ವಿಧಾನ ಪರಿಷತ್​ನಲ್ಲಿ ಪ್ರತಿಧ್ವನಿಸಿದ ದುರ್ಬಲ ಗೃಹಮಂತ್ರಿ ಆಕ್ಷೇಪ: ಕಾವೇರಿದ ಚರ್ಚೆ, ಗದ್ದಲ, ಸಭಾತ್ಯಾಗ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 20, 2021 | 7:51 PM

ಸಚಿವರು ಉತ್ತರಿಸುವ ಸಂದರ್ಭ ಕಾಂಗ್ರೆಸ್​ ಸದಸ್ಯ ಎಸ್​.ರವಿ, ‘ದುರ್ಬಲ ಗೃಹಮಂತ್ರಿ’ ಎಂದು ಆಕ್ಷೇಪಿಸಿದರು. ಗೃಹಸಚಿವರ ಬೆಂಬಲಕ್ಕೆ ಬಂದ ಆಡಳಿತ ಪಕ್ಷದ ಸದಸ್ಯರು ಈ ಹೇಳಿಕೆ ಖಂಡಿಸಿದರು.

ವಿಧಾನ ಪರಿಷತ್​ನಲ್ಲಿ ಪ್ರತಿಧ್ವನಿಸಿದ ದುರ್ಬಲ ಗೃಹಮಂತ್ರಿ ಆಕ್ಷೇಪ: ಕಾವೇರಿದ ಚರ್ಚೆ, ಗದ್ದಲ, ಸಭಾತ್ಯಾಗ
ಗೃಹ ಸಚಿವ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್
Follow us on

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧ ಮತ್ತು ಎಂಇಎಸ್​ ಸದಸ್ಯರ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್​ನಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದರು. ಸಚಿವರು ಉತ್ತರಿಸುವ ಸಂದರ್ಭ ಕಾಂಗ್ರೆಸ್​ ಸದಸ್ಯ ಎಸ್​.ರವಿ, ‘ದುರ್ಬಲ ಗೃಹಮಂತ್ರಿ’ ಎಂದು ಆಕ್ಷೇಪಿಸಿದರು. ಗೃಹಸಚಿವರ ಬೆಂಬಲಕ್ಕೆ ಬಂದ ಆಡಳಿತ ಪಕ್ಷದ ಸದಸ್ಯರು ಈ ಹೇಳಿಕೆ ಖಂಡಿಸಿದರು. ಸದನಲ್ಲಿ ಗದ್ದಲ ಹೆಚ್ಚಾಗಿ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಕೇಳಿಸದ ವಾತಾವರಣ ನಿರ್ಮಾಣವಾಯಿತು.

‘ನಾಡದ್ರೋಹಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇವರಿಗೆ ಆಗಿಲ್ಲ. ಕಾಯ್ದೆ=ಕಾನೂನು ಇರುವುದೇಕೆ? ಮೊದಲ ಘಟನೆ ವರದಿಯಾದಾಗಲೇ ದೇಶದ್ರೋಹದ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೆ ಇವತ್ತು ರಾಯಣ್ಣ ಪ್ರತಿಮೆಗೆ ಅಪಮಾನ ಆಗುತ್ತಿರಲಿಲ್ಲ’ ಎಂದು ಎಸ್.ರವಿ ಹರಿಹಾಯ್ದರು. ಗೃಹ ಸಚಿವ ಆರಗ ಬೆಂಬಲಕ್ಕೆ ಬಿಜೆಪಿ ಸದಸ್ಯರು ಬಂದರು. ಸಭಾಪತಿ ಮಧ್ಯಪ್ರವೇಶಿಸಿ ಗೃಹ ಸಚಿವರಿಗೆ ಮಾತನಾಡಲು ಅವಕಾಶ ನೀಡಿದರು.

ಸದನದಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನೆಲ, ಜಲ ಮತ್ತು ಭಾಷೆಯ ಪ್ರಶ್ನೆ ಬಂದಾಗ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವ ವ್ಯತ್ಯಾಸ ಇರುವುದಿಲ್ಲ. ನಾವೆಲ್ಲರೂ ಒಂದಾಗಿ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ 32 ಆರೋಪಿಗಳ ಬಂಧನವಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಕೆಲವರನ್ನು ಬಂಧಿಸಬೇಕಾಗಿದೆ. ಇಲ್ಲಿನ ಜನರು ಈಗಾಗಲೇ ಎಂಇಎಸ್ ತಿರಸ್ಕರಿಸಿದ್ದಾರೆ. ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಅವರಿಗೆ ಯಾವುದೇ ಭಾಷೆ, ಪ್ರಾಂತ್ಯದ ಚೌಕಟ್ಟು ಹಾಕಲು ಆಗುವುದಿಲ್ಲ. ಅವರ ಹೆಸರು ಉಪಯೋಗಿಸಿಕೊಂಡು ಇಂತಹ ಕೃತ್ಯ ನಡೆಸುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇಲ್ಲಿ ಕೆಲವರು ತಮ್ಮ ಬೆಳೆ ಬೇಯಿಸಿಕೊಳ್ಳಲು ಬರುತ್ತಾರೆ. ಅನುಮತಿ ಇಲ್ಲದಿದ್ದರೂ ಮಹಾಮೇಳ ನಡೆಸುತ್ತಾರೆ ಎಂದು ಆಕ್ಷೇಪಿಸಿದರು. ಎಂಇಎಸ್ ನಾಯಕ ದೀಪಕ್ ದಳವಿ ಮುಖಕ್ಕೆ ಮಸಿಬಳಿದ ಆರೋಪದ ಮೇಲೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ವಿಚಾರಣೆ ನಡೆಸಿ ನಂತರ ಚಾರ್ಜ್​ಶೀಟ್ ಹಾಕುವಾಗ ಪ್ರಕರಣದ ವರಸೆಯೇ ಬದಲಾಗಿರುತ್ತದೆ. ನಮ್ಮ ನಾಡಧ್ವಜ ಸುಡುತ್ತಾರೆ. ಬೆಂಗಳೂರಿನಲ್ಲಿ ಶಿವಾಜಿ ವಿಗ್ರಹದ ಮೇಲೆ ಮಸಿ ಬಳಿತಾರೆ ಎಂದು ಆಕ್ಷೇಪಿಸಿದರು.

ಕರ್ನಾಟಕದ ಗುಪ್ತಚರ ಇಲಾಖೆ ವಿಫಲವಾಗಿಲ್ಲ. ಪ್ರತಿಭಟನೆ ನಡೆಸುವುದು ಅವರ ಹಕ್ಕು. ಪುಂಡರು ಗುಂಪು ಸೇರಿದಾಗ ಪೊಲೀಸರು ಸುತ್ತುವರಿದರು. ಪೊಲೀಸರ ಮೇಲೆ ಕಲ್ಲು ಎಸೆದ ಆರೋಪದಲ್ಲಿ ಈವರೆಗೆ 32 ಜನರನ್ನು ಬಂದಿಸಲಲಾಗಿದೆ. ಇನ್ನೂ ಹಲವರನ್ನು ಬಂಧಿಸಬೇಕಿದೆ. ಇದು ಕನ್ನಡಿಗರು ಅಥವಾ ಮರಾಠಿಗರ ಗಲಾಟೆ, ಮಹಾರಾಷ್ಟ್ರ ಅಥವಾ ಕರ್ನಾಟಕ ನಡುವಿನ ಹೋರಾಟ ಅಲ್ಲ. ಇಂಥ ಕೆಲಸಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಘೋಷಿಸಿದರು

ಬೆಳಗಾವಿ ಗಡಿ ಜಿಲ್ಲೆಯಲ್ಲಿ ಸುವರ್ಣ ಸೌಧ ಕಟ್ಟಿದ ನಂತರ ಇಲ್ಲಿ ಅಧಿವೇಶನ ನಡೆಸುವ ಪರಂಪರೆ ಆರಂಭವಾಗಿದೆ. ಕೆಲ ದಿನಗ‌ಮಟ್ಟಿಗೆ ನಡೆಯುವ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ. ಅಧಿವೇಶನ ಮೂಲಕ ಈ ಭಾಗ ಬದಲಾವಣೆ ಆಗಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಈ ಹಿಂದೆ ಮಹಾಮೇಳವಕ್ಕೆ ಮಹಾರಾಷ್ಟ್ರದ ಮಂತ್ರಿಗಳು ಬಂದು ಕಿಚ್ಚು ಹಚ್ಚುವ ಭಾಷಣ ಮಾಡುತ್ತಿದ್ದರು. ಈ ಬಾರಿ ನಾವು ಯಾವುದೇ ಮೇಳಾವಕ್ಕೆ ಅವಕಾಶ ನೀಡಿಲ್ಲ. ಮಹಾರಾಷ್ಟ್ರ ಮಂತ್ರಿಗಳನ್ನು ಗಡಿಯಲ್ಲಿಯೇ ವಾಪಯ ಕಳುಹಿಸಿದ್ದೇವೆ. ರಾಷ್ಟ್ರನಾಯಕರಿಗೆ ಅವಮಾನ ಮಾಡುವ ಕೃತ್ಯ ಮಾಡಿದ ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಅಂಥವರಿಗೆ ಜೀವನದಲ್ಲಿ ಅದೊಂದು ಪಾಠ ಆಗಬೇಕು. ಆ ರೀತಿ ಕ್ರಮ ಜರುಗಿಸುತ್ತೇವೆ. ರಾಷ್ಟ್ರದ ಸಾರ್ವಭೌಮತ್ವ ಧಕ್ಕೆ ಬರಹದ ಹಾಗೆ ನೋಡಿಕೊಳ್ಳುತ್ತೇವೆ. ಸದ್ಯ ಬೆಳಗಾವಿ ವಾತಾವರಣ ತಿಳಿಯಾಗಿದೆ. ಯಾವುದೇ ಆತಂಕದ ಪರಿಸ್ಥಿತಿ ಈಗ ಇಲ್ಲ. ಪೊಲೀಸ್ ಬಂದೊಬಸ್ತ್ ಸರಿಯಾಗಿ ಮಾಡಿದ್ದೇವೆ ಎಂದರು.

ಕೋಮು ಗಲಭೆ ಆರೋಪಕ್ಕೆ ಬಿಜೆಪಿ ಆಕ್ಷೇಪ
ವಿಧಾನ ಪರಿಷತ್​ನ ಕಾಂಗ್ರೆಸ್ ಶಾಸಕ ಪ್ರಕಾಶ್ ರಾಥೋಡ್ ಅವರು ಬಿಜೆಪಿ ಆಡಳಿತದ ಅವಧಿಯಲ್ಲಿ ಕೋಮು ಗಲಭೆ ಹೆಚ್ಚು ಎಂದು ನೀಡಿದ ಹೇಳಿಕೆಯು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೋಮುಗಲಭೆ ನಡೆದಿಲ್ಲವೇ ಎಂದು ಪ್ರಶ್ನಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಇಂಥ ಆರೋಪ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರವು ಬೆಳಗಾವಿಯಲ್ಲಿ ಪುಂಡರ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆಯೇ ಎಂದು ಪ್ರಕಾಶ್ ರಾಥೋಡ್ ಪ್ರಶ್ನಿಸಿದರು. ಖಾನಾಪುರದಲ್ಲಿ ಕಿಡಿಗೇಡಿಗಳು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ್ದಾರೆ. ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿ ಮಸಿ ಬಳಿದಿದ್ದಾರೆ. ಇಂತಹ ಘಟನೆ ನಡೆಯುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಈಶ್ವರಪ್ಪ-ಮರಿತಿಬ್ಬೇಗೌಡ ವಾಗ್ಯುದ್ಧ
ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್​ನಲ್ಲಿ ಕಾವೇರಿದ ಚರ್ಚೆ ನಡೆಯಿತು. ಈ ಸಂದರ್ಭ ಸಚಿವ ಈಶ್ವರಪ್ಪ ಅವರನ್ನು ಮರಿತಿಬ್ಬೇಗೌಡ ಕೆಣಕಿದರು. ರಾಯಣ್ಣ ಬ್ರಿಗೇಡ್ ಬಗ್ಗೆ ದೇಶದಲ್ಲಿ ಅಂಬಾಸಿಡರ್ ಆಗಿದ್ದ ಈಶ್ವರಪ್ಪನೋರು ಯಾಕೆ ಸೈಲೆಂಟ್ ಆಗಿದ್ದಾರೆ ಎಂದು ಪ್ರಶ್ನಿಸಿದರು. ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಎಂಇಎಸ್ ಎನ್ನುವುದು ಮಹಾರಾಷ್ಟ್ರ ಹೇಡಿಗಳ ಸಮಿತಿ. ರಾತ್ರೋರಾತ್ರಿ ಕದ್ದುಹೋಗಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಗಂಡಸರಾಗಿದ್ರೆ ಎದುರು ಬಂದು ಇಂಥ ಕೆಲಸ ಮಾಡಲಿ. ಇವರು ಹೇಡಿಗಳು. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರಿಸಿದರು. ಸದನದಲ್ಲಿ ಸರ್ಕಾರವು ಎಂಇಎಸ್​ ಪುಂಡರ ಹಾವಳಿಯ ಬಗ್ಗೆ ಸರಿಯಾಗಿ ಉತ್ತರಿಸಿಲ್ಲ ಎಂದು ದೂರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಇದನ್ನೂ ಓದಿ: ಸೈಬರ್ ಕ್ರೈಂ ತಡೆಯಲು ವಿದೇಶದಿಂದ ಯಂತ್ರೋಪಕರಣ ತರಿಸಲಾಗಿದೆ, ತಜ್ಞರನ್ನು ನೇಮಿಸಲಾಗುತ್ತಿದೆ; ಪರಿಷತ್​ನಲ್ಲಿ ಆರಗ ಜ್ಞಾನೇಂದ್ರ ಮಾಹಿತಿ
ಇದನ್ನೂ ಓದಿ: ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್-​ ಬಿಜೆಪಿ ಜಟಾಪಟಿ: ಸದನದ ಬಾವಿಗೆ ಇಳಿದು ಪ್ರತಿಭಟಿಸಿದ ಕಾಂಗ್ರೆಸ್​ ಸದಸ್ಯರು.