ಇಂದು ಮಧ್ಯಾಹ್ನ ಮಂಗಳೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು (PM Modi in Mangalore) ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಒಟ್ಟು 3,700 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಸಮಾವೇಶದ ಅಂಗವಾಗಿ ಮಂಗಳೂರಿಗೆ ಬಂದಿದ್ದ ಅನೇಕ ಪ್ರಭಾವೀ ನಾಯಕರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ರಾಜ್ಯಪಾಲ ಗೆಹ್ಲೋಟ್, ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಸರ್ಬಾನಂದ ಸೋನವಾಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರುಗಳು ಸಾಥ್ ನೀಡಿದರು. ಅದಾದ ಬಳಿಕ ಸಂಜೆಯ ವೇಳೆಗೆ ಪ್ರಧಾನಿ ಮೋದಿ ದೆಹಲಿಗೆ ವಾಪಸಾದರು. ವಾಪಸಾಗುವ ಮುನ್ನ ಮಂಗಳೂರಿನ ಎನ್ಎಂಪಿಎ ಹೆಲಿಪ್ಯಾಡ್ ನಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿದರು.
ಕೋರ್ ಕಮಿಟಿ ಸಭೆಯಲ್ಲಿ ಕರ್ನಾಟಕ ಬಿಜೆಪಿ ನಾಯಕರ ಜೊತೆ ಆಪ್ತ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಇನ್ನು ಮುಂದೆ ಪ್ರತಿ ತಿಂಗಳೂ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಪಕ್ಷದ ನಾಯಕರುಗಳಿಗೆ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಆಯೋಜಿಸಿ. ಪ್ರಾದೇಶಿಕವಾಗಿ ಮತ್ತು ಆಯಕಟ್ಟಿನ ಜಿಲ್ಲೆಗಳಲ್ಲಿ ಇವನ್ನು ಆಯೋಜಿಸಿ. ಸಾಮಾನ್ಯವಾಗಿ ರಾಜಕೀಯ ಸಭೆಗಳಲ್ಲಿ ಈ ರೀತಿಯ ಜೋಷ್ ಇರುತ್ತದೆ. ಆದರೆ ಇಲ್ಲಿ ಸರ್ಕಾರದ ಕಾರ್ಯಕ್ರಮದಲ್ಲಿಯೂ ಆ ಜೋಷ್ ಇತ್ತು! ಈ ಕ್ಷಣಕ್ಕೂ ನಾನು ಹೇಳುತ್ತೇನೆ ಕರ್ನಾಟಕದಲ್ಲಿ ಬಿಜೆಪಿ ಪರ ಒಲವು ಇದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಪಕ್ಷದ ರೀತಿ ರಿವಾಜುಗಳನ್ನು ನಡ್ಡಾ ನೋಡಿಕೊಳ್ಳುತ್ತಾರೆ. ನೀವು ಜನರನ್ನು ತಲುಪಿ. ನಾನು ರಾಜ್ಯಕ್ಕೆ ಬರುತ್ತೇನೆ, ನನ್ನ ಸಹಕಾರ ಇದ್ದೇ ಇದೆ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಸಭೆಯಲ್ಲಿ ಪಾಲ್ಗೊಳ್ಳಲು ತಿರುವನಂತಪುರಕ್ಕೆ ತೆರಳಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವ ಗೋವಿಂದ ಕಾರಜೋಳ ಸಾಥ್ ನೀಡಿದ್ದಾರೆ. ಮಂಗಳೂರಿನಿಂದ ವಿಶೇಷ ವಿಮಾನದಲ್ಲಿ ತೆರಳಿದ ಸಿಎಂ ಬೊಮ್ಮಾಯಿ ಅವರು ನಾಳೆ ಶನಿವಾರ ಕೋವಲಂನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಭಾವಹಿಸಲಿದ್ದಾರೆ. ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಾಳೆ ದಕ್ಷಿಣ ಭಾರತ ವಿಭಾಗೀಯ ಸಭೆ ನಡೆಯಲಿದೆ.
Published On - 6:36 pm, Fri, 2 September 22