Sign In

By signing in or creating an account, you agree with Associated Broadcasting Company's Terms & Conditions and Privacy Policy.

AK Antony: ಅನಿಲ್ ಆಂಟನಿಯ ನಿರ್ಧಾರ ತಪ್ಪು, ಇದರಿಂದ ನನಗೆ ತುಂಬಾ ನೋವಾಗಿದೆ: ಎಕೆ ಆಂಟನಿ ಪ್ರತಿಕ್ರಿಯ

ಅನಿಲ್ ಕೆ.ಆಂಟನಿ ಬಿಜೆಪಿಗೆ ಸೇರ್ಪಡೆಗೊಂಡಿರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಕೆ ಆಂಟನಿ, ಮಗನ ನಿರ್ಧಾರ ತಪ್ಪು ಎಂದು ಹೇಳಿದ್ದಾರೆ

AK Antony: ಅನಿಲ್ ಆಂಟನಿಯ ನಿರ್ಧಾರ ತಪ್ಪು, ಇದರಿಂದ ನನಗೆ ತುಂಬಾ ನೋವಾಗಿದೆ: ಎಕೆ ಆಂಟನಿ ಪ್ರತಿಕ್ರಿಯ
ಎಕೆ ಆಂಟನಿ
Follow us
ರಶ್ಮಿ ಕಲ್ಲಕಟ್ಟ
|

Updated on:Apr 06, 2023 | 6:26 PM

ತಿರುವನಂತಪುರಂ: ತಮ್ಮ ಪುತ್ರ ಅನಿಲ್ ಕೆ.ಆಂಟನಿ (Anil Antony) ಬಿಜೆಪಿಗೆ (BJP) ಸೇರ್ಪಡೆಗೊಂಡಿರುವ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎಕೆ ಆಂಟನಿ (AK Antony) ಪ್ರತಿಕ್ರಿಯಿಸಿದ್ದಾರೆ. ಅನಿಲ್ ಆಂಟನಿಯ ನಿರ್ಧಾರ ತಪ್ಪು ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಎಕೆ ಆಂಟನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾರತದ ಆಧಾರವೆಂದರೆ ಏಕತೆ ಮತ್ತು ಧಾರ್ಮಿಕ ಸಾಮರಸ್ಯ. 2014 ರ ನಂತರ,ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿತು, ಅವರು ವ್ಯವಸ್ಥಿತವಾಗಿ ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ದುರ್ಬಲಗೊಳಿಸುತ್ತಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ಬಿಜೆಪಿಯ ತಪ್ಪು ಮತ್ತು ವಿಧ್ವಂಸಕ ನಿಲುವಿನ ವಿರುದ್ಧ ಧ್ವನಿ ಎತ್ತುತ್ತೇನೆ. ಜೀವನದ ಕೊನೆಯ ದಿನಗಳಿಗೆ ಹೋಗುತ್ತಿದ್ದೇನೆ. ಇನ್ನೆಷ್ಟು ದಿನ ಬದುಕಿದರೂ ಸಾಯುವವರೆಗೂ ನಾನು ಕಾಂಗ್ರೆಸ್ ಕಾರ್ಯಕರ್ತ. ಇನ್ನು ಮುಂದೆ ಅನಿಲ್‌ಗೆ ಸಂಬಂಧಿಸಿದ ಯಾವುದೇ ಚರ್ಚೆ ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧನಿಲ್ಲ. ಇದು ಮೊದಲ ಮತ್ತು ಕೊನೆಯ ಪ್ರತಿಕ್ರಿಯೆ ಎಂದು ಎ.ಕೆ.ಆಂಟನಿ ಹೇಳಿದ್ದಾರೆ.

ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಅನಿಲ್ ಆಂಟನಿ ಅವರಿಗೆ ಬಿಜೆಪಿ ಸದಸ್ಯತ್ವ ನೀಡಿದರು. ಅನಿಲ್ ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಅವರು ದೇಶದ ಪರವಾಗಿ ನಿಲುವು ತಳೆದಾಗ ಕಾಂಗ್ರೆಸ್‌ ಪಕ್ಷ ಅವರನ್ನು ಅವಮಾನಿಸಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. ಬಿಜೆಪಿ ಹಿಂದೂಯೇತರರನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಟೀಕೆಗೆ ಉತ್ತರವಾಗಿ ಅನಿಲ್ ತಮ್ಮ ಪಕ್ಷಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ. ಬಿಬಿಸಿ ಡಾಕ್ಯುಮೆಂಟರಿ ವಿವಾದದ ನಂತರ ಅನಿಲ್ ಆಂಟನಿ ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಕನ್ವೀನರ್ ಮತ್ತು ಎಐಸಿಸಿ ಸಾಮಾಜಿಕ ಮಾಧ್ಯಮ ಸಂಯೋಜಕರಾಗಿದ್ದರು ಅನಿಲ್.  ಬಿಜೆಪಿಯತ್ತ ಅನಿಲ್ ಒಲವು ತೋರಿಸುತ್ತಾ ಮೋದಿ ವಿರುದ್ಧದ ಬಿಬಿಸಿ ಡಾಕ್ಯುಮೆಂಟರಿಯನ್ನು ಟೀಕಿಸಿದಾಗ ಕಾಂಗ್ರೆಸ್ ಅದನ್ನು ತೀವ್ರವಾಗಿ ಖಂಡಿಸಿತ್ತು. ಇದಾದ ನಂತರ ಅನಿಲ್, ಕಾಂಗ್ರೆಸ್ ಪಕ್ಷದಲ್ಲಿ ತಾವು ಹೊಂದಿದ್ದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಗುರುವಾರ ಬಿಜೆಪಿ ಸೇರಿದ ಅನಿಲ್ ಆಂಟನಿ ಇಂದು ಕಾಂಗ್ರೆಸ್ ಪಕ್ಷದವರ ಧರ್ಮ ಕೇವಲ ಒಂದು ಕುಟುಂಬಕ್ಕಾಗಿ  ಕೆಲಸ ಮಾಡಬೇಕು ಎನ್ನುವುದು. ಆದರೆ ನನ್ನ ಧರ್ಮ ಏನೆಂದರೆ ದೇಶಕ್ಕಾಗಿ ಕೆಲಸ ಮಾಡಬೇಕು ಎನ್ನುವುದು.ನಮ್ಮ ಪ್ರಧಾನಿ ದೇಶವನ್ನು ಮುಂದಿನ 25 ವರ್ಷಗಳಲ್ಲಿ ಯಾವ ರೀತಿ ಕೊಂಡೊಯ್ಯಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರಲ್ಲಿ ದೇಶದ ಜನರ ಅಭಿವೃದ್ಧಿಗಾಗಿ ಇರುವ ಸ್ಪಷ್ಟವಾದ ಗುರಿ ಇದೆ. ಬಿಜೆಪಿ ದೇಶಕ್ಕಾಗಿ ಕೆಲಸ ಮಾಡುತ್ತಿದೆ. ಅದರ ಸಮರ್ಪಕ ಅನುಷ್ಠಾನಕ್ಕೆ ಪ್ರಧಾನಿ ಮತ್ತು ಪಕ್ಷ ಬದ್ಧವಾಗಿದೆ. ಯುವಕರ ಪ್ರತಿನಿಧಿಯಾಗಿ ಪ್ರಧಾನಿಯವರ ಅಭಿಪ್ರಾಯದಂತೆ ಕೆಲಸ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ. ಬಿಜೆಪಿಯ 44 ನೇ ಸಂಸ್ಥಾಪನಾ ದಿನದಂದು, ದೇಶಕ್ಕಾಗಿ ಕೆಲಸ ಮಾಡುವ ಅವಕಾಶವನ್ನು ನೀಡಿದ ನಾಯಕತ್ವಕ್ಕೆ ಧನ್ಯವಾದಗಳು. ನರೇಂದ್ರ ಮೋದಿಯವರ ಕನಸುಗಳಿಗೆ ಹೆಗಲಾಗಿ ನಿಲ್ಲುವುದಕ್ಕೆ ಒಂದು ಅವಕಾಶ ಸಿಕ್ಕಿದೆ ಎಂದು ಅನಿಲ್ ಹೇಳಿದ್ದಾರೆ.

ಇದನ್ನೂ ಓದಿ: Anil Antony: ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆ

ನಾನು ಕಾಂಗ್ರೆಸ್‌ಗೆ ಮೋಸ ಮಾಡಿಲ್ಲ. ಕಾಂಗ್ರೆಸ್ ನವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ. ಎಕೆ ಆಂಟನಿ ಎಲ್ಲ ಪಕ್ಷದವರೂ ಗೌರವಿಸುವ ವ್ಯಕ್ತಿ.  ಹಾಗಾಗಿ ನನ್ನ ನಿರ್ಧಾರ ಅವರ ಯಶಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ರಾಜಕೀಯವು ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಎಲ್ಲರೂ ವಿಭಿನ್ನರು. ತಮ್ಮ ಕುಟುಂಬದ ಬಗ್ಗೆಯೂ ಮಾತನಾಡಿದ ಅವರು ನಾನು ಅತೀ ಹೆಚ್ಚು ಗೌರವಿಸುವ  ವ್ಯಕ್ತಿ ಅಪ್ಪ. ಅವರ ಮೇಲೆ ಗೌರವ, ಪ್ರೀತಿ ಇದ್ದೇ ಇರುತ್ತದೆ. ಆದರೆ ರಾಜಕೀಯ ನಿಲುವುಗಳೇ ಬೇರೆ. ಇದು ಕೌಟುಂಬಿಕ ಸಂಬಂಧವೇ ಬೇರೆ ಎಂದು ಅನಿಲ್ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:45 pm, Thu, 6 April 23