ಶೋಭಾ ಕರಂದ್ಲಾಜೆ ಜತೆ ತೇಲಿಬಂತು ಮತ್ತೊಂದು ಹೆಸರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಒಕ್ಕಲಿಗರಿಗೋ, ಲಿಂಗಾಯತರಿಗೋ?
ರಾಜ್ಯಾಧ್ಯಕ್ಷ ಆಯ್ಕೆ ಸಂಬಂಧ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನೇಮಕಕ್ಕೆ ಬಿಜೆಪಿ ಹೈ ಕಮಾಂಡ್ ಮುಂದಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಆದ್ರೆ, ಇದೀಗ ಮತ್ತೋರ್ವ ನಾಯಕರ ಹೆಸರು ತೇಲಿಬಂದಿದೆ. ಹೀಗಾಗಿ ಹೈಕಮಾಂಡ್ ಅಂತಿಮವಾಗಿ ಒಕ್ಕಲಿಗರಿಗೆ ಮಣೆ ಹಾಕುತ್ತಾ? ಅಥವಾ ಲಿಂಗಾಯತರ ಸಮುದಾಯದ ನಾಯಕನಿಗೆ ಪಟ್ಟು ಕಟ್ಟುತ್ತಾ?
ಬೆಂಗಳೂರು, (ಅಕ್ಟೋಬರ್ 24): ಲೋಕಸಭಾ ಚುನಾವಣೆ (Loksabha Elections 2024) ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನೇಮಕಕ್ಕೆ ಬಿಜೆಪಿ ಹೈಕಮಾಂಡ್ (BJP High command) ಮುಂದಾಗಿದೆ. ಇನ್ನೇನು ಕೆಲ ದಿನಗಳಲ್ಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರನ್ನು ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡಲಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje) ಹೆಸರು ಏಕಾಏಕಿ ಮುನ್ನಲೆಗೆ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಹೌದು.. ಕಳೆದ ಎರಡು ದಿನದ ಹಿಂದೆ ದಿಢೀರ್ ಅಂತ ಬಂದ ಸುದ್ದಿ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ. ಆದ್ರೆ, ಈ ಬೆಳವಣಿಗೆಗಳ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ, ಶಾಸಕ ಬಿವೈ ವಿಜಯೇಂದ್ರ ಹೆಸರು ಸಹ ಮುನ್ನಲೆಗೆ ಬಂದಿದೆ.
ಒಕ್ಕಲಿಗ – ಲಿಂಗಾಯತ ಕಾಂಬಿನೇಷನ್ ಬಗ್ಗೆ ಚಿಂತನೆ
ಒಂದು ಕಡೆ ಮಹಿಳಾ ಮತದಾರರು, ಒಕ್ಕಲಿಗ ಮತಗಳ ಗುರಿ ಜೊತೆಗೆ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಹೈಕಮಾಂಡ್, ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಆದ್ರೆ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಬದಲಾಗಿ ಲಿಂಗಾಯಿತ ಸಮುದಾಯಕ್ಕೆ ಮಣೆ ಹಾಕುವಂತೆ ಕೆಲ ನಾಯಕರು ಹೈಕಮಾಂಡ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೈಕಮಾಂಡ್ ಒಕ್ಕಲಿಗ – ಲಿಂಗಾಯತ ಕಾಂಬಿನೇಷನ್ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಇದರಿಂದ ಲಿಂಗಾಯತ ಸಮುದಾಯದಿಂದ ವಿಜಯೇಂದ್ರ ಹೆಸರು ತೇಲಿಬಂದಿದ್ದು, ಯುವಕರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂದು ವಿಜಯೇಂದ್ರ ಆಪ್ತ ಬಳಗ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಇದನ್ನೂ ಓದಿ: ಶೋಭಾ ಕರಂದ್ಲಾಜೆಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಇದರ ಹಿಂದಿನ ಹೈಕಮಾಂಡ್ ತಂತ್ರವೇನು?
ಒಂದು ವೇಳೆ ವಿಜಯೇಂದ್ರಗೆ ಸ್ಥಾನಮಾನ ನೀಡಿದರೆ ಯಡಿಯೂರಪ್ಪ ಸಹ ಇನ್ನಷ್ಟು ಆ್ಯಕ್ಟೀವ್ ಆಗಬಹುದು. ಇದರಿಂದ ಹಳೇ ಮೈಸೂರು ಜೊತೆಗೆ ಲಿಂಗಾಯತ ಪ್ರಭಾವ ಇರುವ ಉತ್ತರ ಕರ್ನಾಟಕದಲ್ಲೂ ಪಕ್ಷಕ್ಕೆ ಅನುಕೂಲವಾಗಲಿದೆ. ಇನ್ನೊಂದು ಕಡೆ ಗಮನಿಸಿದರೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ಬಿಎಲ್ ಸಂತೋಷ್ ಬಣ ಮುನಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಿರಿಯರನ್ನು ಬಿಟ್ಟು ಕಿರಿಯರಿಗೆ ಕೊಟ್ಟರು ಎಂದು ಬಣ ರಾಜಕೀಯ ಶುರುವಾಗಿ ಪಕ್ಷಕ್ಕೆ ಹಿನ್ನಡೆಯಾಗಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಈ ಎಲ್ಲಾ ಆಯ್ಕೆಯನ್ನ ಹೈಕಮಾಂಡ್ ಸುದೀರ್ಘವಾಗಿ ಚರ್ಚೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಶೋಭಾ ಆಯ್ಕೆ ಹಿಂದಿನ ಲೆಕ್ಕಾಚಾರ ಏನು?
ಶೋಭಾ ಕರಂದ್ಲಾಜೆ ಅವರ ಕಾರ್ಯವೈಖರಿಯನ್ನು ಬಿಜೆಪಿ ಹೈಕಮಾಂಡ್ ಸಮೀಪದಿಂದ ನೋಡಿದೆ. ಇನ್ನು ಈಗಾಗಲೇ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೋಭಾ, ಕೊಟ್ಟ ಟಾಸ್ಕ್ ಅನ್ನು ಪೂರೈಸುತ್ತಾ ಬಂದಿದ್ದಾರೆ. ಇದರ ಜತೆಗೆ ಮಹಿಳೆ ಎಂಬ ಟ್ರಂಪ್ ಕಾರ್ಡ್ ಅನ್ನು ಬಳಸಬಹುದು. ಮಹಿಳಾ ರಾಜ್ಯಾಧ್ಯಕ್ಷೆಯನ್ನು ಮಾಡಿದರೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಗೆ ಸೆಡ್ಡು ಹೊಡೆದು ಮಹಿಳಾ ಮತಗಳನ್ನು ಪಕ್ಷದತ್ತ ಸೆಳೆಯಬಹುದು. ಇದರ ಜತೆಯಲ್ಲಿ ಶೋಭಾ ಹಿಂದುತ್ವದ ಫೈರ್ ಬ್ರಾಂಡ್ ಕೂಡ ಆಗಿದ್ದಾರೆ. ಇನ್ನೊಂದು ಪ್ರಮುಖ ಅಂಶ ಅಂದರೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷೆ ಮಾಡುವುದರಿಂದ ಯಾರಿಂದಲೂ ಯಾವುದೇ ತಕರಾರು ಬರುವುದಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅವರ ಬಣದವರ ವಿರೋಧವೂ ಇರುವುದಿಲ್ಲ. ಹೀಗಾಗಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಕಡಿಮೆ. ಅದರಲ್ಲೂ ಪಕ್ಷದಲ್ಲಿ ಹಿರಿಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಇವರಿಬ್ಬರ ಹೆಸರು ಮುಂಚೂಣಿಯಲ್ಲಿದ್ದು, ಅಂತಿಮವಾಗಿ ಅಳೆದು ತೂಗಿ ಹೈಕಮಾಂಡ್ ಒಕ್ಕಲಿಗರಿಗೆ ಮಣೆ ಹಾಕುತ್ತಾ? ಅಥವಾ ಲಿಂಗಾಯತ ಸಮುದಾಯಕ್ಕೆ ಜೈ ಎನ್ನುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ