ಮುಂಬೈ: ಮಹಾರಾಷ್ಟ್ರ ರಾಜಕಾರಣದ ಬಿಕ್ಕಟ್ಟು ಬಹಿರಂಗಗೊಂಡ ನಂತರ ಏಕನಾಥ್ ಶಿಂಧೆ (Eknath Sinde) ಅವರ ಹೆಸರು ದೇಶಾದ್ಯಂತ ಕೇಳಿ ಬರುತ್ತಿದೆ. ಏಕನಾಥ್ ಶಿಂಧೆ ಯಾರು ಎಂದು ಹಲವರು ಇಂಟರ್ನೆಟ್ನಲ್ಲಿ ಹುಡುಕಾಡುತ್ತಿದ್ದಾರೆ. ಶಿವಸೇನೆಯ (Shiv Sena) ಮುಂಚೂಣಿ ನಾಯಕರಾಗಿರುವ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (Maha Vikas Aghadi – MVA) ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಗುಜರಾತ್ನ ಹೊಟೆಲ್ ಒಂದಕ್ಕೆ ಶಿವಸೇನೆಯ ಹತ್ತಕ್ಕೂ ಹೆಚ್ಚು ಶಾಸಕರನ್ನು ಕರೆದೊಯ್ದ ನಂತರ ಮುಖ್ಯಮಂತ್ರಿಯ ಸಂಪರ್ಕದಿಂದ ದೂರ ಉಳಿದಿದ್ದ ಶಿಂಧೆ, ಕೆಲ ಸಮಯ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಅವರು ಪಕ್ಷದ ಕೆಲವರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದ ಥಾಣೆ ಸೇರಿದಂತೆ ವಿವಿಧೆಡೆ ಶಿವಸೇನೆಯನ್ನು ಸದೃಢಗೊಳಿಸಲು ಏಕನಾಥ್ ಶಿಂಧೆ ಶ್ರಮಿಸಿದ್ದರು. ಇಂದು ಮಧ್ಯಾಹ್ನ ಶಿಂಧೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವ ಸಾಧ್ಯತೆಯಿದೆ. ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ. ಮಹಾರಾಷ್ಟ್ರದ ಪ್ರಭಾವಿ ಸಚಿವರೂ ಆಗಿರುವ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರ ಅಯೋಧ್ಯೆ ಪ್ರವಾಸದಲ್ಲಿ ಶಿಂಧೆ ಸಹ ಇದ್ದರು.
ಮಹಾರಾಷ್ಟ್ರ ವಿಧಾನಸಭೆಗೆ ಏಕನಾಥ್ ಶಿಂಧೆ ಅವರು ನಾಲ್ಕು ಅವಧಿಗೆ ಶಿವಸೇನೆಯಿಂದ ಆಯ್ಕೆಯಾಗಿದ್ದಾರೆ. 2004, 2009, 2014 ಮತ್ತು 2019ರಲ್ಲಿ ಶಾಸಕರಾಗಿ ಗೆಲುವು ಸಾಧಿಸಿದ್ದರು. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಜನಸಾಮಾನ್ಯರ ನಡುವೆ ಏಕನಾಥ್ ಶಿಂಧೆ ಜನಪ್ರಿಯತೆ ಪಡೆದಿದ್ದಾರೆ. ಶಿವಸೇನೆಯ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಹೆಸರುವಾಸಿ. ಅವರ ಮಗ ಶ್ರೀಕಾಂತ್ ಶಿಂಧೆ ಲೋಕಸಭಾ ಸದಸ್ಯರಾಗಿದ್ದಾರೆ. ಸೋದರ ಪ್ರಕಾಶ್ ಶಿಂಧೆ ಕೌನ್ಸಿಲರ್ ಆಗಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಮುಖ್ಯ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಶಿಂಧೆ ಇತ್ತೀಚೆಗೆ ಶಿವಸೇನೆಯ ಕಾರ್ಯನಿರ್ವಹಣೆ ಬಗ್ಗೆ ಅಸಮಾಧಾನ ಹೊಂದಿದ್ದರು. ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹಲವು ಆಪ್ತರ ಬಳಿ ನೋವು ತೋಡಿಕೊಂಡಿದ್ದರು. ಶಿವಸೇನೆಯ ಭದ್ರಕೋಟೆ ಎನಿಸಿರುವ ಥಾಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಿಂಧೆ ಅವರಿಗೆ ಶಿವಸೇನೆಯ ಶಾಸಕರು ನಿಷ್ಠೆ ತೋರಿದ್ದಾರೆ.
ಪತನದ ಭೀತಿ
ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟದ ‘ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ’ ಸರ್ಕಾರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯ ಎದ್ದಿದ್ದಾರೆ. ಸುಮಾರು 17ರಿಂದ 21 ಬಂಡಾಯ ಶಾಸಕರು ಸೂರತ್ ನಗರದ ಹೊಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಏಕನಾಥ ಶಿಂಧೆ ಮೂಲಕ ಬಿಜೆಪಿಯಿಂದ ಅಪರೇಷನ್ ಕಮಲಕ್ಕೆ ಬಿಜೆಪಿ ಯತ್ನಿಸಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ಮೈತ್ರಿ ಸರ್ಕಾರಕ್ಕೆ ಈ ಬಂಡಾಯದೊಂದಿಗೆ ಪತನದ ಭೀತಿ ಎದುರಾಗಿದೆ.
ದೇಶಾದ್ಯಂತ ಕುತೂಹಲ
ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರ ಬಂಡಾಯ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, 2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಜನಾದೇಶ ಕೇಳಿದ್ದವು. ಚುನಾವಣೆ ಆದ ಮೇಲೆ ಜನಾದೇಶದ ವಿರುದ್ಧ ಅಲ್ಲಿ ಸರ್ಕಾರ ರಚನೆ ಆಗಿತ್ತು. ಇದೀಗ 2019ರ ಜನಾದೇಶಕ್ಕೆ ಮಾನ್ಯತೆ ಸಿಗುತ್ತದೆ ಎಂಬ ಭಾವಿಸಿದ್ದೇನೆ ಎಂದು ಹೇಳಿದರು. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Tue, 21 June 22