ನವದೆಹಲಿ: ಹಬ್ಬದ (Festival) ಉತ್ಸಾಹದಲ್ಲಿರುವ (Diwali) ಭಾರತೀಯ ಷೇರುಪೇಟೆ (Stock Market) ಸತತ ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿದೆ. ಅಮೆರಿಕದ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ಕಂಡುಬಂದಿದೆ. ಬುಧವಾರ ಬೆಳಿಗ್ಗೆ 9.44ರ ವೇಳೆಗೆ ಸೆನ್ಸೆಕ್ಸ್ 313.17 ಅಂಶ ಚೇತರಿಸಿ 59,273.77 ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 89.05 (ಶೇಕಡಾ 0.51) ರ ಏರಿಕೆ ಕಂಡು 17,576.00ರಲ್ಲಿ ವಹಿವಾಟು ನಡೆಸಿತು.
‘ಅಮೆರಿಕದ ಮಾರುಕಟ್ಟೆಯಲ್ಲಿ ನಿನ್ನೆಯ ವಹಿವಾಟು ಸಕಾರಾತ್ಮಕವಾಗಿ ಕೊನೆಗೊಂಡಿತ್ತು. ಕಾರ್ಪೊರೇಟ್ ಗಳಿಕೆಯು ಈ ವಾರದ ವಹಿವಾಟಿಗೆ ಪೂರಕವಾಗಿ ಪರಿಣಮಿಸಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ’ ಎಂದು ಹೆಮ್ ಸೆಕ್ಯೂರಿಟೀಸ್ನ ಮುಖ್ಯಸ್ಥ, ಫಂಡ್ ಮ್ಯಾನೇಜರ್ ಮೋಹಿತ್ ನಿಗಮಗ ಹೇಳಿದ್ದಾರೆ.
ಇದನ್ನೂ ಓದಿ: Stock Market Today: ಸೆನ್ಸೆಕ್ಸ್ 550 ಅಂಶ ಚೇತರಿಕೆ, 17,486ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ
ಗೋಧಿ ಸೇರಿದಂತೆ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ದೊರೆಯಲಿದೆ. ಇದೂ ಸಹ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2023-24 ರ ಹಣಕಾಸು ವರ್ಷದಲ್ಲಿ ಎಲ್ಲಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿತ್ತು. ಪ್ರತಿ ಕ್ವಿಂಟಾಲ್‌ಗೆ 500 ರೂ.ವರೆಗೆ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು.
ದೀಪಾವಳಿ ಸೀಸನ್ನಲ್ಲಿ ಅಪೋಲೊ ಹಾಸ್ಪಿಟಲ್, ಅವೆನ್ಯೂ ಸೂಪರ್ಮಾರ್ಟ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಲಾರ್ಜ್ ಕ್ಯಾಪ್ ಷೇರುಗಳನ್ನು ಖರೀದಿಸಬಹುದು ಎಂದು ಪ್ರಭುದಾಸ್ ಲಿಲ್ಲಾಧರ್ ಬ್ರೋಕರೇಜ್ ಸಂಸ್ಥೆ ಶಿಫಾರಸು ಮಾಡಿದೆ. ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ವಿಭಾಗದಲ್ಲಿ ಅಶೋಕ್ ಲೇಲ್ಯಾಂಡ್, ಚಂಬಲ್ ಫರ್ಟಿಲೈಸರ್ಸ್ ಆ್ಯಂಡ್ ಕೆಮಿಕಲ್ಸ್, ಫೆಡರಲ್ ಬ್ಯಾಂಕ್, ಜುಬಿಲಿಯೆಂಟ್ ಇನ್ಗ್ರೇವಿಯಾ, ವಿಐಪಿ ಇಂಡಸ್ಟ್ರೀಸ್, ವೆಸ್ಟ್ಲೈಫ್ ಡೆವಲಪ್ಮೆಂಟ್ ಷೇರುಗಳನ್ನು ಸಂಸ್ಥೆ ಶಿಫಾರಸು ಮಾಡಿದೆ.
ಮಂಗಳವಾರದ ವಹಿವಾಟಿನ ಅಂತ್ಯದಲ್ಲಿ ಬಿಎಸ್ಇ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಸತತ ಮೂರನೇ ದಿನ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿತ್ತು. 175.15 ಅಂಶ ಚೇತರಿಕೆಯೊಂದಿಗೆ 17,486.95ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 am, Wed, 19 October 22