ಮುಂಬೈ: ಜಾಗತಿಕ ಆರ್ಥಿಕ ಹಿಂಜರಿತದ (Global Recession) ಆತಂಕ ಮುಂದುವರಿದಿರುವ ಮಧ್ಯೆಯೇ ಭಾರತೀಯ ಷೇರುಪೇಟೆಯಲ್ಲಿ (Stock Market) ಸೋಮವಾರ ಬೆಳಿಗ್ಗೆ ವಾರದ ಆರಂಭಿಕ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬಿಎಸ್ಇ (BSE) ಬೆಳಿಗ್ಗೆ 10 ಗಂಟೆ ವೇಳೆಗೆ 73.7 ಅಂಶ ಕುಸಿದು 57,846.27 ರಲ್ಲಿ ವಹಿವಾಟು ನಡೆಸುತ್ತಿದೆ. . ಸೆನ್ಸೆಕ್ಸ್ 44.45 ಅಂಶ ಕುಸಿದು 17,141.25 ಆಗಿದೆ. ನಿಫ್ಟಿ ಮಿಡ್ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ಕ್ಯಾಪ್ 100 ಶೇಕಡಾ 0.2ರಷ್ಟು ಕುಸಿತ ದಾಖಲಿಸಿವೆ.
ಹೆಚ್ಚು ಗಳಿಕೆ ಕಂಡ ಕಂಪನಿಗಳು:
ಬಜಾಜ್ ಆಟೊ ಷೇರು ಉತ್ತಮ ಗಳಿಕೆ ದಾಖಲಿಸಿದೆ. ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 2.46 ಏರಿಕೆಯಾಗಿದೆ. ಎಸ್ಬಿಐ, ಐಸಿಐಸಿ ಬ್ಯಾಂಕ್, ಹೀರೊ ಮೋಟಾರ್ಕಾರ್ಪ್ ಷೇರುಗಳು ಗಳಿಕೆ ದಾಖಲಿಸಿದ್ದರೆ, ಜೆಎಸ್ಡಬ್ಲ್ಯೂ ಸ್ಟೀಲ್, ಅದಾನಿ ಎಂಟರ್ಪ್ರೈಸಸ್, ಅಪೋಲೊ ಹಾಸ್ಪಿಲ್ ಷೇರುಗಳು ಕುಸಿತ ಕಂಡಿವೆ. ಡಾಲರ್ ಮೌಲ್ಯ ವೃದ್ಧಿಯಾಗುತ್ತಿರುವುದು ಹಾಗೂ ರೂಪಾಯಿ ಮೌಲ್ಯದಲ್ಲಿನ ಗಣನೀಯ ಕುಸಿತ ಕೂಡ ಷೇರುಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.
ದೇಶದಲ್ಲಿ ಹಣದುಬ್ಬರ ಏರಿಕೆಯ ಮಧ್ಯೆಯೇ ಆರ್ಬಿಐ ರೆಪೊ ದರ ಮತ್ತೆ ಹೆಚ್ಚಿಸುವ ಬಗ್ಗೆ ವದಂತಿಗಳು ಹಬ್ಬಿರುವುದು ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ಸೆಪ್ಟೆಂಬರ್ 30ಕ್ಕೆ ಪ್ರಕಟಿಸಿದ್ದ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಆರ್ಬಿಐ ರೆಪೊ ದರವನ್ನು ಶೇಕಡ 0.05ರಷ್ಟು ಹೆಚ್ಚಿಸಿತ್ತು. ಇದರ ಪರಿಣಾಮ ಷೇರು ಮಾರುಕಟ್ಟೆ ಮೇಲಾಗಿತ್ತು.