ಪ್ರತಾಪ್ ಸಿಂಹಗೆ ಬೈಯುವ ಭರದಲ್ಲಿ ಮೈಸೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಸರು ಬಹಿರಂಗಗೊಳಿಸಿದ ಶಾಸಕ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಬೈಯುವ ಭರದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಸರು ಬಹಿರಂಗಪಡಿಸಿದ್ದಾರೆ. ಹಾಗಾದ್ರೆ, ಪ್ರದೀಶ್ ಈಶ್ವರ್ ಹೇಳಿದಂತೆ ಸಿಎಂ ಪತ್ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ? ಪ್ರದೀಶ್ ಈಶ್ವರ್ ಹೇಳಿದ್ದೇನು? ಇಲ್ಲಿದೆ ವಿವರ

ಪ್ರತಾಪ್ ಸಿಂಹಗೆ ಬೈಯುವ ಭರದಲ್ಲಿ ಮೈಸೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಹೆಸರು ಬಹಿರಂಗಗೊಳಿಸಿದ ಶಾಸಕ
ಪ್ರದೀಪ್ ಈಶ್ವರ್
Updated By: ರಮೇಶ್ ಬಿ. ಜವಳಗೇರಾ

Updated on: Jan 11, 2024 | 4:16 PM

ಮೈಸೂರು, (ಜನವರಿ 11): ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ವಾಪಸ್ ತಂದೆಗೆ ಬಿಟ್ಟುಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯನವರು (Yathindra Siddaramaiah) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಸಂಸದ ಪ್ರತಾಪ್​ ಸಿಂಹಗೆ ಬೈಯುತ್ತಿರುವ ಭರದಲ್ಲೇ ಯತೀಂದ್ರ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಪ್ರದೀಶ್ ಈಶ್ವರ್, ಸಂಸದ ಪ್ರತಾಪ್​ ಸಿಂಹನಂತಹ ಅಯೋಗ್ಯ, ಮುಠ್ಠಾಳ ಮತ್ತೊಬ್ಬನಿಲ್ಲ. ಸಿಎಂ ಸಿದ್ದರಾಮಯ್ಯ ಬಗ್ಗೆ ಮಾತಾಡಿದ್ರೆ ಹುಷಾರ್​, ಪರಿಣಾಮ ನೆಟ್ಟಗಿರಲ್ಲ. ನಿಮ್ಮ ಬಾಯಿ ತೆವಲನ್ನು ಕಡಿಮೆ ಮಾಡಿ ಸುಮ್ಮನೆ ಇರಬೇಕು. ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ಹಾಕಿದವನಿಗೆ ಪಾಸ್ ನೀಡಿದ್ದೀರಿ. ನೀವು ದೇಶ ದ್ರೋಹಿ ಅಲ್ಲವೇ? ಈ ಬಾರಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಈ ಬಾರಿ ಮೈಸೂರು ಕ್ಷೇತ್ರದಲ್ಲಿ ಯತೀಂದ್ರ ಸಿದ್ದರಾಮಯ್ಯನೇ ಗೆಲ್ಲೋದು ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಈ ಬಾರಿ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೈಸೂರು ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ತಯಾರಿಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೊರಟ ರಾಜ್ಯ ಸಚಿವ ಸಂಪುಟ ಸದಸ್ಯರು

ಸಿಎಂ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಮೈಸೂರು ಲೋಕಸಭಾ ಕ್ಷೇತ್ರ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್‌ ಕಾರ್ಯಕರ್ತರಿಂದ ಕೇಳಿಬಂದಿದೆ. ಮತ್ತೊಂದೆಡೆ ಪಕ್ಷ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಯತೀಂದ್ರ ಅವರು ಕೂಡ ಇತ್ತೀಚೆಗೆ ಹೇಳಿದ್ದರು. ಅಲ್ಲದೇ ಯತೀಂದ್ರ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುಳಿವನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು.

ಇನ್ನು ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿ ಯಾರು ಎನ್ನುವುದೇ ಇನ್ನೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಯಾಕಂದ್ರೆ, ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್​ ಇಲ್ಲ. ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದೇ ಗೊಂದಲಮಯವಾಗಿದೆ. ಆದ್ರೆ, ಪ್ರತಾಪ್ ಸಿಂಹ ಟಿಕೆಟ್​ ಸಿಕ್ಕೇ ಸಿಗುತ್ತೆ ಮತ್ತೆ ಈ ಬಾರಿ 2 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆದ್ದೇ ಗೆಲ್ಲತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ.

ಇತ್ತ ಕಾಂಗ್ರೆಸ್​​ನಲ್ಲಿ ಲೋಕಸಭಾ ಚುನಾವಣೆಯ ತಯಾರಿಯ ಭಾಗವಾಗಿ ಈಗಾಗಲೇ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪರಿಸಿದ್ದು, 12 ರಿಂದ 14 ಮಂದಿ ಆಕಾಂಕ್ಷಿಗಳು ಟಿಕೆಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರಂತೆ. ಆದ್ರೆ, ಯತೀಂದ್ರ ಸಿದ್ದರಾಮಯ್ಯ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ. ಆದರೂ ಸಹ ಕೊನೆ ಕ್ಷಣದಲ್ಲಿ ಯತೀಂದ್ರ ಸಿದ್ದರಾಮಯ್ಯನವರೇ ಅಭ್ಯರ್ಥಿಯಾದರೂ ಅಚ್ಚರಿ ಪಡಬೇಕಿಲ್ಲ.

ಒಟ್ಟಿನಲ್ಲಿ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ ಹಾಗೂ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Thu, 11 January 24