸಿಪಲ್ ಕೌನ್ಸಿಲ್ಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಎಎಂಸಿ ಚುನಾವಣೆಯಲ್ಲಿ ಟಿಎಂಸಿಗೆ ಎರಡನೇ ಸ್ಥಾನ